ಪ್ರತ್ಯೇಕ ಉ.ಕ. ರಾಜ್ಯದ ಕಿಚ್ಚು ಹೊತ್ತಿಸಿದ ಸಿಎಂ ಯಡಿಯೂರಪ್ಪ ಹೇಳಿಕೆ

ಮಹಾರಾಷ್ಟ್ರ ರಾಜ್ಯದ ವಿಧಾನಸಭೆ ಚುನಾವಣೆ ಪ್ರಚಾರ ಭಾಷಣದಲ್ಲಿ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಮಹಾರಾಷ್ಟ್ರದ ಗಡಿ ಗ್ರಾಮಗಳಿಗೆ ನೀರು ಹರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ ಬೆನ್ನಲ್ಲೇ ಪ್ರತ್ಯೇಕ ಉತ್ತರ ಕರ್ನಾಟಕದ ಕೂಗು ಹೊತ್ತಿಕೊಂಡಿದೆ.
ಬಿ.ಎಸ್ ಯಡಿಯೂರಪ್ಪ
ಬಿ.ಎಸ್ ಯಡಿಯೂರಪ್ಪ

ಬಾಗಲಕೋಟೆ: ಮಹಾರಾಷ್ಟ್ರ ರಾಜ್ಯದ ವಿಧಾನಸಭೆ ಚುನಾವಣೆ ಪ್ರಚಾರ ಭಾಷಣದಲ್ಲಿ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಮಹಾರಾಷ್ಟ್ರದ ಗಡಿ ಗ್ರಾಮಗಳಿಗೆ ನೀರು ಹರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ ಬೆನ್ನಲ್ಲೇ ಪ್ರತ್ಯೇಕ ಉತ್ತರ ಕರ್ನಾಟಕದ ಕೂಗು ಹೊತ್ತಿಕೊಂಡಿದೆ.

ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ನೀತಿಯಿಂದ ಬೇಸತ್ತ ಉತ್ತರ ಕರ್ನಾಟಕ ಜನತೆ ಪ್ರತ್ಯೇಕ ರಾಜ್ಯದ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಸಿದ್ದಾರೆ. ಮಾಜಿ ಸಚಿವ ಉಮೇಶ ಕತ್ತಿ ಕೂಡ ಆಗಾಗ್ಗೆ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುತ್ತಲೇ ಇದ್ದರು. ಆದರೆ ಈ ಬಾರಿಯ ಕತ್ತಿಯವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.

ಮುಖ್ಯಮಂತ್ರಿ ಬಿಎಸ್‍ವೈ ಆಪ್ತರೂ ಆಗಿರುವ ಮಾಜಿ ಸಚಿವ ಉಮೇಶ ಕತ್ತಿ ತಮ್ಮದೇ ನಾಯಕನ ವಿರುದ್ಧ ಮತ್ತು ಕೇಂದ್ರ ಸರ್ಕಾರ ವಿರುದ್ಧ ಸೆಟೆದು ನಿಂತು ಪ್ರತ್ಯೇಕ ರಾಜ್ಯದ ಕುರಿತು ಗಂಭಿರ ಹೇಳಿಕೆ ನೀಡಿರುವುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಗುರವಾಗಿ ಪರಿಗಣಿಸುವಂತಿಲ್ಲ. ಸ್ವಲ್ಪವೇ ಎಡವಿದರೂ ಸರ್ಕಾರಕ್ಕೆ ಕುತ್ತು ಎನ್ನುವ ಸ್ಥಿತಿ ಇದೆ.

ಮಹಾರಾಷ್ಟ್ರ ಪ್ರತಿವರ್ಷ ಬೇಸಿಗೆಯಲ್ಲಿ ರಾಜ್ಯದಲ್ಲಿ ಉಂಟಾಗುವ ಕುಡಿವ ನೀರಿನ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸದೇ ನದಿ ತೀರದ ಜನತೆಯ ಬದುಕಿನೊಂದಿಗೆ ಚೆಲ್ಲಾಟವಾಡುತ್ತಲೇ ಬಂದಿದೆ. ಅದು ತನ್ನ ನೀತಿಯನ್ನು ಬದಲಿಸುತ್ತಲೇ ಇಲ್ಲ. ಏನಾದರೊಂದು ನೆಪ ಹೇಳಿ ನೀರು ಬಿಡದೇ ಸತಾಯಿಸುತ್ತಲೇ ಇದೆ. ಇಂತಹ ರಾಜ್ಯಕ್ಕೆ ಕರ್ನಾಟಕ ಕೊಡಕೊಳ್ಳುವಿಕೆ ಆಧಾರದ ಮೇಲೆ ನೀರು ಬಿಡಲಿದೆ ಎಂದು ಬಿಎಸ್‍ವೈ ಹೇಳಿರುವುದು ಉತ್ತರ ಕರ್ನಾಟಕದ ಜನತೆಯಲ್ಲಿ ಆಕ್ರೋಶವನ್ನು ಹುಟ್ಟಿಹಾಕಿ ಪತ್ಯೇಕ ರಾಜ್ಯದ ಬಗ್ಗೆ ಗಟ್ಟಿಯಾಗಿ ಮಾತನಾಡುವಂತೆ ಮಾಡಿದರು.

ಕೃಷ್ಣಾ ನ್ಯಾಯಾಧೀಕರಣ ಕೃಷ್ಣಾ ಕೊಳ್ಳದ ನದಿಗಳಲ್ಲಿ ಹರಿಯುವ ನೀರನ್ನು ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶಗಳಿಗೆ ಇಂತಿಷ್ಟು ಎಂದು ಹಂಚಿಕೆ ಮಾಡಿ ಆದೇಶಿದೆ. ರಾಜ್ಯದ ಪಾಲಿಗೆ ಹಂಚಿಕೆ ಆಗಿರುವ ನೀರನ್ನು ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀಟರ್‍ನಿಂದ 524.542 ಮೀಟರ್‍ಗೆ ಹೆಚ್ಚಿಸಬೇಕಿದೆ. ಅಂದಾಗ ಮಾತ್ರ ಹಂಚಿಕೆ ನೀರನ್ನು ಬಳಕೆ ಮಾಡಲು ಸಾಧ್ಯವಾಗಲಿದೆ.

ನ್ಯಾಯಾಧೀಕರಣ ಆದೇಶದ ಹಿನ್ನೆಲೆಯಲ್ಲಿ ಹಂಚಿಕೆ ನೀರನ್ನು ಬಳಕೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕಿದೆ. ಆದರೆ ಇದುವರೆಗೂ ಕೇಂದ್ರ ಅಧಿಸೂಚನೆ ಹೊರಡಿಸುತ್ತಿಲ್ಲ. ಅಧಿಸೂಚನೆ ಹೊರಡಿಸದ ಹೊರತು ನೀರು ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರ ಕೇಂದ್ರ ಮೇಲೆ ಒತ್ತಡ ಹಾಕಬೇಕಿದೆ. ಆದರೆ ಕೇಂದ್ರದಲ್ಲೂ ಬಿಜೆಪಿ ಸರ್ಕಾರವಿದ್ದರೂ ರಾಜ್ಯದಿಂದ ಒತ್ತಡ ಹಾಕುವ ಕೆಲಸ ನಡೆಯುತ್ತಿಲ್ಲ. ಕೇಂದ್ರದಿಂದ ಅಧಿಸೂಚನೆ ಹೊರಬಿದ್ದಾಗ ಮಾತ್ರ ಬಾಗಲಕೋಟೆ, ಬೆಳಗಾವಿ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಿಗೆ ಅನುಕೂಲವಾಗಲಿದೆ.

ಇದೆ ರೀತಿ ಮಹಾದಾಯಿ ವಿಷಯದಲ್ಲೂ ರಾಜ್ಯ ಸರ್ಕಾರ ಉದಾಸೀನ ನೀತಿ ಮುಂದುವರಿಸಿದೆ. ಮಹಾದಾಯಿ ನ್ಯಾಯಾಧೀಕರಣ ಕೂಡ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಮಹಾದಾಯಿ ನದಿಯಲ್ಲಿ ನಿಮಗೆ ಇಂತಿಷ್ಟು ನೀರು ಎಂದು ಹಂಚಿಕೆ ಮಾಡಿ ಆದೇಶಿಸಿದೆ. ಆದರೆ ಈ ವಿಷಯದಲ್ಲೂ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುತ್ತಿಲ್ಲ. ಅಧಿಸೂಚನೆ ಹೊರಡಿಸುವಂತೆ ಉತ್ತರ ಕರ್ನಾಟಕದ ರೈತರು, ರೈತ ಸಂಘಟನೆಗಳು ಸೇರಿದಂತೆ ನಾನಾ ಸಂಘಟನೆಗಳು ಒತ್ತಾಯಿಸುತ್ತಲೇ ಬಂದಿವೆ. ಸದ್ಯ ಬೆಂಗಳೂರಿನಲ್ಲಿ ರೈತರು ಮಹಾದಾಯಿ ನೀರು ಬಳಕೆಗಾಗಿ ಕೇಂದ್ರ ಅಧಿಸೂಚನೆ ಹೊರಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೋರಾಟದ ಕಾವು ತೀವ್ರಗೊಂಡಿದೆ.

ಉತ್ತರ ಕರ್ನಾಟಕದ ಜನತೆಯ ಪಾಲಿಗೆ ವರದಾನವಾಗಲಿರುವ ಯೋಜನೆಗಳ ಅನುಷ್ಠಾನದತ್ತ ಗಮನ ಹರಿಸಬೇಕಾದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು “ಮಹಾ”ದಲ್ಲಿನ ಚುನಾವಣೆಯ ಹಿನ್ನೆಲೆಯಲ್ಲಿ ನೀರು ಬಿಡುಗಡೆ ಬಗ್ಗೆ ಮಾತನಾಡಿರುವುದು ಬಾಗಲಕೋಟೆ, ಬೆಳಗಾವಿ, ಧಾರವಾಡ,ಗದಗ, ವಿಜಯಪುರ ಜಿಲ್ಲೆಗಳ ಜನತೆಯಲ್ಲಿ ತೀವ್ರ ಅಸಮಾಧಾನ ಮತ್ತು ಆಕ್ರೋಶಕ್ಕೆ ಕಾರಣವಾಗಿ ಪ್ರತ್ಯೇಕ ರಾಜ್ಯದ ಧ್ವನಿ ಹುಟ್ಟಿಗೆ ಕಾರಣವಾಗಿದೆ.

ಮಹಾರಾಷ್ಟ್ರದ ಗ್ರಾಮಗಳಿಗೆ ಆಲಮಟ್ಟಿಯಿಂದ ನೀರು ಬಿಡುಗಡೆ ಮಾಡುವುದಾಗಿ ಹೇಳಿಕೆ ನೀಡುವ ಮೂಲಕ ಬಿಎಸ್‍ವೈ ಜೇನುಗೂಡಿಗೆ ಕಲ್ಲು ಹೊಡೆಯುವ ಕೆಲಸ ಮಾಡಿದ್ದಾರೆ. ಪರಿಸ್ಥಿತಿಯನ್ನು ತಣ್ಣಗಾಗಿಸುವ ನಿಟ್ಟಿನಲ್ಲಿ ಅವರು ಮಹಾದಾಯಿ ನದಿ ನೀರು ಬಳಕೆ ಮತ್ತು ಕೃಷ್ಣಾ ನ್ಯಾಯಾಧೀಕರಣ ಹಂಚಿಕೆ ಮಾಡಿರುವ ನೀರಿನ ಬಳಕೆ ಬಗ್ಗೆ ಆದ್ಯ ಗಮನ ಹರಿಸುವ ಜತೆಗೆ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳ ಕಾಳಜಿ ವಹಿಸಬೇಕಿದೆ. ಸ್ವಲ್ಪವೇ ಉದಾಸೀನ ಮಾಡಿದರೂ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕಿಚ್ಚು ಜ್ವಾಲೆಯಾಗಿ ಹೊರಹೊಮ್ಮಿದಲ್ಲಿ ಅಚ್ಚರಿ ಪಡಬೇಕಿಲ್ಲ.

- ವಿಠ್ಠಲ ಆರ್. ಬಲಕುಂದಿ
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com