ಬಡವರ ಪಾಲಿನ ಬೆಳಕು ಈ 'ಹತ್ತ ರೂಪಾಯಿ ಡಾಕ್ಟರ್'!

ವೈದ್ಯರೆಂದರೆ ಕೆಲವರಿಗೆ ಭಯ, ಕೆಲವರಿಗೆ ಆತಂಕ, ಕೆಲವರಿಗೆ ಗೌರವ, ಕೆಲವರಿಗೆ ಸಿಟ್ಟು, ಮತ್ತೆ ಕೆಲವರಿಗೆ ದೇವರು, ಇನ್ನೂ ಕೆಲವರಿಗೆ... ಯಮ! ವೈದ್ಯೋ ನಾರಾಯಣ ಹರಿ ಎಂದು ಸಂಸ್ಕೃತ ಶ್ಲೋಕಗಳು ವೈದ್ಯರನ್ನು ಬಣ್ಣಿಸುತ್ತವೆ. ಅಂದರೆ ವೈದ್ಯರು ದೇವರಿಗೆ ಸಮಾನ ಎನ್ನುವ ಅರ್ಥ ಬರುತ್ತದೆ...
ಬಡವರ ಪಾಲಿನ ಬೆಳಕು ಈ 'ಹತ್ತ ರೂಪಾಯಿ ಡಾಕ್ಟರ್'
ಬಡವರ ಪಾಲಿನ ಬೆಳಕು ಈ 'ಹತ್ತ ರೂಪಾಯಿ ಡಾಕ್ಟರ್'

ಬೆಳಗಾವಿ: ವೈದ್ಯರೆಂದರೆ ಕೆಲವರಿಗೆ ಭಯ, ಕೆಲವರಿಗೆ ಆತಂಕ, ಕೆಲವರಿಗೆ ಗೌರವ, ಕೆಲವರಿಗೆ ಸಿಟ್ಟು, ಮತ್ತೆ ಕೆಲವರಿಗೆ ದೇವರು, ಇನ್ನೂ ಕೆಲವರಿಗೆ... ಯಮ! ವೈದ್ಯೋ ನಾರಾಯಣ ಹರಿ ಎಂದು ಸಂಸ್ಕೃತ ಶ್ಲೋಕಗಳು ವೈದ್ಯರನ್ನು ಬಣ್ಣಿಸುತ್ತವೆ. ಅಂದರೆ ವೈದ್ಯರು ದೇವರಿಗೆ ಸಮಾನ ಎನ್ನುವ ಅರ್ಥ ಬರುತ್ತದೆ. ಇಂತಹದ್ದೇ ಸಾಲಿಗೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿರುವ 'ಹತ್ತ ರುಪಾಯಿ ಡಾಕ್ಟರ್' ಸೇರಿದ್ದಾರೆ. 

ರೋಗ ಬರದ ವ್ಯಕ್ತಿಯಿಲ್ಲ, ವೈದ್ಯನನ್ನು ಕಾಣದ ರೋಗಿಯಿಲ್ಲ ಎಂಬ ಮಾತನ್ನು ಕೇಳಿರಬಹುದು. ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಗೆ ತೆರಳುವ ರೋಗಿಯನ್ನು ವೈದ್ಯರು ಬ್ಯಾಂಕ್ ರೀತಿ ನೋಡುವುದೇ ಹೆಚ್ಚು. ಆದರೆ, ಬೆಳಗಾವಿಯಲ್ಲಿರುವ ಡಾ.ಅಣ್ಣಪ್ಪ ಎನ್ ಬಳಿ ಅವರು ಕಡು ಬಡತನದಲ್ಲಿರುವ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ಬಡವರ ಪಾಲಿಗೆ ಬೆಳಕಾಗಿದ್ದಾರೆ. 

ಆರ್ಥಿಕವಾಗಿ ಹಿಂದುಳಿದ ಜನರ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳುವ ಈ ವೈದ್ಯ, ಅತ್ಯಂತ ಕಡಿಮೆ ಹಣವನ್ನು ಪಡೆದು ಬಡವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಊರಿನ ಜನರು ಇವರಿಗೆ 'ಹತ್ತ ರುಪಾಯಿ ಡಾಕ್ಟರ್' ಎಂಬ ಬಿರುದು ನೀಡಿದ್ದಾರೆ. 75 ವರ್ಷ ವಯಸ್ಸಾಗಿದ್ದರೂ, ಬಡವರಿಗಾಗಿ ಅಣ್ಣಪ್ಪ ಅವರು ಆಸ್ಪತ್ರೆ ನಡೆಸುತ್ತಿದ್ದಾರೆ. ಅಣ್ಣಪ್ಪ ಅವರು ನಡೆಸುತ್ತಿರುವ ಆಸ್ಪತ್ರೆಯಲ್ಲಿ ಪ್ರತೀನಿತ್ಯ ರೋಗಿಗಳು ಸಾಲುಗಟ್ಟಿ ನಿಂತು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತೀನಿತ್ಯ ಅಣ್ಣಪ್ಪ ಅವರು 75-150 ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಇದರಲ್ಲಿ ಶೇ.50 ರಷ್ಟು ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನುಳಿದ ರೋಗಿಗಳು ಟ್ಯಾಬ್ಲೆಟ್, ಇಂಜೆಕ್ಷನ್ ಹಾಗೂ ಇನ್ನಿತರೆ ಚಿಕಿತ್ಸೆಗಳು ಸೇರಿ ರೂ.10ನ್ನು ವೈದ್ಯರಿಗೆ ನೀಡುತ್ತಾರೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೂ ಹಾಗೂ ಸಂಜೆ 4 ರಿಂದ 7.30ರವರೆಗೂ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. 

ಅಣ್ಣಪ್ಪ ಅವರಿಗೆ ಮೂರು ಸದಸ್ಯರ ತಂಡ ಸಹಾಯ ಮಾಡುತ್ತಿದೆ. ಬಡವರ ಪಾಲಿಗೆ ಬೆಳಕಾಗಿರುವ ಅಣ್ಣಪ್ಪ ಅವರೂ ಕೂಡ ಆರ್ಥಿಕ ಸಂಕಷ್ಟವನ್ನು ಎದುರಿಸಿದ್ದಾರೆ. ಹೀಗಾಗಿಯೇ ಇಂದು ಬಡವರ ಸಮಸ್ಯೆ, ಕಷ್ಟಗಳನ್ನು ಅರಿತು ನೆರವಾಗುತ್ತಿದ್ದಾರೆ. 

ತಮ್ಮ ಬಾಲ್ಯವನ್ನು ಸ್ಮರಿಸಿರುವ ಬಾಳಿಯವರು, ನಾನೂ ಕೂಡ ಆರ್ಥಿಕ ಸಂಕಷ್ಟವನ್ನು ಎದುರಿಸಿದ ವ್ಯಕ್ತಿಯೇ. ಫ್ರೀ ಬೋರ್ಡಿಂಗ್ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದೆ. ಬಳಿಕ ಕೆಲ ಜನರು ನನಗೆ ಸಹಾಯ ಮಾಡಿದರು. ನಂತರ ಹುಬ್ಬಳ್ಳಿಯ ಕೆಎಂಸಿಯಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದೆ. ಬಳಿಕ 1978ರಲ್ಲಿ ಮೈಸೂರಿನ ಇಎನ್'ಟಿಯಲ್ಲಿ ಡಿಪ್ಲೋಮಾ ಮಾಡಿದೆ. 1967ರಲ್ಲಿ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಆರೋಗ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದೆ. ಈ ವೇಳೆ ಒಳ್ಳೆಯ ದಿನಗಳನ್ನು ಕಂಡಿದ್ದೆ. 1998ರಲ್ಲಿ ನಿವೃತ್ತಿ ಪಡೆದುಕೊಂಡೆ. ಜಿಲ್ಲಾ ಸರ್ಜನ್ ಆಗಿಯೂ ಸೇವೆ ಸಲ್ಲಿಸಿದ್ದೇನೆ. ಬಡತನ ಎಂದರೇನು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಅದರ ಅನುಭವವೂ ನನಗಿದೆ. ಹಣ ಸಂಪಾದನೆ ಮಾಡಲು ನನಗೆ ಬೇರಾವುದೇ ಕಾರಣಗಳಿಲ್ಲ. ನನಗೆ ಸಮಾಧಾನದ ಜೀವನ, ಮನಸ್ಸು ಬೇಕು. ಬಡವರಿಗೆ ಚಿಕಿತ್ಸೆ ನೀಡುವುದರಿಂದ ನನಗದು ಸಿಗುತ್ತಿದೆ. ಜೀವನ ತೃಪ್ತಿಕರವಾಗಿದೆ ಎಂದು ಹೇಳಿದ್ದಾರೆ. 

ಪ್ರತೀಯೊಬ್ಬರಿಗೂ ಉಚಿತವಾಗಿಯೇ ಚಿಕಿತ್ಸೆ ನೀಡಿದರೆ, ಚಿಕಿತ್ಸೆಯ ಪ್ರಾಮುಖ್ಯತೆ ಅವರಿಗೆ ಅರ್ಥವಾಗುವುದಿಲ್ಲ. ಅಗತ್ಯ ಇದ್ದವರಿಗೆ ಮಾತ್ರವೇ ನಾನು ಉಚಿತವಾಗಿ ಚಿಕಿತ್ಸೆ ನೀಡುತ್ತೇನೆ. ಬಡವರನ್ನು ಕಂಡು ಹಿಡಿಯುವ ಸಾಮರ್ಥ್ಯ ನನಗಿದೆ ಎಂದು ತಿಳಿಸಿದ್ದಾರೆ. 

ಬಳಿಯವರ ಚಿಕಿತ್ಸೆಯನ್ನೂ ಬೈಲಹೊಂಗಲದಲ್ಲಿರುವ ಪ್ರತೀಯೊಬ್ಬ ವ್ಯಕ್ತಿಯೂ ಗೌರವಿಸುತ್ತಿದ್ದಾನೆ. ಬಳಿಯವರು ಮ್ಯಾಜಿಕ್ ರೀತಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಚಿಕಿತ್ಸೆ ಪಡೆದ ಕೂಡಲೇ ರೋಗಿ ಗುಣಮುಖನಾಗುತ್ತಿದ್ದಾನೆ. ಪ್ರತೀಯೊಬ್ಬ ರೋಗಿ ಬಳಿಯೂ ಮೃದುವಾಗಿ ಮಾತನಾಡುತ್ತಾರೆ. ಅವರ ಚಿಕಿತ್ಸೆ ಮ್ಯಾಜಿಕ್ ರೀತಿ ಇರುತ್ತದೆ. ಈ ರೀತಿಯ ವೈದ್ಯರೂ ಯಾವುದೇ ತಾಲೂಕಿನಲ್ಲೂ ಇಲ್ಲ. ಪ್ರತೀಯೊಬ್ಬರಿಗೂ ಮಾದರಿ ಎಂಬಂತೆ ಇದ್ದಾರೆಂದು ರೋಗಿಗಳು ಹೇಳಿದ್ದಾರೆ. 

ದೇವರು ನನಗೆ ಕೊಟ್ಟಿದ್ದನ್ನು ನಾನು ಬಡವರಿಗೆ ಹಿಂತಿರುಗಿಸಿ ನೀಡುತ್ತಿದ್ದೇನೆ. ನನ್ನಿಂದ ಸಾಧ್ಯವಾದಷ್ಟು ದಿನಗಳು ನಾನು ನನ್ನ ಸೇವೆಯನ್ನು ಮುಂದುವರೆಸುತ್ತೇನೆಂದು ಬಳಿಯವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com