ಬೆಂಗಳೂರು: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ತಂದೆ; ರಕ್ಷಿಸಲು ಹೋದ ಮಕ್ಕಳು ಸೇರಿ ಮೂವರ ಸಾವು

ವ್ಯಕ್ತಿಯೊಬ್ಬ ಸ್ವಂತ ಮನೆಯಲ್ಲೇ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ಪರಿಣಾಮ ಆತ ಸೇರಿದಂತೆ ಬೆಳೆದು ನಿಂತಿದ್ದ ಆತನ ಇಬ್ಬರು ಮಕ್ಕಳು ಸಾವನ್ನಪ್ಪಿ, ಪತ್ನಿ ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವ್ಯಕ್ತಿಯೊಬ್ಬ ಸ್ವಂತ ಮನೆಯಲ್ಲೇ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ಪರಿಣಾಮ ಆತ ಸೇರಿದಂತೆ ಬೆಳೆದು ನಿಂತಿದ್ದ ಆತನ ಇಬ್ಬರು ಮಕ್ಕಳು ಸಾವನ್ನಪ್ಪಿ, ಪತ್ನಿ ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಭಕ್ಷಿ ಗಾರ್ಡನ್‌ನಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಮಕ್ಕಳಾದ ಕಾವೇರಿ (21) ಹಾಗೂ ಶ್ರೀಕಾಂತ್ (13) ಹಾಗೂ ಬೆಂಕಿ ಹಚ್ಚಿದ ಆರೋಪಿ ಮುರುಳಿ (43) ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದರೆ, ಪತ್ನಿ ಗೀತಾ (40) ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಕುಡಿತದ ಚಟ ಬೆಳೆಸಿಕೊಂಡಿದ್ದ ಮುರುಳಿ ಇತ್ತೀಚಿಗೆ ಸರಿಯಾಗಿ ಕೆಲಸಕ್ಕೆ ಹೋಗದೆ ಕುಡಿದು ಮನೆಗೆ ಬಂದು ಜಗಳ ಮಾಡುತ್ತಾ ಹಣಕ್ಕಾಗಿ ಪತ್ನಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಮಕ್ಕಳು ಕೂಡ ಅಪ್ಪನ ಕಿರುಕುಳದಿಂದ ಬೇಸತ್ತಿದ್ದರು. ನಿನ್ನೆ ರಾತ್ರಿ ಕೂಡ ಮನೆಯಲ್ಲಿ ಇದೇ ವಿಚಾರವಾಗಿ ಜಗಳ ನಡೆದಿತ್ತು.

ಜಗಳದಿಂದ ಆಕ್ರೋಶಗೊಂಡಿದ್ದ ಮುರುಳಿ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿಹಚ್ಚಿದ್ದಾನೆ ಇಡೀ ಮನೆಗೆ ಬೆಂಕಿ ಆವರಿಸಿಕೊಂಡಿದೆ. ಆತನನ್ನು ರಕ್ಷಿಸಲು ಹೋದ ಪತ್ನಿ ಗೀತಾ, ಮಕ್ಕಳಾದ ಕಾವೇರಿ ಹಾಗೂ ಶ್ರೀಕಾಂತ್ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದಾರೆ.

ಅಕ್ಕ-ಪಕ್ಕದ ಮನೆಯವರು ಧಾವಿಸಿ ಬೆಂಕಿ ನಂದಿಸಿ ನಾಲ್ವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರಾದರೂ ಸ್ವಲ್ಪ ಹೊತ್ತಿನಲ್ಲಿಯೇ ಕಾವೇರಿ ಹಾಗೂ ಶ್ರೀಕಾಂತ್ ಮೃತಪಟ್ಟಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದ ಮುರುಳಿ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನಾನೇ ಬೆಂಕಿ ಹಚ್ಚಿದೆ ಎಂದು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡು ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿದ್ದಾನೆ.

ಗೀತಾ ಸ್ಥಿತಿ ಚಿಂತಾಜನಕವಾಗಿದೆ. ಸುದ್ದಿ ತಿಳಿಯುಯತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಪರೀಶಿಲನೆ ನಡೆಸಿ ಪ್ರಕರಣ ದಾಖಲಿಸಿರುವ ಕಾಟನ್‌ಪೇಟೆ ಪೊಲೀಸರು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬಡಗಿ ಕೆಲಸ ಮಾಡುತ್ತಿದ್ದ ಭಕ್ಷಿ ಗಾರ್ಡನ್‌ ನಿವಾಸಿ ಮುರುಳಿ ಅವರು ಹೂ ಮಾರುತ್ತಿದ್ದ ಗೀತಾ ಅವರನ್ನು 22 ವರ್ಷಗಳ ಹಿಂದೆ ವಿವಾಹವಾಗಿದ್ದ. ದಂಪತಿಗೆ ಬಿಕಾಂ ಮುಗಿಸಿದ್ದ ಕಾವೇರಿ ಮನೆಯಲ್ಲಿದ್ದರು. ಶ್ರೀಕಾಂತ್ ನಗರ ಶಾಲೆಯೊಂದರಲ್ಲಿ 9ನೇ ತರಗತಿ ಓದುತ್ತಿದ್ದ. ತಂದೆಯ ತಪ್ಪಿಗೆ ಅಮಾಯಕ ಇಬ್ಬರು ಮಕ್ಕಳು ಬಲಿಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com