ಮಲಪ್ರಭೆಯಲ್ಲಿ ಮತ್ತೊಮ್ಮೆ ಪ್ರವಾಹ ಭೀತಿ; ಜನತೆ ಕಂಗಾಲು

ಗಾಯದ ಮೇಲೆ ಬರೆ ಎಳೆದರು ಎನ್ನುವಂತೆ ಮಲಪ್ರಭಾ ನದಿಯಲ್ಲಿ ಮತ್ತೊಮ್ಮೆ ಪ್ರವಾಹ ಭೀತಿ ಕಾಣಿಸಿಕೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಾಗಲಕೋಟೆ: ಗಾಯದ ಮೇಲೆ ಬರೆ ಎಳೆದರು ಎನ್ನುವಂತೆ ಮಲಪ್ರಭಾ ನದಿಯಲ್ಲಿ ಮತ್ತೊಮ್ಮೆ ಪ್ರವಾಹ ಭೀತಿ ಕಾಣಿಸಿಕೊಂಡಿದೆ. ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಾಗುತ್ತಿರುವುದು ನದಿ ತೀರದ ಜನತೆಯನ್ನು ಕಂಗಾಲಾಗಿಸಿದೆ.

ಬೆಳಗಾವಿ ಜಿಲ್ಲಾದ್ಯಂತ ವ್ಯಾಪಕ ಮಳೆ ಆಗುತ್ತಿರುವುದರಿಂದ ಸದ್ಯ ನವಿಲು ತೀರ್ಥ ಜಲಾಶಯದಿಂದ 20 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ನದಿ ತೀರದ ಜನತೆ ಮತ್ತೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕಾಗಿ ಬಂದಿರುವುದರಿಂದ ಏನಪ್ಪ ಈ ಪ್ರವಾಹ ಎಷ್ಟು ಸಲ ಬರುತ್ತಿದೆ ಎನ್ನುತ್ತಿದ್ದಾರೆ.

ಈಗಾಗಲೇ ಆಗಸ್ಟ್ ತಿಂಗಳಲ್ಲಿ ಎರಡು ಬಾರಿ ಕಾಣಿಸಿಕೊಂಡಿದ್ದ ಪ್ರವಾಹದಲ್ಲಿ ನದಿ ತೀರದ ಜನತೆ ಬದುಕು ಕೊಚ್ಚಿಹೋಗಿದೆ. ಮಲಪ್ರಭಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಸುರಿದ ವ್ಯಾಪಕ ಮಳೆಯಿಂದಾಗಿ ಆಗಷ್ಟನಲ್ಲಿ ಸಂಭವಿಸಿದ ಪ್ರವಾಹದ ವೇಳೆ ಮಲಪ್ರಭ ನದಿಗೆ 1.30 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿತ್ತು. ಪರಿಣಾಮವಾಗಿ ನವಿಲು ತೀರ್ಥ ಜಲಾಶಯದ ಕೆಳಭಾಗದ ಮುನವಳ್ಳಿಯಿಂದ ಕೂಡಲಸಂಗಮದವರೆಗಿನ ನದಿ ತೀರದ ಗ್ರಾಮಗಳಲ್ಲಿ ನೀರು ನುಗ್ಗಿ ಸಾವಿರಾರು ಮನೆಗಳು ನೀರಿನಲ್ಲಿ ನಿಂತಿದ್ದವು. ಪರಿಣಾಮವಾಗಿ ಬಹುತೇಕ ಎಲ್ಲ ಗ್ರಾಮಗಳಲ್ಲಿನ ಮನೆಗಳು ನದಿ ನೀರು ನಿಂತು ಕುಸಿದು ಬಿದ್ದು ಹೋಗಿವೆ. ಲಕ್ಷಾಂತರ ಎಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಹಾಳಾಗಿದೆ.

ನದಿ ತೀರದ ಬೆಳಗಾವಿ ಜಿಲ್ಲೆಯ ರಾಮದುರ್ಗ, ಸುರೇಬಾನ, ಬಾದಾಮಿ ತಾಲೂಕಿನ ಗೋವನಕೊಪ್ಪ, ಹುನಗುಂದ ತಾಲೂಕಿನ ಕಮತಗಿಯಲ್ಲಿನ ಸಾವಿರಾರು ನೇಕಾರ ಕುಟುಂಬಗಳ ಮನೆಗಳಿಗೆ ಪ್ರವಾಹದ ನೀರು ಹೊಕ್ಕ ಹಿನ್ನೆಲೆಯಲ್ಲಿ ನೇಕಾರರ ಕೈಮಗ್ಗ ಮತ್ತು ವಿದ್ಯುತ್ ಮಗ್ಗಗಳು ನಾಶವಾಗಿ ಹೋಗಿವೆ. 

ಈಗಾಗಲೇ ಎರಡು ಬಾರಿ ನದಿಯಲ್ಲಿ ಉಂಟಾಗಿದ್ದ ಪ್ರವಾಹದಿಂದ ತತ್ತರಿಸಿ ಹೋಗಿರುವ ಜನತೆಗೆ ಸಮರ್ಪಕವಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ಸರ್ಕಾರದಿಂದ ಅಷ್ಟೊ ಇಷ್ಟೊ ಪರಿಹಾರ ಸಿಕ್ಕಿದೆಯಾದರೂ ಮನೆಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಆಗುತ್ತಿದೆ. ಮನೆಗಳನ್ನು ಕಳೆದುಕೊಂಡು ಬೀದಿ ಪಾಲಾಗಿರುವ ಜನತೆ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸುವ ಕೆಲಸ ನಡೆದಿದೆ.

ಇದೀಗ ಗಾಯದ ಮೇಲೆ ಬರೆ ಎಳೆದರು ಎನ್ನುವಂತೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ವ್ಯಾಪಕ ಮಳೆ ಆಗುತ್ತಿರುವುದರಿಂದ ಮಲಪ್ರಭ ನದಿಯಲ್ಲಿ ಪ್ರವಾಹ ಭೀತಿ ಕಾಣಿಸಿಕೊಂಡಿದೆ. ಈಗಾಗಲೇ ನದಿಗೆ 20 ಸಾವಿರ ಕ್ಯೂಸೆಕ್ ನೀರನ್ನು ನವಿಲು ತೀರ್ಥದಿಂದ ನದಿಗೆ ಬಿಡುಗಡೆಗೊಳಿಸಲಾಗಿದೆ. ಜತೆಗೆ ಜಲಾಶಯದ ಕೆಳಭಾಗದ ಪ್ರದೇಶಗಳಲ್ಲೂ ಸತತ ಮಳೆ ಆಗುತ್ತಿದೆ. ಇದರಿಂದಾಗಿ ನದಿ ತೀರದ ಗ್ರಾಮಗಳಲ್ಲಿ ಜಲಾಶಯದ ನೀರು ಮತ್ತು ಮಳೆ ನೀರಿನಿಂದಾಗಿ ಮತ್ತೆ ಪ್ರವಾಹದ ನೀರು ನುಗ್ಗಲಾರಂಭಿಸಿದೆ. ದೇವರೇ ಏಕೆ ಇಷ್ಟೊಂದು ದೊಡ್ಡ ಪ್ರಮಾಣದ ಶಿಕ್ಷೆ ಕೊಡುತ್ತಿರುವೆ ಎಂದು ಜನತೆ ಪರಿತಪಿಸುತ್ತಿದ್ದಾರೆ. ಈಗಾಗಲೇ ಎರಡು ಬಾರಿ ಪ್ರವಾಹದಿಂದ ಕಂಗೆಟ್ಟಿರುವ ಜನತೆ ಈಗ ಮತ್ತೊಮ್ಮೆ ಮನೆ ಮತ್ತು ಗ್ರಾಮಗಳನ್ನು ಬಿಟ್ಟು ಹೋಗಬೇಕಾಗಿದೆ. ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲಾಡಳಿತ ಕೂಡ ನದಿ ತೀರದ ಜನತೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮುನ್ನೆಚ್ಚರಿಕೆ ನೀಡಿವೆ.

ಪ್ರವಾಹ ಎಂದರೆ ಸಾಕು ನದಿ ತೀರದ ಗ್ರಾಮಗಳ ಜನತೆ ಬೆಚ್ಚಿ ಬೀಳುವಂತಾಗಿದೆ. ಮೂರನೇ ಬಾರಿಗೆ ಮಲಪ್ರಭಾ ನದಿಯಲ್ಲಿ ಉಂಟಾಗಿರುವ ಪ್ರವಾಹ ಜನತೆಯ ಬದುಕನ್ನು ಇನ್ನೆಷ್ಟು ದುರ್ಬರಗೊಳಿಸುತ್ತೋ ಎನ್ನುವ ಆತಂಕ ಕಾಡಲಾರಂಭಿಸಿದೆ.

ಮಲಪ್ರಭ ನದಿಯ ಅಚ್ಚು ಕಟ್ಟು ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ನದಿಗೆ ಇನ್ನೂ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಜನತೆ ಏನೂ ತೋಚದಂತಾಗಿ ಕಂಗಾಲಾಗಿ ಹೋಗಿದ್ದಾರೆ.

ಸರ್ಕಾರ ಆದಷ್ಟು ಬೇಗ ನಮ್ಮನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಿ ಪ್ರವಾಹದಿಂದ ಸಾಕಾಗಿ ಹೋಗಿದೆ ಎನ್ನುತ್ತಿದ್ದಾರೆ. ಸರ್ಕಾರ ಮಾತ್ರ ಈ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕಾರ್ಯಗಳು ಅಷ್ಟು ಚುರುಕಾಗಿ ನಡೆಯುತ್ತಿಲ್ಲ ಎನ್ನುವ ಟೀಕೆ ವ್ಯಾಪಕವಾಗಿದೆ.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com