ಭಾರೀ ಮಳೆ
ಭಾರೀ ಮಳೆ

ಮತ್ತೆ ಮಳೆ ಆರ್ಭಟ: ರಾಯಭಾಗ, ನಿಪ್ಪಾಣಿ ಭಾಗದಲ್ಲಿ ಜನಜೀವನ ಅಸ್ತವ್ಯಸ್ಥ

ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಯಿಂದಾಗಿ ಚಿಕ್ಕೋಡಿ, ರಾಯಭಾಗ, ನಿಪ್ಪಾಣಿ ಹಾಗೂ ಕಾಗವಾಡ ತಾಲ್ಲೂಕಿನ ಜನಜೀವನ ಅಸ್ತವ್ಯಸ್ಥವಾಗಿದೆ.

ಬೆಳಗಾವಿ: ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಯಿಂದಾಗಿ ಚಿಕ್ಕೋಡಿ, ರಾಯಭಾಗ, ನಿಪ್ಪಾಣಿ ಹಾಗೂ ಕಾಗವಾಡ ತಾಲ್ಲೂಕಿನ ಜನಜೀವನ ಅಸ್ತವ್ಯಸ್ಥವಾಗಿದೆ.

ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿ ಸುರಿಯುತ್ತಿರುವ ಹಿಂಗಾರು ಮಳೆ ಸದ್ಯ ರೈತರು ಮತ್ತು ಜನಸಾಮಾನ್ಯರನ್ನು ಹೈರಾಣಾಗಿಸಿದೆ, ನಿನ್ನೆ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ರಾಯಭಾಗ ತಾಲೂಕಿನ ದಿಗ್ಗೆವಾಡಿ ಗ್ರಾಮದಲ್ಲಿ ನಲವತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ಜನರು ರಾತ್ರಿಯಿಡಿ ಮಳೆ ನೀರನ್ನು ಹೊರಹಾಕಲು ಜಾಗರಣೆ ಮಾಡುವಂತಾಗಿದೆ. ಇನ್ನೂ ನಿಪ್ಪಾಣಿ ತಾಲೂಕಿನ ಬೋರಗಾಂವ ವಾಡಿ, ಚಿಕ್ಕೋಡಿ ತಾಲೂಕಿನ ಬೆಡಕಿಹಾಳ ಗ್ರಾಮಗಳಲ್ಲಿ ಮಳೆಯ ನೀರು ಮನೆಗಳಿಗೆ ನುಗ್ಗಿದ್ದು, ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.

ಇನ್ನೂ ರಣ ಭೀಕರ ಮಳೆಯಿಂದಾಗಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು, ಮತ್ತೆ ಕೃಷ್ಣಾ ನದಿ ತೀರದ 81 ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಪ್ರವಾಹದಿಂದ ಚೇತರಿಸಿಕೊಳ್ಳುವ ಮೊದಲೇ ಬಂಗಾಳ ಕೊಲ್ಲಿಯಲ್ಲಿ ಹವಾಮಾನ ವೈಪರಿತ್ಯದಿಂದ ಸದ್ಯ ಉತ್ತರ ಕರ್ನಾಟಕದ ಹಲವೆಡೆ ಮೇಘ ಸ್ಪೋಟವಾಗಿದ್ದು, ಧಾರಾಕಾರ ಮಳೆ ಸುರಿಯುತ್ತಿದೆ. ರೈತರ ಜಮೀನುಗಳಲ್ಲಿ ನೀರು ನಿಂತ ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನುವಂತಾಗಿದ್ದು, ಉದ್ದು, ಸೋಯಾ, ನೆಲಗಡಲೆ, ಹೆಸರು, ಅರಿಸಿಣ, ಮೆಕ್ಕೆ ಜೋಳ, ಈರುಳ್ಳಿ, ಭತ್ತ ಹಾಗೂ ಕಬ್ಬು ಬೆಳೆಗಳು ಹಾಳಾಗುತ್ತಿವೆ. ಇದರಿಂದ ಅನ್ನದಾತನಿಗೆ ಹಳೆಯ ಗಾಯದ ಮೇಲೆ ಉಪ್ಪು ಸವರಿದಂತಾಗಿದ್ದು, ರೈತರು ಕಣ್ಣೀರು ಹಾಕುವಂತಾಗಿದೆ.

ಸದ್ಯ ಜಿಲ್ಲಾಡಳಿತ ನದಿ ತೀರದಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದು, ಜನ ಜಾನುವಾರುಗಳು ನದಿ ತೀರದತ್ತ ತೆರಳದಂತೆ ಎಚ್ಚರಿಕೆ ನೀಡಿದೆ. ಚಿಕ್ಕೋಡಿ ವ್ಯಾಪ್ತಿಯಲ್ಲಿ ಏಳು ಸೇತುವೆಗಳು ಮುಳುಗಡೆಯಾಗಿದ್ದು, ಹದಿನಾಲ್ಕು ಗ್ರಾಮಗಳ ಸಂಚಾರಕ್ಕೆ ತೊಂದರೆ ಉಂಟಾಗಿದ್ದು ಜನರು ಪರ್ಯಾಯ ಮಾರ್ಗದ ಮೂಲಕ ಸಂಚರಿಸುತ್ತಿದ್ದಾರೆ.

ವರದಿ: ರವೀಂದ್ರ ಚೌಗಲೆ

Related Stories

No stories found.

Advertisement

X
Kannada Prabha
www.kannadaprabha.com