ಸರ್ಕಾರ ಇಲಾಖೆಯ ಸಾಫ್ಟ್ ವೇರ್ ಹ್ಯಾಕ್: ಹಲವರ ಆಸ್ತಿ ದಾಖಲೆಗಳಿಗೆ ಕನ್ನ!

ಅಂಚೆಚೀಟಿ ಮತ್ತು ನೋಂದಣಿ ಇಲಾಖೆಯ ಆನ್ ಲೈನ್ ನಾಗರಿಕ ಸೇವೆ ಹ್ಯಾಕ್ ಆಗಿದ್ದು ನೂರಾರು ಮಂದಿಯ ಆಸ್ತಿ ದಾಖಲಾತಿಗಳು ಬದಲಾಗಿವೆ. 
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಬೆಂಗಳೂರು: ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಆನ್ ಲೈನ್ ನಾಗರಿಕ ಸೇವೆ ಹ್ಯಾಕ್ ಆಗಿದ್ದು ನೂರಾರು ಮಂದಿಯ ಆಸ್ತಿ ದಾಖಲಾತಿಗಳು ಬದಲಾಗಿವೆ. ಈ ವಂಚನೆ ಇತ್ತೀಚೆಗೆ ಬೆಳಕಿಗೆ ಬಂದು ಸೈಬರ್ ಕ್ರೈಮ್ ಪೊಲೀಸ್ ಕೇಂದ್ರದಲ್ಲಿ ಕೇಸು ದಾಖಲಾಗಿದೆ. ಸಬ್ ರಿಜಿಸ್ಟ್ರಾರ್ ಮತ್ತು ಕಿರಿಯ ಸಿಬ್ಬಂದಿ ಸೇರಿದಂತೆ 20 ಜನರು ಹ್ಯಾಕಿಂಗ್ ನಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.


ಕೆಲವರು ಸಾಫ್ಟ್ ವೇರನ್ನು ಅನಧಿಕೃತವಾಗಿ ಬಳಸಿಕೊಂಡು ಸುಮಾರು 300 ದಾಖಲೆಗಳಲ್ಲಿ ಬದಲಾವಣೆ ತಂದಿದ್ದಾರೆ, ಇದರಿಂದ ರಾಜ್ಯ ಸರ್ಕಾರದ ಖಜಾನೆಗೆ ಭಾರೀ ನಷ್ಟವಾಗಿದೆ ಎಂದು ಮುದ್ರಾಂಕ ಮತ್ತು ದಾಖಲಾತಿ ಇಲಾಖೆಯ ಮಹಾ ನಿರ್ದೇಶಕ ಡಾ ಕೆ ವಿ ತ್ರಿಲೋಕ್ ತಿಳಿಸಿದ್ದಾರೆ.


ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅವರು, ಅನಧಿಕೃತವಾಗಿ ಯಾವುದೇ ಲೇಔಟ್ ಗಳು ಬರದಂತೆ ನಮ್ಮ ಇಲಾಖೆಯ ಸಾಫ್ಟ್ ವೇರ್ ಕಾವೇರಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇಎಸ್ಒ02 ತಂತ್ರಜ್ಞಾನದ ಜೊತೆ ಸೇರಿಸಲಾಗಿತ್ತು. ವಂಚನೆಯ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ತನಿಖೆ ನಡೆಸಿದಾಗ ಕೆಲವು ವ್ಯಕ್ತಿಗಳು ಸೇಲ್ ಡೀಡ್ ನ್ನು ಸೇಲ್ ಅಗ್ರಿಮೆಂಟ್ ಎಂದು ಬದಲಾಯಿಸಿದ್ದು ಕಂಡುಬಂತು. ಮಾಹಿತಿಗಳನ್ನು ತಿರುಚಿದ ನಂತರ ಮತ್ತೆ ಸೇಲ್ ಡೀಡ್ ಆಗಿ ಬದಲಾಯಿಸಿದ್ದಾರೆ. ವಂಚನೆ ದೃಢಪಟ್ಟ ಕೂಡಲೇ ನಾವು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದೇವೆ ಎಂದರು.


ಈ ಬಗ್ಗೆ ಪ್ರತಿಕ್ರಿಯಿಸಿದ ಸೈಬರ್ ಕ್ರೈಂ ವಿಭಾಗದ ತನಿಖಾಧಿಕಾರಿ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿರುವ ಸಿಬ್ಬಂದಿ ಈ ವಂಚನೆಯಲ್ಲಿ ಭಾಗಿಯಾಗಿದ್ದಾರೆ. ಅವರಲ್ಲಿ ಯಾರ್ಯಾರು ಎಂಬುದನ್ನು ನಾವು ಕಂಡುಹಿಡಿಯಬೇಕಿದೆ. ಆದಷ್ಟು ಶೀಘ್ರವೇ ಕೇಸನ್ನು ಭೇದಿಸಲು ತಂಡವನ್ನು ರಚಿಸಿದ್ದೇವೆ. ಐಟಿ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 379 ಮತ್ತು 406ರಡಿ ಕೇಸನ್ನು ದಾಖಲಿಸಿದ್ದೇವೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com