ಬಾಗಲಕೋಟೆ: ವರದಾನವಾಗಬೇಕಿದ್ದ ಕೊಣ್ಣೂರು ಹೊಸ ಸೇತುವೆ ಈಗ ಶಾಪಗ್ರಸ್ಥ!

ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಲಪ್ರಭಾ ನದಿಗೆ ಅಡ್ಡಲಾಗಿ ಕೊಣ್ಣೂರ ಬಳಿ ನಿರ್ಮಿಸಲಾಗಿರುವ ಹೊಸ ಸೇತುವೆ ಸಂಪುರ್ಣ ದುರಸ್ತಿ ಆಗುವವರೆಗೂ ಕೊಣ್ಣೂರ ಸುತ್ತಲಿನ ಗ್ರಾಮಸ್ಥರಿಗೆ ಆತಂಕ ತಪ್ಪಿದ್ದಲ್ಲ. ಸರ್ಕಾರ ಎಷ್ಟು ಬೇಗ ಸೇತುವೆ ದುರಸ್ತಿಗೆ ಮುಂದಾಗುತ್ತೋ ಅಷ್ಟು ಬೇಗ ಅವರೆಲ್ಲ ನಿರಾತಂಕವಾಗಲಿದ್ದಾರೆ.

Published: 24th October 2019 12:53 PM  |   Last Updated: 24th October 2019 12:54 PM   |  A+A-


Flood water makes Konnur bridge turn nightmare for this villagers near Bagalkot

ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊಣ್ಣೂರ ಬಳಿ ಮಲಪ್ರಭಾ ನದಿಗೆ ಕಟ್ಟಲಾಗಿರುವ ಹೊಸ ಸೇತುವೆ.

Posted By : Prasad SN
Source : RC Network

ಬಾಗಲಕೋಟೆ: ಸರ್ವಋತು ಸಂಚಾರಕ್ಕೆ ಅನುಕೂಲವಾಗಲಿ ಎಂದು ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊಣ್ಣೂರ ಬಳಿಕ ಹೊಸದಾಗಿ ನಿರ್ಮಿಸಿರುವ ಸೇತುವೆ ಕೊಣ್ಣೂರ ಹಾಗೂ ಸುತ್ತಲಿನ ಜನತೆ ಪಾಲಿಗೆ ವರದಾನವಾಗುವ ಬದಲಿಗೆ ಯಮಪಾಶವಾಗಿ ಕಾಡಲಾರಂಭಿಸಿದೆ.

ಕಳೆದ ವರ್ಷ ಕೊಣ್ಣೂರ ಸೇತುವ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಂಡಿದ್ದು, ಈ ವರ್ಷ ಮಲಪ್ರಭಾ ನದಿಯಲ್ಲಿ ಮೂರು ಬಾರಿ ಪ್ರವಾಹ ಉಂಟಾಗಿದ್ದು, ಪ್ರತಿ ಬಾರಿಯೂ ಪ್ರವಾಹದ ನೀರು ಕೊಣ್ಣೂರನ್ನು ಮುಳುಗಿಸಿಬಿಟ್ಟಿದೆ.

ಮೂರು ತಿಂಗಳಿನಲ್ಲಿ ಮೂರು ಬಾರಿ ಕೊಣ್ಣೂರುಗ್ರಾಮ ಮಲಪ್ರಭಾ ನದಿ ಪ್ರವಾಹದ ನೀರಿನಿಂದ ಜಲಾವೃತಗೊಂಡ ಪರಿಣಾಮ ಗ್ರಾಮದಲ್ಲಿ ಮನೆಗಳು ಕುಸಿದಿವೆ. ಮಣ್ಣಿನ ಮನೆಗಳು ಬಹುತೇಕ ಬಿದ್ದಿವೆ. ಜನತೆಯ ಬದುಕು ಸರ್ವನಾಶವಾಗಿ ಹೋಗಿದೆ. ಸತತ ಪ್ರವಾಹದಿಂದಾಗಿ ಗ್ರಾಮಸ್ಥರು ಎಲ್ಲಿಗೆ ಹೋಗಿ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಸ್ಥಿತಿಯಲ್ಲಿ ಒದ್ದಾಡುತ್ತಿದ್ದಾರೆ.

ಎಂದೂ ಪ್ರವಾಹ ಪರಿಣಾಮವನ್ನು ಎದುರಿಸದ ಕೊಣ್ಣೂರು ಹಾಗೂ ಸುತ್ತಲಿನ ಗ್ರಾಮಗಳು ಈ ಬಾರಿ ಪ್ರವಾಹಕ್ಕೆ ತುತ್ತಾಗಿರುವುದು  ಅವೈಜ್ಞಾನಿಕವಾಗಿ ನೂತನ ಸೇತುವೆ ನಿರ್ಮಿಸಿರುವುದೇ ಕಾರಣ ಎನ್ನುವ ಮಾತು ವ್ಯಾಪಕವಾಗಿದೆ. ಹೊಸ ಸೇತುವೆ ನಿರ್ಮಾಣದಿಂದಲೇ ನಮ್ಮ ಊರು ಮುಳುವಂತಾಗಿದೆ ಎಂದು ಗ್ರಾಮಸ್ಥರು ಶಪಿಸುತ್ತಿದ್ದಾರೆ. ಹೋಸ ಸೇತುವೆ ನಿರ್ಮಾಣವಾಗದೇ ಇದ್ದಲ್ಲಿ ನಮ್ಮೂರ ಸಮೀಪ ಪ್ರವಾಹದ ನೀರು ಬರುತ್ತಿರಲಿಲ್ಲ. ಅಬ್ಬಬ್ಬಾ ಎಂದರೂ ಜಮೀನುಗಳಲ್ಲಿ ಪ್ರವಾಹ ನೀರು ಬಂದು ಹೋಗುತ್ತಿತ್ತು. ಹೊಸ ಸೇತುವೆ ವರದಾನವಾಗುವ ಬದಲು ನಮ್ಮ ಬದುಕನ್ನೇ ಮೂರಾಬಟ್ಟೆ ಮಾಡುತ್ತಿದೆ ಎನ್ನುವ ಆಕ್ರೋಶವನ್ನು ಗ್ರಾಮಸ್ಥರು ವ್ಯಕ್ತ ಪಡಿಸುತ್ತಿದ್ದಾರೆ.

ಈಗಾಗಲೇ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಲಪ್ರಭ ನದಿಗೆ ಅಡ್ಡಲಾಗಿ ಬ್ರಿಟೀಷರ ಕಾಲದಲ್ಲಿ ನಿರ್ಮಿಸಲಾಗಿರುವ ಹಳೆ ಸೇತುವೆ ಇದೆ. ಅದು ಈಗ ನೆಲ ಸಮವಾಗಿದ್ದು ನದಿಗೆ ಸ್ವಲ್ಪವೇ ನೀರು ಬಂದರೂ ಹೆದ್ದಾರಿ ಮೇಲೆ ವಾಹನಗಳ ಸಂಚಾರ ಸಂಪೂರ್ಣ ಬಂದಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪಕ್ಕದಲ್ಲೇ 30.98 ಕೋಟಿ ರೂ. ವೆಚ್ಚದಲ್ಲಿ 100 ಮೀಟರ್ ಉದ್ದದ ಸೇತುವೆ ಮತ್ತು 1.5 ಕಿಮೀ ರಸ್ತೆಯನ್ನು ನಿರ್ಮಿಸಲಾಗಿದೆ. ಹೊಸ ಸೇತುವೆ ಕೆಳಗೆ ನದಿ ನೀರು ಸರಾಗವಾಗಿ ಹರಿದು ಹೋಗಲು ಕಮಾನುಗಳನ್ನು ನಿರ್ಮಿಸಲಾಗಿದ್ದು, ಜತೆಗೆ ಎರಡೂ ಬದಿಗೆ ಎತ್ತರವಾಗಿ ರಸ್ತೆ ನಿರ್ಮಾಣಗೊಂಡಿದೆ. ಕಮಾನಗಳ ಸಂಖ್ಯೆ ಕಡಿಮೆ ಆಗಿರುವುದು, ಎರಡು ಬದಿಗೆ ಎತ್ತರವಾಗಿ ರಸ್ತೆ ನಿರ್ಮಿಸಿರುವುದರಿಂದ ಈ ಬಾರಿಗೆ ನದಿಯಲ್ಲಿ ಪ್ರವಾಹ ಉಂಟಾದಾಗ ಪ್ರವಾಹ ನೀರು ಸೇತುಗೆ ಕೆಳಗೆ ಸರಾಗವಾಗಿ ಹರಿಯದೇ ಸೇತುವೆ ಬಳಿಗೆ ತಡೆದು ನೀರು ಹೋಗಲಾರಂಭಿಸಿತು. ಪರಿಣಾಮವಾಗಿ ಸೇತುವೆ ಹಿಂದೆ ನಿಲ್ಲುವ ನೀರು ಕೊಣ್ಣೂರು ಗ್ರಾಮದ ಕಡೆಗಿನ ಇಳಿಜಾರು ಪ್ರದೇಶಕ್ಕೆ ನುಗ್ಗಿ ಅಲ್ಲಿಂದ ನೇರವಾಗಿ ಗ್ರಾಮಕ್ಕೆ ನುಗ್ಗಿದ ಪರಿಣಾಮ ಇಡೀ ಗ್ರಾಮ ಜಲಾವೃತಗೊಂಡಿತು. ಮೂರು ಬಾರಿ ನದಿಗೆ ಪ್ರವಾಹ ಬಂದಾಗಲೂ ಸೇತುವೆ ಕೆಳಗೆ ನೀರು ಹರಿಯುವಿಕೆಯಲ್ಲಿ ತೊಂದರೆ ಆಗಿದ್ದರಿಂದ ಹಿಂದೆ ನಿಂತ ನೀರು ಕೊಣ್ಣೂರು ಮತ್ತು ಸುತ್ತಲಿನ ಗ್ರಾಮಗಳಿಗೆ ನುಗ್ಗಿ ಗ್ರಾಮಸ್ಥರ ಬದುಕನ್ನೇ ಕೊಚ್ಚಿಕೊಂಡು ಹೋಗಿದೆ.

ಸೇತುವ ನಿರ್ಮಾಣಕ್ಕೆ ಮುನ್ನ ಎಷ್ಟೇ ಪ್ರಮಾಣದಲ್ಲಿ ನದಿಯಲ್ಲಿ ನೀರು ಬಂದರೂ ಹಳೆ ಸೇತುವೆ ಮೇಲಿಂದ ಹರಿದು ಹೋಗುತ್ತಿತ್ತು. ಆ ವೇಳೆ ಸಂಚಾರಕ್ಕೆ ತೊಂದರೆ ಆಗುತ್ತಿತ್ತು. ಆದರೆ ಈಗ ಹೊಸ ಸೇತುವೆ ಸುತ್ತ ನೀರು ಆವರಿಸಿಕೊಳ್ಳುತ್ತಿರುವ ಪರಿಣಾಮ ಸಂಚಾರವೂ ಬಂದ್, ಗ್ರಾಮವೂ ಜಲಾವೃತ ಎನ್ನುವಂತಾಗಿದೆ. ಒಟ್ಟಾರೆ ಹೊಸ ಸೇತುವೆ ನಿರ್ಮಾಣ ಹೊಳೆಯಲ್ಲಿ ಹುಣಿಸೆ ಹಣ್ಣು ತೊಳೆದಂತಾಗಿದೆ. ಗ್ರಾಮಸ್ಥರ ಬದುಕನ್ನು ಸಂಕಷ್ಟಕ್ಕೆ ದೂಡಿದಂತಾಗಿದೆ.

ಹೊಸ ಸೇತುವೆಗೆ ಇನ್ನಷ್ಟು ಕಮಾನ್‍ಗಳನ್ನು ನಿರ್ಮಿಸಬೇಕು. ಜತೆಗೆ ಸೇತುವೆ ಎರಡು ಬದಿಗೆ ಅಲ್ಲಲ್ಲಿ ಸಿಡಿಗಳನ್ನು ನಿರ್ಮಿಸುವುದರಿಂದ ಮಾತ್ರ ಕೊಣ್ಣೂರ ಮತ್ತು ಸುತ್ತಲಿನ ಗ್ರಾಮಗಳನ್ನು ಉಳಿಸಿಕೊಳ್ಳಲು ಸಾಧ್ಯ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಬಾಗಲಕೋಟೆ ಜಿಲ್ಲಾಧಿಕಾರಿಗಳೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.  ಹೊಸ ಸೇತುವೆ ಸಂಪೂರ್ಣ ದುರಸ್ತಿ ಆಗುವವರೆಗೂ ಹಳೆ ಸೇತುವೆಯೇ ಸುಗಮ ಸಂಚಾರಕ್ಕೆ ಗತಿ ಎನ್ನುವಂತಾಗಿದೆ.

ಏನೇ ಆಗಲಿ ಹೊಸ ಸೇತುವೆ ನಿರ್ಮಾಣ ಕೊಣ್ಣೂರು ಹಾಗೂ ಸುತ್ತಲಿನ ವಾಸನ, ಬೆಳ್ಳೇರಿ,ಬೀರನೂರು, ತಳಕವಾಡ, ಗೋವನಕೊಪ್ಪ ಸೇರಿದಂತೆ ಅನೇಕ ಗ್ರಾಮಗಳ ಪಾಲಿಗೆ ಶಾಪಗ್ರಸ್ಥವಾಗಿ ಪರಿಣಮಿಸಿದ್ದಂತೂ ಸತ್ಯ.

ವರದಿ: ವಿಠ್ಠಲ ಆರ್. ಬಲಕುಂದಿ

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp