ಅಯ್ಯಪ್ಪ ದೊರೆ ಕೊಲೆ ಪ್ರಕರಣ: ಮತ್ತೆ 7 ಮಂದಿ ಸೆರೆ; ಬಂಧಿತರ ಸಂಖ್ಯೆ 10ಕ್ಕೇರಿಕೆ

 ಅಲಯೆನ್ಸ್ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಡಾ. ಅಯ್ಯಪ್ಪ ದೊರೆ ಕೊಲೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಉತ್ತರ ವಿಭಾಗದ ಪೊಲೀಸರು, ಮತ್ತೆ 7 ಮಂದಿಯನ್ನು ಬಂಧಿಸಿದ್ದು, ಇದರೊಂದಿಗೆ ಬಂಧಿತರ ಸಂಖ್ಯೆ 10ಕ್ಕೇರಿದೆ.
ಅಯ್ಯಪ್ಪ ದೊರೆ
ಅಯ್ಯಪ್ಪ ದೊರೆ

ಬೆಂಗಳೂರು:  ಅಲಯೆನ್ಸ್ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಡಾ. ಅಯ್ಯಪ್ಪ ದೊರೆ ಕೊಲೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಉತ್ತರ ವಿಭಾಗದ ಪೊಲೀಸರು, ಮತ್ತೆ 7 ಮಂದಿಯನ್ನು ಬಂಧಿಸಿದ್ದು, ಇದರೊಂದಿಗೆ ಬಂಧಿತರ ಸಂಖ್ಯೆ 10ಕ್ಕೇರಿದೆ.

ಕೊಲೆ ಸಂಬಂಧ ನಾಲ್ವರು ಹಾಗೂ ಅದಕ್ಕೆ ಸಹಕರಿಸಿದ ಮೂವರು ಸೇರಿ ಒಟ್ಟು 7 ಮಂದಿಯನ್ನು ಆರ್.ಟಿ. ನಗರದ ಪೊಲೀಸರು ನಿನ್ನೆ ಬಂಧಿಸಿದ್ದಾರೆ.

ಜಯಮಹಲ್‌ನ ಕಾಂತರಾಜು ಅಲಿಯಾಸ್ ಕಾಟಪ್ಪ (28), ಜೆಸಿ ನಗರದ ಸುನಿಲ್ ರಾವ್ ಅಲಿಯಾಸ್ ಅಪ್ಪು (31), ಆರ್.ಟಿ. ನಗರದ ಫಯಾಜ್ (29), ಜೆ.ಸಿ. ನಗರದ ವಿನಯ್ (24), ಆರ್.ಟಿ. ನಗರದ ಅರುಣ್ ಕುಮಾರ್, ಕನಕನಗರದ ರಿಜ್ವಾನ್ (38), ಕೊಡಿಗೆಹಳ್ಳಿಯ ಸಲ್ಮಾ (28) ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳಲ್ಲಿ ಕಾಂತರಾಜು, ಸುನಿಲ್ ರಾವ್, ಫಯಾಜ್ ಹಾಗೂ ವಿನಯ್ ಅವರು, ಅಯ್ಯಪ್ಪ ದೊರೆ ಕೊಲೆ ಕೃತ್ಯದಲ್ಲಿ ಪ್ರಮುಖ ಆರೋಪಿ ಸೂರಜ್ ಸಿಂಗ್ ಜೊತೆ ಕೈಜೋಡಿಸಿದ್ದರು. ಕೊಲೆ ಕೃತ್ಯಕ್ಕೆ ಅರುಣ್ ಕುಮಾರ್, ರಿಜ್ವಾನ್ ಹಾಗೂ ಸಲ್ಮಾ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿರುವುದು ತನಿಖೆಯಲ್ಲಿ ಕಂಡುಬಂದಿರುವುದರಿಂದ ಅವರನ್ನು ಬಂಧಿಸಿ, ವಿಚಾರಣೆ ನಡೆಸಲಾಗಿದೆ. 

ಇಲ್ಲಿಯವರೆಗೆ ಅಯ್ಯಪ್ಪ ಕೊಲೆ ಕೃತ್ಯದಲ್ಲಿ ಅಲಯನ್ಸ್ ವಿವಿಯ ಕುಲಪತಿ ಸುಧೀರ್ ಅಂಗೂರ್, ಸೂರಜ್ ಸಿಂಗ್ ಸೇರಿದಂತೆ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

ಅಯ್ಯಪ್ಪ ಕೊಲೆ ಕೃತ್ಯದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದ್ದು, ಅಲಯೆನ್ಸ್ ವಿವಿಯ ಮೇಲಿನ ಹಿಡಿತ ಸಾಧಿಸಲು ಅಯ್ಯಪ್ಪ ದೊರೆ ಅವರ ಕೊಲೆ ನಡೆಸಿರುವುದು ಪತ್ತೆಯಾಗಿದೆ ಎಂದು ಅವರು ತಿಳಿಸಿದರು.
ಕೊಲೆ ಕೃತ್ಯದ ಬೆನ್ನುಹತ್ತಿದ ಆರ್.ಟಿ. ನಗರದ ಪೊಲೀಸ್ ಇನ್ಸ್‌ಪೆಕ್ಟರ್ ಮಿಥುನ್ ಶಿಲ್ಪಿ, ಓರ್ವ ಆರೋಪಿಗೆ ಗುಂಡು ಹಾರಿಸಿ ಬಂಧಿಸಿದ್ದಲ್ಲದೆ, ಉಳಿದವರನ್ನು ದಸ್ತಗಿರಿ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com