ಕರಾವಳಿಯಲ್ಲಿ ಕ್ಯಾರ್ ಅಬ್ಬರ: ಉಡುಪಿಯಲ್ಲಿ ಮಳೆಗೆ ಇಬ್ಬರು ಬಲಿ

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಕರ್ನಾಟಕ ಕರಾವಳಿ ಭಾಗದಲ್ಲಿ ಕ್ಯಾರ್ ಚಂಡಮಾರುತದ ಅಬ್ಬರ ಜೋರಾಗಿದ್ದು ಈ ಭಾಗದಾದ್ಯಂತ ಗುರುವಾರ ರಾತ್ರಿ, ಶುಕ್ರವಾರಗಳಂದು ಭಾರೀ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಇಬ್ಬರು ಸಾವಿಗೀಡಾಗಿದ್ದಾರೆ.
ಕರಾವಳಿಯಲ್ಲಿ ಕ್ಯಾರ್ ಅಬ್ಬರ: ಉಡುಪಿಯಲ್ಲಿ ಮಳೆಗೆ ಇಬ್ಬರು ಬಲಿ
ಕರಾವಳಿಯಲ್ಲಿ ಕ್ಯಾರ್ ಅಬ್ಬರ: ಉಡುಪಿಯಲ್ಲಿ ಮಳೆಗೆ ಇಬ್ಬರು ಬಲಿ

ಮಂಗಳೂರು/ಕಾರವಾರ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಕರ್ನಾಟಕ ಕರಾವಳಿ ಭಾಗದಲ್ಲಿ ಕ್ಯಾರ್ ಚಂಡಮಾರುತದ ಅಬ್ಬರ ಜೋರಾಗಿದ್ದು ಈ ಭಾಗದಾದ್ಯಂತ ಗುರುವಾರ ರಾತ್ರಿ, ಶುಕ್ರವಾರಗಳಂದು ಭಾರೀ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಇಬ್ಬರು ಸಾವಿಗೀಡಾಗಿದ್ದಾರೆ.

ಗಾಳಿಯ ರಭಸಕ್ಕೆ ಹಲವು ಮರಗಳು ಧರೆಗುರುಳಿದ್ದು ಅನೇಕ ಮನೆಗಳಿಗೆ ಹಾನಿಯಾಗಿದೆ.

ಚಂಡಮಾರುತವು ಮಹಾರಾಷ್ಟ್ರದ ರತ್ನಗಿರಿಯಿಂದ ಪಶ್ಚಿಮಕ್ಕೆ 190 ಕಿಮೀ ದೂರದಲ್ಲಿ ಕೇಂದ್ರೀಕೃತವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮೂಲಗಳು ತಿಳಿಸಿವೆ.

ಮುಂದಿನ 24 ಗಂಟೆಗಳಲ್ಲಿ ಕರ್ನಾಟಕ ಕರಾವಳಿಯಲ್ಲಿ ಸಮುದ್ರದ ಅಲೆಗಳ ಅಬ್ಬರ ಇನ್ನಷ್ಟು ಹೆಚ್ಚಬಹುದಾಗಿದೆ ಎಂದು  ಐಎಂಡಿ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮುಂಜಾಗೃತೆ ಕೇಂದ್ರ  (ಕೆಎಸ್‌ಎನ್‌ಡಿಎಂಸಿ) ಎಚ್ಚರಿಸಿದೆ.ಮುಂದಿನ 24 ಗಂಟೆಗಳಲ್ಲಿ ಈ ಭಾಗಗಳಲ್ಲಿ ಅತಿ ಹೆಚ್ಚು ಮಳೆ(200 ಮಿ.ಮೀ ಗಿಂತ ಹೆಚ್ಚು)  ಆಗಲಿದ್ದು  ದಕ್ಷಿಣ, ಉಡುಪಿ ಮತ್ತು ಉತ್ತರ ಕನ್ನಡ ಡ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ 32.4 ಮಿ.ಮೀ ಮಳೆಯಾಗಿದ್ದು, ಮಂಗಳೂರು, ಬಂಟ್ವಾಳ, ಬೆಳ್ತಂಗಡಿಗಳಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ಮಳೆ ಬಿದ್ದಿದೆ. ನೇತ್ರಾವತಿ ನದಿಯ ಮಟ್ಟವೂ ಏರುತ್ತಿದ್ದು ಅಪಾಯದ ಮಟ್ಟಕ್ಕೆ ಕೆಲವೇ ಮೀಟರ್ ಬಾಕಿ ಇದೆ ಎಂದು ಹೇಳಲಾಗಿದೆ.

ಮುಂದಿನ 24 ರಿಂದ 36 ಗಂಟೆಗಳ ಕಾಲ ಮಂಗಳೂರು, ಮಲ್ಪೆ ಹಾಗೂ ಕಾರವಾರ ಸಮುದ್ರಗಳಲ್ಲಿ ಮೂರು ಮೀಟರ್ ನಿಂದ 3.3 ಮೀಟರ್ ನಡುವೆ ಬೃಹತ್ ಅಲೆಗಳು ಏಳಲಿರುವುದಾಗಿ ಐಎಂಡಿ ಮುನ್ಸೂಚನೆ ನೀಡಿದೆ.ಇದಕ್ಕಾಗಿ ಮುಂದಿನ ಎರಡು ದಿನಗಳ ಕಾಲ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಉಡುಪಿ: ಮಳೆಯ ಅಬ್ಬರಕ್ಕೆ ಎರಡು ಬಲಿ

ಉಡುಪಿಯಲ್ಲಿ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಗೆ ಇಬ್ಬರು ಸಾವನ್ನಪ್ಪಿದ್ದಾರೆ. ಕಾಪು ತಾಲೂಕು ಕುರ್ಕ್ಯಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಜಾಲುಗಿರಿ ಸುಲೋಚನಾ ಶೇರಿಗಾರ್ (42) ಕುಕ್ಕೇಹಳ್ಳಿ ಗ್ರಾಮ ಪಂಚಾಯತಿಯ ಸಾಂತೆಜೆಡ್ಡು ರವೀಂದ್ರ ಕುಲಾಲ್ (38) ಸಾವಿಗೀಡಾಗಿದ್ದಾರೆ.

ಸುಲೋಚನಾ ಅವರು ದನಕ್ಕಾಗಿ ಹುಲ್ಲು ತರ ಹೋದಾಗ ಶಂಖತೀರ್ಥದ ಸಮೀಪ ತೋಡಿನಲ್ಲಿ ಖಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ರವೀಂದ್ರ ಕುಲಾಲ್ ತಾವು ಮಳೆಯಿಂದ ರಕ್ಷಣೆಗಾಗಿ ಪರಿಚಯಸ್ಥರ ಮನೆ ಛಾವಣಿಯಡಿ ನಿಂತಾಗ ಮರ ಬಿದ್ದು ಮೃತಪಟ್ಟಿದ್ದಾರೆ.

ಮಳೆ ಪ್ರಮಾಣ ಹೆಚ್ಚಿರುವ ಕಾರಣ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಶನಿವಾರ (ಅ.26) ರಜೆ ಸಾರವಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com