ಸಿದ್ದರಾಮಯ್ಯ ಪಾದಯಾತ್ರೆ ಪ್ಲ್ಯಾನ್: ರಾಜ್ಯವ್ಯಾಪಿ ಚರ್ಚೆಗೆ ಗ್ರಾಸ!

ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿರುವುದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತ್ತೊಂದು ಪಾದಯಾತ್ರೆ ನಡೆಸಲಿದೆ ಎನ್ನುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಚರ್ಚೆ ಬಿಜೆಪಿಗರಲ್ಲೂ ಸಾಕಷ್ಟು ಕುತೂಹಲ ಮೂಡಿಸಿದೆ.
ಸಿದ್ದರಾಮಯ್ಯ ಪಾದಯಾತ್ರೆ ಪ್ಲ್ಯಾನ್: ರಾಜ್ಯವ್ಯಾಪಿ ಚರ್ಚೆಗೆ ಗ್ರಾಸ!
ಸಿದ್ದರಾಮಯ್ಯ ಪಾದಯಾತ್ರೆ ಪ್ಲ್ಯಾನ್: ರಾಜ್ಯವ್ಯಾಪಿ ಚರ್ಚೆಗೆ ಗ್ರಾಸ!

ಬಾಗಲಕೋಟೆ: ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿರುವುದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತ್ತೊಂದು ಪಾದಯಾತ್ರೆ ನಡೆಸಲಿದೆ ಎನ್ನುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಚರ್ಚೆ ಬಿಜೆಪಿಗರಲ್ಲೂ ಸಾಕಷ್ಟು ಕುತೂಹಲ ಮೂಡಿಸಿದೆ.

ಉತ್ತರ ಕರ್ನಾಟಕದ ಜನತೆ ಮೂರು ಬಾರಿ ಉಂಟಾಗಿರುವ ಪ್ರವಾಹ ಮತ್ತು ಸತತ ಮಳೆಯಿಂದ ಮನೆಗಳು ಕುಸಿದು ಬದುಕನ್ನೇ ಕಳೆದುಕೊಂಡು ಚಿಂತಾಕ್ರಾಂತರಾಗಿದ್ದು, ಸರ್ಕಾರ ಇವರಿಗೆ ಸೂಕ್ತ ಪರಿಹಾರ ಕಲ್ಪಿಸುವಲ್ಲಿ ವಿಫಲವಾಗಿದೆ ಎನ್ನುವುದು ಕಾಂಗ್ರೆಸ್ಸಿಗರ ಗಭೀರ ಆರೋಪವಾಗಿದ್ದು, ಸರ್ಕಾರದ ನೆರೆ ನಿರ್ವಹಣೆ ವೈಫಲ್ಯವನ್ನೆ ಮುಂದಿಟ್ಟುಕೊಂಡು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೊಂದು ಪಾದಯಾತ್ರೆಗೆ ಮುಂದಾಗಿದ್ದಾರೆ.

ಕಾಂಗ್ರೆಸ್ ಪಾದಯಾತ್ರೆ ಎಲ್ಲಿಂದ ಆರಂಭಗೊಳ್ಳಬೇಕು ಎನ್ನುವುದು ಸದ್ಯ ಸಾಕಷ್ಟು ಗೊಂದಲ ಮೂಡಿಸಿದೆ. ಪಾದಯಾತ್ರೆ ನಡೆಸಬೇಕು ಎನ್ನುವ ಚರ್ಚೆ ಆಗಿರುವುದಂತೂ ನಿಜ. ಜತೆಗೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆಸಬೇಕು ಎಂದು ಚರ್ಚೆ ಆಗಿದೆ. ಆದರೆ ಗುರುವಾರದಿಂದ ಬೆಳಗಾವಿಯಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಬೇಕೋ, ಬಾಗಲಕೋಟೆಯಿಂದ ಬೆಳಗಾವಿವರೆಗೆ ಪಾದಯಾತ್ರೆ ನಡೆಸಬೇಕೋ ಎನ್ನುವ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ ಎಂದು ಕಾಂಗ್ರೆಸ್‍ನ ಹಿರಿಯ ಮುಖಂಡರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್‍ನ ಉನ್ನತ ಮೂಲಗಳ ಪ್ರಕಾರ ಸಿದ್ದರಾಮಯ್ಯ ಬಾಗಲಕೋಟೆ ಜಿಲ್ಲೆಯ ಮುಖಂಡರೊಂದಿಗೆ ಚರ್ಚಿಸಿ, ಜಿಲ್ಲೆಯ ಪ್ರತಿ ವಿಧಾನಸಭೆ ಕ್ಷೇತ್ರದಿಂದ ಅಲ್ಲಿನ ಮುಖಂಡರು ಪಾದಯಾತ್ರೆ ಮೂಲಕ ಬಾಗಲಕೋಟಗೆ ಬರಬೇಕು. ತಾವೂ ಬಾದಾಮಿಯಿಂದ ಬಾಗಲಕೋಟಗೆ ಪಾದಯಾತ್ರೆಯಲ್ಲಿ ಬರುವುದಾಗಿ ಹೇಳಿದ್ದಾರೆ. ಚರ್ಚೆಯ ವೇಳೆ ನಡೆದದ್ದು ಇಷ್ಟು. ಆದರೆ ಮಾಧ್ಯಮಗಳಲ್ಲಿ ಪಾದಯಾತ್ರೆ ಕುರಿತು ನಡೆಯುತ್ತಿರುವ ವಿದ್ಯಮಾನಗಳೇ ಬೇರೆ ಎನ್ನುವುದು ಕಾಂಗ್ರೆಸ್‍ನ ಹಿರಿಯ ಮುಖಂಡರೊಬ್ಬರು ಸ್ಪಷ್ಟ ಪಡಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದಿರುವ ಬೆಳವಣಿಗೆಗಳ ಏನು ಎನ್ನುವುದು ತಮಗೆ ಗೊತ್ತಿಲ್ಲ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ಹೋದ ಬಳಿಕ ಅಲ್ಲಿ ಪಾದಯಾತ್ರೆ ನಡೆಸುವ ಕುರಿತು ವಿಸ್ತ್ರತ ಚರ್ಚೆ ನಡೆದು ಮೊದಲಿನ ನಿರ್ಧಾರದಲ್ಲಿ ಬದಲಾವಣೆ ಆಗಿರಬಹುದು ಎನ್ನುವ ಮಾತನ್ನು ಆಡಿದ್ದಾರೆ. ನಿರ್ಧಾರ ಬದಲಾವಣೆ ಕುರಿತು ತಮಗೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರವಾಹದಿಂದ ಅತೀ ಹೆಚ್ಚು ಹಾನಿಗೊಳಗಾಗಿರುವ ಬಾಗಲಕೋಟೆ,ಬೆಳಗಾವಿ ಜಿಲ್ಲೆಯಲ್ಲಿ ಪಾದಯಾತ್ರೆ ನಡೆಸುವ ಮೂಲಕ ಬಿಜೆಪಿಯ ಅಬೇಧ್ಯ ಕೋಟೆಯನ್ನು ಛಿದ್ರಗೊಳಿಸುವ ಹಿನ್ನೆಲೆಯಲ್ಲಿ ಬಾಗಲಕೋಟೆಯಿಂದ ಬೆಳಗಾವಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಿದ್ದಾರೆ ಎನ್ನುವ ಮಾತಿದೆ. ಜತೆಗೆ ಬೆಳಗಾವಿಯಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಲಿದ್ದಾರೆ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ.

ಏನೇ ಆಗಲಿ 2013ರ ಚುನಾವಣೆಗೂ ಮುನ್ನ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಸಿದ್ದರಾಮಯ್ಯ ನೇತೃತ್ವದಲ್ಲಿ ಹೊಸಪೇಟೆಯಿಂದ ಕೂಡಲಸಂಗಮದವರೆಗೆ ಕಾಂಗ್ರೆಸ್  ನಡಿಗೆ  ಕೃಷ್ಣೆಯ ಕಡೆಗೆ ಎನ್ನುವ ಘೋಷ ವಾಕ್ಯದಲ್ಲಿ ಪಾದಯಾತ್ರೆ ಹಮ್ಮಿಕೊಂಡಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದದ್ದಲ್ಲದೆ ಪಾದಯಾತ್ರೆ ಬಳಿಕ ನಡೆದ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟದಲ್ಲಿ ಬಿಜೆಪಿ ಧೂಳಿಪಟವಾಗಿ ಕಾಂಗ್ರೆಸ್ ಗೆಲುವಿನ ನಗೆ ಬೀರಿ ಅಧಿಕಾರ ಚುಕ್ಕಾಣಿ ಹಿಡಿದದ್ದು ಈಗ ಇತಿಹಾಸ, ಅಂದು ಕಾಂಗ್ರೆಸ್ಸಿಗರು ನೀಡಿದ್ದ ಭರವಸೆ ಹಾಗೆ ಉಳಿಯಿತು ಎನ್ನುವುದು ಬೇರೆ ಮಾತು.

ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಯಾವಾಗ ಯಾವಾಗ ಹೆಚ್ಚು ಸ್ಥಾನಗಳನ್ನು ಗಳಿಸಿದೆಯೋ ಆಗೆಲ್ಲ ರಾಜ್ಯದ ಅಧಿಕಾರ ಸೂತ್ರ ಹಿಡಿದಿದೆ. ಈಗಲೂ ಅಷ್ಟೆ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟದಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸುವ ನಿಟ್ಟಿನಲ್ಲಿ  ರಾಜ್ಯ ಸರ್ಕಾರದ ನೆರೆ ನಿರ್ವಹಣೆ ವೈಫಲ್ಯ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಪಾದಯಾತ್ರೆ ಲೆಕ್ಕಾಚಾರ ಹಾಕಿದ್ದಾರೆ. ಪಾದಯಾತ್ರೆ ಎಲ್ಲಿಂದ ಆರಂಭವಾಗಬೇಕು ಎನ್ನುವುದು ಯಕ್ಷಪ್ರಶ್ನೆಯಾಗಿದೆ.

ಮೂಲಗಳ ಪ್ರಕಾರ ಸದ್ಯ ಬಾಗಲಕೋಟೆ ಜಿಲ್ಲೆಯಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಬೇಕು ಎನ್ನುವ ಸಿದ್ದರಾಮಯ್ಯ ಅವರ ಲೆಕ್ಕಾಚಾರದಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿ ಪಾದಯಾತ್ರೆ ಬೆಂಗಳೂರುವರೆಗೂ ನಡೆದರೂ ಅಚ್ಚರಿ ಪಡಬೇಕಿಲ್ಲ.

ಸತತ ಮಳೆಯಿಂದಾಗಿ ಮೂರು ಬಾರಿ ಉತ್ತರ ಕರ್ನಾಟಕದ ಬಹುತೇಕ ಭಾಗ ಪ್ರವಾಹದಿಂದ ತತ್ತರಿಸಿ ಹೋಗಿದೆ. ನದಿ ತೀರದ ಗ್ರಾಮ ಮತ್ತು ಪಟ್ಟಣಗಳ ಜನತೆ ಬದುಕು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಮೇಲಿಂದ ಮೇಲೆ ಉಂಟಾದ ಪ್ರವಾಹದಿಂದ ಹಾಳಾಗಿರುವ ಬದುಕನ್ನು ಕಟ್ಟಿಕೊಳ್ಳಲು ಜನ ಒದ್ದಾಡುತ್ತಿದ್ದಾರೆ. ಸರ್ಕಾರದಿಂದ ನಿರೀಕ್ಷಿತ ಸಹಾಯ ಸಿಗದೇ ಕಾಂಗಾಲಾಗಿದ್ದಾರೆ.

ಪ್ರವಾಹಕ್ಕೆ ತುತ್ತಾಗಿರುವ ಜನತೆಗೆ ಸೂಕ್ತ ಪರಿಹಾರ ಸಿಗದೇ ಕುಸಿದು ಬಿದ್ದಿರುವ ಮನೆಗಳಲ್ಲಿ, ದೇವಸ್ಥಾನ, ಸಮುದಾಯ ಭವನಗಳಲ್ಲಿ ಬದುಕು ಸಾಗಿಸುತ್ತಿದ್ದಾರೆ. ಪರಿಹಾರ ಸಿಗದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಸಂತ್ರಸ್ತರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರವಾಹ ಸಂತ್ರಸ್ತರ ಆಕ್ರೋಶವನ್ನೇ ಅಸ್ತ್ರವಾಗಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.

ಅಂದು ಕೃಷ್ಣೆಯ ಹೆಸರಲ್ಲಿ ಪಾದಯಾತ್ರೆ ನಡೆಸಿ ಅಧಿಕಾರ ಹಿಡಿದ ಕಾಂಗ್ರೆಸ್ ಇಂದು ಪ್ರವಾಹ ಸಂತ್ರಸ್ತರ ಪರಿಹಾರ ನೀಡಿಕೆ ವೈಫಲ್ಯದ ಹೆಸರಲ್ಲಿ ಪಾದಯಾತ್ರೆ ನಡೆಸಲು ಮುಂದಾಗಿದ್ದು ಎಷ್ಟರ ಮಟ್ಟಿಗೆ ಸಿದ್ದರಾಮಯ್ಯನವರ ತಂತ್ರಗಾರಿಕೆ ಫಲಕಾರಿ ಆಗಲಿದೆ ಎನ್ನುವುದಕ್ಕೆ ಕಾಲವೇ ಉತ್ತರಬೇಕಿದೆ.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com