ಕೃಷಿಮೇಳದಲ್ಲಿ ರೈತರಿಗೂ ಡಿ.ವಿ.ಸದಾನಂದಗೌಡ ನಡುವೆ ಆರ್.ಸಿ.ಇಪಿ ವಿಷಯದಲ್ಲಿ ಜಟಾಪಟಿ

ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿಮೇಳದ ಎರಡನೇ ದಿನವಾದ ಶುಕ್ರವಾರವೂ ಸಹ ಆರ್‌ಸಿ‌ಇಪಿ ಒಪ್ಪಂದ ವಿಚಾರ ರೈತರು ಹಾಗೂ ಕೇಂದ್ರ ರಾಸಾಯನಿಕ ಸಚಿವ ಡಿ.ವಿ.ಸದಾನಂದಗೌಡರ ನಡುವೆ ಜಟಾಪಟಿಗೆ ಕಾರಣವಾಯಿತು.
ಕೇಂದ್ರ ಸಚಿವ ಡಿ. ವಿ.ಸದಾನಂದಗೌಡ
ಕೇಂದ್ರ ಸಚಿವ ಡಿ. ವಿ.ಸದಾನಂದಗೌಡ

ಬೆಂಗಳೂರು: ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿಮೇಳದ ಎರಡನೇ ದಿನವಾದ ಶುಕ್ರವಾರವೂ ಸಹ ಆರ್‌ಸಿ‌ಇಪಿ ಒಪ್ಪಂದ ವಿಚಾರ ರೈತರು ಹಾಗೂ ಕೇಂದ್ರ ರಾಸಾಯನಿಕ ಸಚಿವ ಡಿ.ವಿ.ಸದಾನಂದಗೌಡರ ನಡುವೆ ಜಟಾಪಟಿಗೆ ಕಾರಣವಾಯಿತು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸದಾನಂದಗೌಡ ಭಾಷಣ ಮುಗಿಸಿ ವೇದಿಕೆಯಿಂದ ತೆರಳುತ್ತಿರುವ ಸಂದರ್ಭದಲ್ಲಿ ಸಭೆಯಲ್ಲಿದ್ದ ಒಂದಿಷ್ಟು ರೈತರು ಆರ್‌ಸಿಇಪಿ ಒಪ್ಪಂದದ ಬಗ್ಗೆ ಮಾತನಾಡಿ, ಕೇಂದ್ರದ ಮೇಲೆ ಒತ್ತಡ ಹೇರಿ ಸ್ವಾಮಿ ಎಂದು ಕೂಗಿದರು.

ಆಗ ಮತ್ತೆ ಮೈಕ್ ನ ಮುಂಭಾಗ ಬಂದು ಸದಾನಂದಗೌಡ ತಮ್ಮ ಮಾತು ಮುಂದುವರೆಸಿ, ಹಾರಿಕೆಯ ಸುದ್ದಿಗಳು ಬರುತ್ತಿವೆ. ರೈತನ ಹಿತಾಸಕ್ತಿಗೆ ತೊಂದರೆಯಾಗದಂತೆ ಕೇಂದ್ರ ನಡೆಯುತ್ತದೆ. ಸಣ್ಣಪುಟ್ಟ ವಿಚಾರಗಳನ್ನು ಸರಿಯಾಗಿ ತಿಳಿಯದೇ ಮಾತನಾಡಬಾರದು. ಕೇಂದ್ರ ಸರ್ಕಾರ ರೈತರ ಹಿತ ರಕ್ಷಣೆಗೆ ಬದ್ಧವಾಗಿದೆ. ಕಾನೂನಿನಲ್ಲಿ ತಿದ್ದುಪಡಿಯಾಗಲೀ ಹೊಸ ವಿಚಾರಗಳ ಬಗ್ಗೆ ಕಾನೂನು ರೂಪಿಸುವ ಬಗ್ಗೆ ರೈತರೊಂದಿಗೆ ಚರ್ಚಿಸಲಾಗುತ್ತದೆ ಎಂದು ಹೇಳಿದರು. ಆದರೆ ಎಲ್ಲಿಯೂ ಆರ್‌ಸಿಇಪಿ ಕಾಯಿದೆ ವಿಚಾರದ ಬಗ್ಗೆ ಸದಾನಂದಗೌಡ ತುಟಿಕ್ ಪಿಟಿಕ್ ಎನ್ನಲಿಲ್ಲ.

ಸದಾನಂದಗೌಡರ ಅಸಮರ್ಪಕ ಉತ್ತರದಿಂದ ಬೇಸರಗೊಂಡ ರೈತರು ಮತ್ತೆ ಆರ್‌ಸಿಇಪಿ ವಿರೋಧದ ಬಗಗ್ಗೆ ಕೇಂದ್ರದ ಜೊತೆ ಮಾತನಾಡಿ ಎಂದಾಗ ಪೊಲೀಸರು ರೈತರನ್ನು ಸುಮ್ಮನಾಗಿಸಿದರು.

ಭಾರತದಲ್ಲಿ ಯುವಕರ ಸಂಖ್ಯೆ ಹೆಚ್ಚುತ್ತಿದೆ.ಕೃಷಿಯಿಂದ ಯುವಕರು ವಿಮುಖರಾದರೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ.ಯುವಕರು ಕೃಷಿ ಬಗ್ಗೆ ಆಸಕ್ತರಾದರೆ ದೇಶದ ದಿಕ್ಕೇ ಬದಲಾಗುತ್ತದೆ ಎಂದು ಕೇಂದ್ರ ರಾಸಾಯನಿಕ ಸಚಿವ ಡಿ.ವಿ.ಸದಾನಂದಗೌಡ ಅಭಿಪ್ರಾಯ ಪಟ್ಟರು.

ಕೃಷಿ ಎನ್ನುವುದು ಅನುತ್ಪಾದಕರ ಹಾಗೂ ವಿಮುಖ ಕೆಲಸ ಎಂದು ಭಾವಿಸಲಾಗುತ್ತಿದೆ. ಜಗತ್ತಿಗೆ ಆಹಾರವನ್ನು ಉತ್ಪಾದಿಸುವ ಶಕ್ತಿ ಇರುವುದು ಭಾರತಕ್ಕೆ ಮಾತ್ರ ಎನ್ನುವುದು ತಮ್ಮ ನಂಬಿಕೆ. ಹೀಗಾಗಿ ಯುವಕರು ಕೃಷಿಕ್ಷೇತ್ರದತ್ತ ಹೆಚ್ಚು ಮನಸು ಮಾಡುವಂತಹ ವ್ಯವಸ್ಥೆಗಳು ರೂಪುಗೊಳ್ಳಬೇಕು‌. ಒಂದು ಎಕರೆಯಲ್ಲಿ ನಲವತ್ತು  ವಿವಿಧ ನಮೂನೆಯ ಬೆಳೆ ಬೆಳೆಯಬಹುದೆಂಬ ಪ್ರಾತ್ಯಕ್ಷಿಕೆ ಕೃಷಿಮೇಳದಲ್ಲಿ ಏರ್ಪಡಿಸಿರುವುದು ಖುಷಿಯ ವಿಚಾರ ಎಂದರು.

2022 ರ ಹೊತ್ತಿಗೆ ರೈತರ ಆದಾಯ ಹೆಚ್ಚಬೇಕು. ಈ ನಿಟ್ಟಿನಲ್ಲಿ ರೈತರ ಉತ್ಪನ್ನಗಳಿಗೆ ಬೆಲೆ ಹೆಚ್ಚಬೇಕು. ದ್ವಿದಳ ಬೆಳೆಗೆ ಬೆಂಬಲ ಬೆಲ ಹೆಚ್ಚಳ ಸೇರಿದಂತೆ ವಿವಿಧ ಕೇಂದ್ರದ ಯೋಜನೆಗಳು ರೈತರ ಆದಾಯ ಹೆಚ್ಚಿಸುವಂತೆ ಮಾಡುತ್ತಿವೆ. ಉತ್ತಮ ಮಾರುಕಟ್ಟೆ ವ್ಯವಸ್ಥೆ, ದಲ್ಲಾಳಿ ಹಾವಳಿಗೆ ತಡೆ, ರೈತರಿಗೆ ಕೃಷಿ ಮಾಹಿತಿ ದೊರೆಯುವುದು ಅವಶ್ಯಕವಾಗಿದೆ. ಭೂಮಿ ತನ್ನ ಅಂತರ್ ಸತ್ವವನ್ನು ಕಳೆದುಕೊಳ್ಳದ ರೀತಿಯಲ್ಲಿ ಸಾವಯವ ಕೃಷಿಗೆ ಆದ್ಯತೆ, ಮಣ್ಣಿನ ಪರೀಕ್ಷೆ, ಕೃಷಿ ಫಲವತ್ತತೆ, ಮಣ್ಣಿನ ಆರೋಗ್ಯ, ಸಾವಯವಕ್ಕೆ ಆದ್ಯತೆ ನೀಡುವ ಮೂಲಕ ಕೃಷಿವಲಯಕ್ಕೆ ಹೊಸತನ ನೀಡಬೇಕು ಎಂದು ಕರೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com