ಅಶ್ವತ್ಥ ನಾರಾಯಣ
ಅಶ್ವತ್ಥ ನಾರಾಯಣ

ವೈಟ್ ಟಾಪಿಂಗ್ ಅಕ್ರಮದ ಹಣ ಪರಮೇಶ್ವರ್ ಮನೆಯಲ್ಲಿ ಐಟಿ ದಾಳಿ ವೇಳೆ ಸಿಕ್ಕಿದೆ: ಅಶ್ವಥ್ ನಾರಾಯಣ್

ಸಿಮೆಂಟ್ ರಸ್ತೆ ನಿರ್ಮಾಣ (ವೈಟ್ ಟಾಪಿಂಗ್) ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು ಇದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಭಾಗಿಯಾಗಿದ್ದಾರೆ.

ಬೆಂಗಳೂರು: ಸಿಮೆಂಟ್ ರಸ್ತೆ ನಿರ್ಮಾಣ (ವೈಟ್ ಟಾಪಿಂಗ್) ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು ಇದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಭಾಗಿಯಾಗಿದ್ದಾರೆ. ಯೋಜನೆಯಿಂದ ಬಂದ ಕಮಿಷನ್ ಹಣವನ್ನು ಪಕ್ಷದ ಹೈಕಮಾಂಡ್ ಗೆ ನೀಡಿದ್ದಾರೆಂದು ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ್ ಆರೋಪಿಸಿದ್ದಾರೆ.
  
ರಾಜ್ಯ ಬಿಜೆಪಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ್ ಹಾಗೂ ಎನ್.ಆರ್ ರಮೇಶ್, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ  ಕಾಂಗಾರಿಗಳನ್ನು ನಡೆದ ಹಗರಣಗಳ 3900 ಪುಟಗಳ ಬೃಹತ್ ದಾಖಲೆ ಬಿಡುಗಡೆ ಮಾಡಿದರು.
  
ಸಿಮೆಂಟ್ ರಸ್ತೆ ನಿರ್ಮಾಣ (ವೈಟ್ ಟಾಪಿಂಗ್) ಯೋಜನೆಯಲ್ಲಿ ಭಾರೀಭ್ರಷ್ಟಾಚಾರ ನಡೆದಿದ್ದು ಇದರಲ್ಲಿ ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಭಾಗಿಯಾಗಿದ್ದಾರೆ.ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್,ಮಾಜಿ ಮಂತ್ರಿಗಳಾದ ಕೆ.ಜೆ. ಜಾರ್ಜ ಮತ್ತು ರಾಮಲಿಂಗಾರೆಡ್ಡಿ ನೇರ ಭಾಗಿ ಆಗಿದ್ದು ಈ ಯೋಜನೆಯಿಂದ ಬಂದ ಹಣವನ್ನು ಕಾಂಗ್ರೆಸ್ ಹೈಕಮಾಂಡ್ ಗೆ ' ಕಪ್ಪ ಹಣ ' ವಾಗಿ ನೀಡಿದ್ದಾರೆಂದು ಅವರು ನೇರ ಆರೋಪ ಮಾಡಿದರು.
  
ಸಿದ್ದರಾಮಯ್ಯ ಸರ್ಕಾರದಲ್ಲಿ ಬೆಂಗಳೂರಿನಲ್ಲಿ ರಸ್ತೆ ಸುಧಾರಣೆ ಹೆಸರಿನಲ್ಲಿ ಕೈಗೆತ್ತಿಕೊಂಡ ವೈಟ್ ಟಾಪಿಂಗ್ ಕಾಮಗಾರಿ ಭಾರೀ ಭ್ರಷ್ಟಾಚಾರದಿಂದ ಕೂಡಿದೆ.ಹೀಗಾಗಿ ಇಡೀ ಪ್ರಕರಣವನ್ನು ಸಿಬಿಐನಿಂದ ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದರು.
  
2018-19ರಲ್ಲಿ ಬೆಂಗಳೂರಿನ ರಸ್ತೆಗುಂಡಿಗೆ ಸಮಸ್ಯೆಗೆ ಪರಿಹಾರ ರೂಪದಲ್ಲಿ ಕಾಂಗ್ರೆಸ್  ಸರ್ಕಾರ ವೈಟ್ ಟಾಪಿಂಗ್ ಯೋಜನೆ ರೂಪಿಸಿತು.ಆದರೆ ಪ್ರತಿ ಕಿ.ಮೀ ವೈಟ್ ಟಾಪಿಂಗ್ ಐದಾರು ಕೋಟಿ ರೂ.ಹೆಚ್ಚು ವೆಚ್ಚ ದಾಖಲಿಸಿ ಅವ್ಯವಹಾರ ನಡೆಸಿದ್ದಾರೆ.ಮೊದಲ ಹಂತದಲ್ಲಿ 93.37 ಕಿ.ಮೀ ಗೆ 1147.76 ಕೋಟಿ ರೂ,ಎರಡನೆ ಹಂತದಲ್ಲಿ 62.80 ಕಿ.ಮೀ ಗೆ 758.56 ಕೋಟಿ ರೂ.ಮೂರನೆ ಹಂತದಲ್ಲಿ 123 ಕಿ.ಮೀ ಗೆ 1139 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದ್ದಾರೆ.ಅವಶ್ಯಕತೆಯೇ ಇಲ್ಲದ ರಸ್ತೆಗಳನ್ನು ಯೋಜನೆಯಡಿ ತಂದಿದ್ದಾರೆ.ಜತೆಗೆ ಯೋಜನೆ ಪ್ರಾರಂಭಕಲ್ಕೂ  ಮೊದಲೆ ಯುಜಿಡಿ ಲೈನ್ ಶಿಪ್ಟ್ ಮಾಡದೆ,ಎಲೆಕ್ಟ್ರಿಕ್ ಕಂಭಗಳನ್ನು ಶಿಫ್ಟ್ ಮಾಡದೆ,ಪಾದಚಾರಿ ಮಾರ್ಗಗಳನ್ನ ಸಿದ್ಧಪಡಿಸದೆ, ರಸ್ತೆಗಳ ಕಾಂಕ್ರೀಟೀಕರಣಕ್ಕೆ ಅವಕಾಶ ಕೊಟ್ಟಿದ್ದಾರೆ‌.ಎನ್ ಸಿಸಿ ಮತ್ತು ಮಧುಕಾನ್ ಎಂಬ ಎರಡು ಕಂಪನಿಗಳಿಗೆ ಗುತ್ತಿಗೆ ನೀಡಲಾಗಿತ್ತು ಎಂದು ಅವರು ಆರೋಪಿಸಿದರು.
  
ಕರೇಸಂದ್ರ ಮತ್ತು ಯಡಿಯೂರ್ ವಾರ್ಡ್ ಗಳಲ್ಲಿ  ನಾವು ಪ್ರಾಯೋಗಿಕವಾಗಿ ಅದೇ ವೈಟ್ ಟಾಪಿಂಗ್  ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪ್ರತಿ ಕಿ.ಮೀ ಗೆ ಕೇವಲ 90 ಲಕ್ಷ ರೂ.ವೆಚ್ಚವಾಗಿದೆ.ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವೈಟ್ ಟಾಪಿಂಗ್ ಗೆ  ಪ್ರತಿ ಕಿ.ಮೀ ಗೆ12 ಕೋಟಿ ರೂ ವೆಚ್ಚ ಮಾಡಿರುವ ಲೆಕ್ಕ ತೋರಿಸಿದ್ದಾರೆ.ಬಹುಷಃ  ಮಾಜಿ ಡಿಸಿಎಂ ಪರಮೇಶ್ವರ್ ನಿವಾಸದಲ್ಲಿ ಐಟಿ ದಾಳಿ ನಡೆದಾಗ ಸಿಕ್ಕಿರುವ ಹಣ ಇದೇ ವೈಟ್ ಟಾಪಿಂಗ್ ಅವ್ಯವಹಾರದಲ್ಲಿ ಪಡೆದಿರುವ ಕಮೀಷನ್ ಹಣ ಎಂಬ ಶಂಕೆ ಇದೆ ಎಂದು ಅಶ್ವಥ್ ನಾರಾಯಣ್ ಗಂಭೀರ ಆರೋಪ ಮಾಡಿದರು.
   
ಬಳಿಕ ಮಾತನಾಡಿದ  ಮಾಜಿ ಉಪ ಮೇಯರ್ ಹರೀಶ್, ವೈಟ್ ಟಾಪಿಂಗ್ ಕರ್ಮಕಾಂಡಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶದ ಗುಂಡೂರಾವ್ ನೇರ ಭಾಗಿಯಾಗಿದ್ದಾರೆ.ತಾಂತ್ರಿಕ ಗುಣಮಟ್ಟದಲ್ಲಿ ದಿನೇಶದ ಗುಂಡೂರಾವ್ ಗುತ್ತಿಗೆದಾರರೊಂದಿಗೆ ರಾಜೀಯಾಗಿದ್ದಾರೆ. ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿಲ್ಲ ಎನ್ನುವುದಾದರೆ ಇದರ ಸಮಗ್ರ ತನಿಖೆಗೆ ಒತ್ತಾಯಿಸಲಿ.ಹಾಗೂ ತಾಕತ್ತಿದ್ದರೆ ಇದ್ದರೆ ಸರ್ಕಾರಕ್ಕೆ ಪತ್ರ ಬರೆಯಲಿ ಎಂದು ದಿನೇಶ್ ಗುಂಡೂರಾವ್ ಗೆ ಎಸ್. ಹರೀಶ್ ಸವಾಲು ಹಾಕಿದರು.
  
ಗಾಂಧಿನಗರ ಕ್ಷೇತ್ರದಲ್ಲಿ ಕಿ.ಮೀ ವೈಟ್ ಟಾಪಿಂಗ್ ರಸ್ತೆಗೆ 15.17ಕೋಟಿ ಖರ್ಚು ಮಾಡಿ ಗುತ್ತಿಗೆದಾರರಿಗೆ ಕಾಮಗಾರಿ ಅಪೂರ್ಣ ಆಗಿದ್ದರೂ ಬಿಲ್ ಪಾವತಿಸಲಾಗಿದೆ ಎಂಬ ಗಂಭೀರ ಆರೋಪವಿದೆ. ದಿನೇಶ್ ಗುಂಡೂರಾವ್ ಅವರಿಗೂ ಅಮೃತ ಗುತ್ತಿಗೆ ಸಂಸ್ಥೆಗೂ ಅವಿನಾಭಾವ ಸಂಬಂಧ ಇರುವುದು ಅನೇಕ ಪ್ರಸಂಗಗಳಲ್ಲಿ ರುಜುವಾತಾಗಿದೆ ಎಂದು ಅವರು ಆರೋಪಿಸಿದರು.
  
ಎನ್. ಆರ್. ರಮೇಶ್ ಮಾತನಾಡಿ, ಮೊದಲ ಹಂತದ ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಎಲ್ಲೂ ಯುಟಿಲಿಟಿ ಶಿಫ್ಟ್ ಆಗಿಲ್ಲ.ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಇತ್ತೀಚೆಗೆ ಕಾಂಗ್ರೆಸ್ನ ಮಾಜಿ ಮೇಯರ್ ಗಳು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ.ಮಾಜಿ ಮೇಯರ್ ಜಿ. ಪದ್ಮಾವತಿ, ಎಂ.ರಾಮಚಂದ್ರಪ್ಪ, ಮಾಜಿ ಆಡಳಿತ ಪಕ್ಷದ ನಾಯಕ ಎಂ. ಶಿವರಾಜು, ಹಾಲಿ ನಾಯಕ ಅಬ್ದುಲ್ ವಾಜೀದ್ ಅವರುಗಳು ಪಾಲಿಕೆಯ ಅನುದಾನಗಳನ್ನು ಗುಳುಂ ಮಾಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಎಲ್ಲ ಯೋಜನೆಗಳಲ್ಲಿ ಆಗಿರುವ ಅವ್ಯವಹಾರಗಳನ್ನು ಬಯಲಿಗೆ ತಂದಿದ್ದೇವೆ. ಇದರ ವಿರುದ್ದ ನಿರಂತರ ಹೋರಾಟ ಮುಂದುವರೆಯುತ್ತದೆ ಎಂದು ಅವರು ಸವಾಲು ಹಾಕಿದರು.
  
ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಆಗಿರುವ ಅವ್ಯವಹಾರಗಳು ಮತ್ತು ತಿಂದಿರುವ ಹಣ ಎಷ್ಟು ಎಂಬುದರ ಬಗ್ಗೆ ಮೂರು ತಿಂಗಳಲ್ಲಿ ಸತ್ಯ ಬಯಲಾಗಲಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮೆ.ಮಹೇಶ್ವರಿ ಕನ್ಸಸ್ಟ್ರಕ್ಷ ನ್ ನಿಂದ 30 ಕೋಟಿ ರೂ.ಕಿಕ್ ಬ್ಯಾಕ್ ಪಡೆದಿದ್ದಾರೆ ಅಲ್ಲದೆ ಬಿಬಿಎಂಪಿ ಸದಸ್ಯ ನಟರಾಜ್ ಹತ್ಯೆಯಲ್ಲಿ ರಾಜಕೀಯ ಕೈವಾಡವಿದೆ.ಮುಂದಿನ ದಿನಗಳಲ್ಲಿ ಪ್ರಕರಣದಲ್ಲಿ ಭಾಗಿಯಾದವರಿಂದಲೇ ಸತ್ಯ ಬಹಿರಂಗಗೊಳಿಸುತ್ತೇವೆ. ಪ್ರಕರಣದಲ್ಲಿ ಭಾಗಿಯಾದವರಿಂದಲೇ ಸುದ್ದಿಗೋಷ್ಟಿ ನಡೆಸು ಹತ್ಯೆಗೆ ಸುಪಾರಿ ನೀಡಿದವರ ಬಣ್ಣ ಬಯಲುಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
  
2014-15ರಿಂದ 2018ರ ನಾಲ್ಕು ವರ್ಷಗಳ ಅವಧಿಯಲ್ಲಿ ರಸ್ತೆ ಅಭಿವೃದ್ದಿಗೆ ಸರ್ಕಾರ 14,600 ಕೋಟಿ ರೂ ವೆಚ್ಚ ಮಾಡಿದೆ.ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಕಾಂಗ್ರೆಸ್ ನ ಮಾಜಿ ಮೇಯರ್ ಗಳು ಹಾಗೂ ಕಾಂಗ್ರೆಸ್ ವಕ್ತಾರ ಉಗ್ರಪ್ಪ ಒಪ್ಪುತ್ತಾರೆಯೇ ಎಂದು ಇವೇ ವೇಳೆ ಅವರು ಪ್ರಶ್ನಿಸಿದರು.

Related Stories

No stories found.

Advertisement

X
Kannada Prabha
www.kannadaprabha.com