ಪ್ರವಾಹ ಸಂತ್ರಸ್ತರು
ಪ್ರವಾಹ ಸಂತ್ರಸ್ತರು

ಬಾಗಲಕೋಟೆ: ಸಂತ್ರಸ್ತರ ಬದುಕಿಗೆ ಬೆಳಕಾಗಿ ಬರಲಿಲ್ಲ ಈ ಬೆಳಕಿನ ಹಬ್ಬ!

ಮೂರು ತಿಂಗಳಿನಿಂದ ಮೇಲಿಂದ ಮೇಲೆ ಉಂಟಾಗುತ್ತಿರುವ ಪ್ರವಾಹ, ಸತತ ಮಳೆಯಿಂದ ಉಂಟಾಗಿರುವ ಮನೆಗಳ ಕುಸಿತದಿಂದ  ನೆರೆ ಸಂತ್ರಸ್ತ ಪ್ರದೇಶಗಳಲ್ಲಿನ ಮನೆಗಳಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮವೇ ಇಲ್ಲವಾಗಿದೆ.

ಬಾಗಲಕೋಟೆ: ಮೂರು ತಿಂಗಳಿನಿಂದ ಮೇಲಿಂದ ಮೇಲೆ ಉಂಟಾಗುತ್ತಿರುವ ಪ್ರವಾಹ, ಸತತ ಮಳೆಯಿಂದ ಉಂಟಾಗಿರುವ ಮನೆಗಳ ಕುಸಿತದಿಂದ  ನೆರೆ ಸಂತ್ರಸ್ತ ಪ್ರದೇಶಗಳಲ್ಲಿನ ಮನೆಗಳಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮವೇ ಇಲ್ಲವಾಗಿದೆ.

ಜನತೆಯ ಪಾಲಿಗೆ ಬೆಳಕಿನ ಹಬ್ಬವಾಗಬೇಕಿದ್ದ ದೀಪಾವಳಿ ಸಂತ್ರಸ್ತರ ಬಾಳಿನಲ್ಲಿ ಕತ್ತಲಾಗಿಯೇ ಉಳಿದಿದೆ. ಗಾಯದ ಮೇಲೆ ಬರೆ ಎಳೆದಂತೆ ಜಿಲ್ಲೆಯ ಮಲಪ್ರಭ, ಘಟಪ್ರಭ ಮತ್ತು ಕೃಷ್ಣಾ ನದಿಗಳಲ್ಲಿ ಮೂರು ಬಾರಿ ಪ್ರವಾಹ ಉಂಟಾಗಿ, ನದಿ ತೀರದ ಗ್ರಾಮಗಳು ಜಲಾವೃತಗೊಂಡು ಜನತೆಯ ಬದುಕನ್ನೇ ಮೂರಾಬಟ್ಟೆ ಮಾಡಿ ಬಿಟ್ಟಿದೆ. 

ಮೂರು ಬಾರಿ ಮನೆಗಳನ್ನು ಖಾಲಿ ಮಾಡಿ  ಸುರಕ್ಷಿತ ಸ್ಥಳಗಳಿಗೆ ಅಡ್ಡಾಡುವುದರಲ್ಲಿ ಪ್ರವಾಹ ಸಂತ್ರಸ್ತರು ಹೈರಾಣಾಗಿ ಹೋಗಿದ್ದಾರೆ. ಆಗಸ್ಟ್  ತಿಂಗಳಲ್ಲಿ ಮೊದಲ ಬಾರಿಗೆ ಬಂದ ಪ್ರವಾಹದ ವೇಳೆಯೇ ಗ್ರಾಮಗಳು ಜಲಾವೃತಗೊಂಡು ಮನೆಗಳಲ್ಲಿ  ನೀರು  ನಿಂತ ಪರಿಣಾಮ ಬಹುತೇಕ ಮಣ್ಣಿನ ಮನೆಗಳು ಕುಸಿದು ಬಿದ್ದಿವೆ. 

ಇತರ ಮನೆಗಳಿಗೂ ನೀರು ನುಗ್ಗಿದ ಪರಿಣಾಮ ಜನತೆ ಉಟ್ಟ ಬಟ್ಟೆಯಲ್ಲಿಯೇ ಮನೆ ಬಿಟ್ಟು ಗಂಜಿ ಕೇಂದ್ರಗಳತ್ತ ಮುಖ ಮಾಡಿದ್ದರು. ಆ ವೇಳೆಯಲ್ಲಿಯೇ ಎಷ್ಟೊ ಕುಟುಂಬಗಳು ಜಾನುವಾರುಗಳನ್ನು ಮನೆಗಳಲ್ಲಿದ್ದ ಕಾಗದ ಪತ್ರಗಳನ್ನು, ಮನೆಯಲ್ಲಿನ ನಿತ್ಯ ಬಳಕೆ ಸಾಮಗ್ರಿಗಳನ್ನು ಕಳೆದುಕೊಂಡು ದಿಕ್ಕಿತೋಚದಂತಾಗಿದ್ದರು.

ಎರಡು ಮೂರನೇ ಬಾರಿಗೆ ಪ್ರವಾಹ ಉಂಟಾಗಿ ಗ್ರಾಮಗಳು ಜಲಾವೃತಗೊಂಡಿದ್ದರಿಂದ ಗ್ರಾಮಸ್ಥರೆಲ್ಲ ಊರನ್ನೇ ಖಾಲಿ ಮಾಡಿದ್ದಾರೆ. ಮೊದಲನೇ ಬಾರಿಗೆ ಪ್ರವಾಹ ಬಂದು ಹೋದಾಗ ಬಿದ್ದ ಮನೆಗಳಲ್ಲಿನ ಗಟ್ಟಿ ಭಾಗವನ್ನೇ ಸ್ವಚ್ಚಮಾಡಿಕೊಂಡು ವಾಸವಾಗಿದ್ದರು. ಸರ್ಕಾರ ಮತ್ತು ದಾನಿಗಳಿಂದ ತಕ್ಕ ಮಟ್ಟಿನ ಸಹಾಯ ಸಿಕ್ಕಿತಾದರೂ ಎರಡು ಮತ್ತು ಮೂರನೇ ಬಾರಿಗೆ ಪ್ರವಾಹ ಬಂದಾಗ ಪ್ರವಾಹ ಸಂತ್ರಸ್ತರನ್ನು ಕೇಳುವವರೆ ಇಲ್ಲವಾಗಿದೆ.

ಮನೆ, ಮಗ್ಗ, ಜಾನುವಾರುಗಳನ್ನು ಕಳೆದುಕೊಂಡು ಬೀದಿ ಪಾಲಾಗಿರುವ, ಇಂದಿಗೂ ಬೀದಿ ಬದಿಯಲ್ಲಿ ಟೆಂಟ್ ಹಾಕಿಕೊಂಡು, ದಾನಿಗಳ ಸಹಕಾರ ಮತ್ತು ಸರ್ಕಾರ ಅಲ್ಲಲ್ಲಿ ನಿರ್ಮಿಸಿರುವ ತಾತ್ಕಾಲಿಕ ಶೆಡ್‍ಗಳಲ್ಲಿ ವಾಸಿಸುತ್ತಿದ್ದಾರೆ. ಸರ್ಕಾರ ನಿರ್ಮಿಸಿರುವ ತಾತ್ಕಾಲಿಕ ಶೆಡ್‍ಗಳು ಎಲ್ಲ ಸಂತ್ರಸ್ತರಿಗೂ ಸಿಕ್ಕಿಲ್ಲ. ಅತ್ತ ಮನೆಯೂ ಇಲ್ಲ, ಇತ್ತ ತಾತ್ಕಾಲಿಕ ಶೆಡ್ಡೂ ಇಲ್ಲದಾಗಿ ಬಹುತೇಕ ಪ್ರವಾಹ ಸಂತ್ರಸ್ತರು ಅತಂತ್ರವಾಗಿದ್ದಾರೆ. 

ಮನೆಗಳು ಬಿದ್ದವರಿಗೆ ಮನೆಗಳನ್ನು ಕಟ್ಟಿಕೊಳ್ಳವವರೆಗೆ ಬಾಡಿಗೆ ಮನೆಯಲ್ಲಿ ಇರಲು ಸರ್ಕಾರವೇ ಬಾಡಿಗೆ ಹಣ ಭರಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದರೂ ಬಾಡಿಗೆ ಮನೆಯಲ್ಲಿರುವ ಸಂತ್ರಸ್ತರಿಗೆ ಬಾಡಿಗೆ ಹಣವೇ ಬಂದಿಲ್ಲ. ಎಷ್ಟೊ ಜನ ಬಾಡಿಗೆ ಮನೆ ಬಿಟ್ಟು ಸಮುದಾಯ ಭವನ ದೇವಸ್ಥಾನಗಳಲ್ಲೇ ಜೀವನ ಸಾಗಿಸುತ್ತಿದ್ದಾರೆ.

ಪ್ರವಾಹ ಪೀಡಿತ ಗ್ರಾಮಗಳು ಜನರಿಲ್ಲದೇ ನರಕ ಸದೃಶ ವಾತಾವರಣ ಕಾಣಬರುತ್ತಿದೆ. ಸಂತ್ರಸ್ತರಿಗೆ ಸಮರ್ಪಕವಾಗಿ ಪರಿಹಾರ ಬಾರದೇ ಇರುವುದರಿಂದ ಅವರೆಲ್ಲ ಸರ್ಕಾರಕ್ಕೆ ಹಿಡಿ ಶಾಪ ಹಾಕುವಂತಾಗಿದೆ.

ಹ್ಯಾಟ್ರಿಕ್ ಪ್ರವಾಹ, ಸತತ ಮಳೆಯ ಮಧ್ಯೆ ಬೆಳಕಿನ ಹಬ್ಬ ದೀಪಾವಳಿ ಬಂದಿದೆ. ಪ್ರವಾಹ ಸಂತ್ರಸ್ತ ಗ್ರಾಮಗಳಲ್ಲಿ ಹಬ್ಬದ ವಾತಾವರಣವೇ ಕಾಣಿಸುತ್ತಿಲ್ಲ. ಬಹುತೇಕ ಪ್ರವಾಹ ಸಂತ್ರಸ್ತರು ಬಟ್ಟೆಗಳ ಖರೀದಿ ಊಸಾಬರಿಗೆ ಹೋಗಿಲ್ಲ. ತಾತ್ಕಾಲಿಕ ಶೆಡ್‍ಗಳಲ್ಲಿ ಹೇಗೆ ಸಂಭ್ರಮದ ಹಬ್ಬ ಮಾಡುವುದು.ಕೈಯಲ್ಲಿ ಕಾಸಿಲ್ಲ. ಇದ್ದ ಕಾಳು ಕಡಿ ನದಿಗೆ ಕೊಚ್ಚಿಕೊಂಡು ಹೋಗಿವೆ. ಬೆಳೆದ ಬೆಳೆ ಕೈಗೆ ಬಂದಿಲ್ಲ. ಇಂತಹ ಸನ್ನಿವೇಶದಲ್ಲಿ ಹೇಗೆ ಹಬ್ಬವನ್ನು ಆಚರಿಸುವುದು ಎನ್ನುವ ಪ್ರಶ್ನೆ ಪ್ರವಾಹ ಸಂತ್ರಸ್ತರನ್ನು ಕಾಡುತ್ತಿದೆ.

ಪ್ರವಾಹ ಪೀಡಿತ ಯಾವ ಗ್ರಾಮ ಪಟ್ಟಣಗಳಲ್ಲೂ ದೀಪಾವಳಿ ಹಬ್ಬದಲ್ಲಿ ಇರಬೇಕಾದ ಸಂಭ್ರಮದ ವಾತಾವರಣ ಕಾಣಿಸುತ್ತಿಲ್ಲ. ಈ ಬಾರಿಯ ದೀಪಾವಳಿ ಸಂತ್ರಸ್ತರ ಬಾಳಿಗೆ ಬೆಳಕಾಗದೇ ಕತ್ತಲೆಯಾಗಿ ಪರಿಣಮಿಸಿದೆ.

ಏತನ್ಮಧ್ಯೆ ಪ್ರಮುಖ ರಾಜಕೀಯ ಪಕ್ಷಗಳು ನೆರೆ ಸಂತ್ರಸ್ತರ ಸ್ಥಿತಿಯನ್ನೆ ತಮ್ಮ ರಾಜಕೀಯದ ಅಸ್ತ್ರವನ್ನಾಗಿಸಿಕೊಳ್ಳಲು ಹೊರಟಿರುವುದು ದುರದೃಷ್ಟಕರ ಸಂಗತಿ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೆರೆ ಸಂತ್ರಸ್ತರ ವಿಷಯದಲ್ಲಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವ ಆರೋಪ ವ್ಯಾಪಕವಾಗಿದೆ. ಈ ಆರೋಪವನ್ನು ಆಳುವ ಸರ್ಕಾರ ಒಪ್ಪುತ್ತಿಲ್ಲ. ನೆರೆ ಸಂತ್ರಸ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು, ಜಲಾವೃತ ಗ್ರಾಮಗಳ ಸ್ಥಳಾಂತರಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎನ್ನುವ ವಾದ ಮಂಡಿಸುತ್ತಿವೆ.

ಇನ್ನೊಂದು ಕಡೆ ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರದ ನೀತಿಯನ್ನು ಖಂಡಿಸುತ್ತಲೇ ನೆರೆ ಸಂತ್ರಸ್ತರ ಪರಿಸ್ಥಿತಿ ಲಾಭ ಪಡೆಯಲು ಪಾದಯಾತ್ರೆ ನಡೆಸಲು ಮುಂದಾಗಿದೆ. ಆಳುವ ಪಕ್ಷ ಮತ್ತು ಪ್ರತಿಪಕ್ಷಗಳ ಧೋರಣೆಗಳ ಮಧ್ಯೆ ನೆರೆ ಸಂತ್ರಸ್ತರು ಬದುಕು ಕಟ್ಟಿಕೊಳ್ಳುವುದು ದುಸ್ತರವಾಗಿದೆ.

ಇಂತಹ ಸಂಕಷ್ಟ ಸ್ಥಿತಿಯಲ್ಲಿ ದೀಪಾವಳಿ ಹಬ್ಬ ಬಂದಿದೆ. ಸಂಭ್ರಮದ ದೀಪಾವಳಿ ನೆರೆ ಸಂತ್ರಸ್ತರ ಪಾಲಿಗೆ ಬೆಳಕಿನ ಹಬ್ಬವಾಗಿ ಕಾಣಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಯಾಕಾದರೂ ಹಬ್ಬ ಬಂದಿದೆ ಎನ್ನುತ್ತಿದ್ದಾರೆ. ಎಷ್ಟೆ ಕಷ್ಟವಿದ್ದರೂ ದೀಪಾವಳಿ ಆಚರಿಸದೇ ಬಿಡುವುದು ಎನ್ನುತ್ತಿರುವ ಸಂತ್ರಸ್ತರು ಮಕ್ಕಳಿಗೆ ಬಟ್ಟೆಯನ್ನಾದರೂ ಖರೀದಿಸಿ, ಶಾಸ್ತ್ರಕ್ಕಾದರೂ ಹಬ್ಬ ಆಚರಿಸಬೇಕಲ್ಲ. ದುಡ್ಡಿಲ್ಲದಿದ್ದರೆನಂತೆ ಸಾಲವನ್ನಾದರೂ ಮಾಡಲೇಬೇಕಲ್ಲ ಎನ್ನುತ್ತಿದ್ದಾರೆ. 

ಒಟ್ಟಾರೆ ಈ ಬಾರಿ ದೀಪಾವಳಿ ನೆರೆ ಸಂತ್ರಸ್ತರ ಬಾಳಿಗೆ ಸಂತಸವನ್ನುಂಟು ಮಾಡುವ ಹಬ್ಬವಾಗಿ ಬರದೇ ಮತ್ತಷ್ಟು ಕತ್ತಲಲ್ಲೇ ಕಾಲ ಕಳೆಯುವ ಹಬ್ಬವಾಗಿ ಬಂದಿದೆ ಎನ್ನುವ ಮಾತು ನೆರೆ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕೇಳಿಸುತ್ತಿದೆ.

ವರದಿ: ವಿಠ್ಠಲ ಆರ್. ಬಲಕುಂದಿ

Related Stories

No stories found.

Advertisement

X
Kannada Prabha
www.kannadaprabha.com