ಕೆ.ಐ.ಎಗೆ ತ್ವರಿತ ಪ್ರಯಾಣಕ್ಕಾಗಿ ಶೀಘ್ರವೇ ದೇವನಹಳ್ಳಿ ಹಾಲ್ಟ್ ರೈಲು ಸೌಲಭ್ಯ: ಸಂಸದ ತೇಜಸ್ವಿ ಸೂರ್ಯ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಡಿಮೆ ಸಮಯದಲ್ಲಿ ತ್ವರಿತವಾಗಿ ತಲುಪುವ ಸಲುವಾಗಿ ವಿಮಾನ ನಿಲ್ದಾಣ ಬಳಿಯ ದೇವನಹಳ್ಳಿ ಹಾಲ್ಟ್‌ನಲ್ಲಿ ರೈಲು ನಿಲುಗಡೆಗಳನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮಾರೊಂದಿಗೆ ಸಂಸದ ತೇಜಸ್ವಿ ಸೂರ್ಯ ಸಭೆ
ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮಾರೊಂದಿಗೆ ಸಂಸದ ತೇಜಸ್ವಿ ಸೂರ್ಯ ಸಭೆ

ಬೆಂಗಳೂರು: ಬೆಂಗಳೂರು ನಾಗರಿಕರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಡಿಮೆ ಸಮಯದಲ್ಲಿ ತ್ವರಿತವಾಗಿ ತಲುಪುವ ಸಲುವಾಗಿ ವಿಮಾನ ನಿಲ್ದಾಣ ಬಳಿಯ ದೇವನಹಳ್ಳಿ ಹಾಲ್ಟ್‌ನಲ್ಲಿ ರೈಲು ನಿಲುಗಡೆಗಳನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು ಎಂದು ಬೆಂಗಳೂರು ದಕ್ಷಿಣ ಸಂಸತ್ ಸದಸ್ಯ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ಅ.31 ರಂದು ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮಾರೊಂದಿಗೆ ನಡೆಸಿದ ವಿಸ್ತೃತ ಚರ್ಚೆಯ ಸಂದರ್ಭದಲ್ಲಿ  ದೇವನಹಳ್ಳಿಯಲ್ಲಿ ಹಾಲ್ಟ್ ಸ್ಟೇಷನ್ ಬರಲಿರುವುದರಿಂದ, ವಿಮಾನ ನಿಲ್ದಾಣಕ್ಕೆ ಪ್ರಯಾಣದ ಸೇವೆಗಳನ್ನು ಶೀಘ್ರದಲ್ಲಿ ಲಭ್ಯವಾಗುವಂತೆ  ಸಂಸತ್ ಸದಸ್ಯ ತೇಜಸ್ವಿ ಸೂರ್ಯ ಮನವಿ ಮಾಡಿದರು.
 
ನಾಯಂಡಹಳ್ಳಿ ರೈಲ್ವೆ ನಿಲ್ದಾಣದ ಪರಿಶೀಲನೆಯ ನಂತರ ನವೀಕರಣ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಲು ಡಿಆರ್‌ಎಂ  ಅವರನ್ನು ಭೇಟಿಯಾಗಿದ್ದಾಗ, ಕೆಎಸ್‌ಆರ್ ಬೆಂಗಳೂರು (ಮೆಜೆಸ್ಟಿಕ್) ನಿಂದ ದೇವನಹಳ್ಳಿ ಅಥವಾ ಅದರಾಚೆ ಹೋಗುವ ಎರಡು ರೈಲುಗಳಿಗೆ ದೇವನಹಳ್ಳಿ ಹಾಲ್ಟ್‌ನಲ್ಲಿ ನಿಲುಗಡೆ ನೀಡಲಾಗುವುದು ಎಂದು ಡಿಆರ್‌ಎಂ ಅಶೋಕ್ ಕುಮಾರ್ ವರ್ಮಾರವರು ಸಂಸದರಿಗೆ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಹೆಚ್ಚುವರಿ ಸೇವೆಗಾಗಿ ಗರಿಷ್ಠ ಸಮಯದ ನಿಲುಗಡೆ ನೀಡಲಾಗುವುದು ಎಂದು ತಿಳಿಸಿದರು.

ನಗರದಲ್ಲಿನ ಟ್ರಾಫಿಕ್ ಸಮಸ್ಯೆಯಿಂದಾಗಿ ನಾಗರಿಕರು ವಿಮಾನ ನಿಲ್ದಾಣವನ್ನು ತಲುಪಲು 2 ಅಥವಾ 2.5 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಸಂಸದರು ಡಿಆರ್ ಎಂ ರವರ ಗಮನಕ್ಕೆ ತಂದರು.

ವಿಮಾನ ನಿಲ್ದಾಣದಿಂದ ಕೇವಲ 10 ನಿಮಿಷಗಳ ಪ್ರಯಾಣದ ಅಂತರದಲ್ಲಿರುವ ದೇವನಹಳ್ಳಿ ಹಾಲ್ಟ್‌ನಲ್ಲಿ ರೈಲುಗಳ ನಿಲುಗಡೆಯಿಂದ ಪ್ರಯಾಣದ ಸಮಯವನ್ನು ಕನಿಷ್ಟಕ್ಕೆ ಇಳಿಸಬಹುದಾಗಿದ್ದು ಇದು ಬೆಂಗಳೂರಿನ ಕನಿಷ್ಟ ಅರ್ಧ ಮಿಲಿಯನ್ ಜನರಿಗೆ ಪ್ರಯೋಜನವಾಗಲಿದೆ. ಇನ್ನು ಕೆಐಎಎಲ್, ದೇವನಹಳ್ಳಿ ಹಾಲ್ಟ್‌ನಿಂದ ವಿಮಾನ ನಿಲ್ದಾಣದ ಸುಗಮ ಸಂಪರ್ಕಕ್ಕಾಗಿ ಫೀಡರ್ ಸೇವೆಗಳನ್ನು ಆರಂಭಿಸಲಿದೆ.

ಇನ್ನು, ನಾಯಂಡಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಮೈಸೂರಿನಿಂದ ಹೋಗುವ ಮತ್ತು ಬರುವ ರೈಲುಗಳ ನಿಲುಗಡೆ ಒದಗಿಸುವಂತೆ   ಮಾಡಿದಾಗ ನಾಯಂಡಹಳ್ಳಿಯಲ್ಲಿ ಬಸವ ಎಕ್ಸ್ ಪ್ರೆಸ್ ಮತ್ತು ತಾಳಗುಪ್ಪ ಎಕ್ಸ್ ಪ್ರೆಸ್ ಗಳಿಗೆ ನಿಲುಗಡೆಗಳನ್ನು ಕಲ್ಪಿಸುವುದಾಗಿ ಡಿಆರ್‌ಎಂ ಭರವಸೆ ನೀಡಿದರು ಎಂದ ತೇಜಸ್ವಿ ಸೂರ್ಯ ಈ ಮೂಲಕ ನಾಯಂಡಹಳ್ಳಿಯನ್ನು ಮೆಟ್ರೋ, ಬಸ್ ಮತ್ತು ಉಪನಗರ ರೈಲು ಸೇವೆಗಳನ್ನು ಒಳಗೊಂಡಿರುವ ಪರಿಪೂರ್ಣ ಸಂಚಾರದ ಹಬ್ ಆಗಿ ಅಭಿವೃದ್ಧಿಪಡಿಸಬಹುದು ಆಶಾಭಾವ ವ್ಯಕ್ತಪಡಿಸಿದರು.

ನಾಯಂಡಹಳ್ಳಿ ರೈಲ್ವೆ ನಿಲ್ದಾಣದ ಸುತ್ತ ಮೂಲಸೌಕರ್ಯಗಳನ್ನು ಕಲ್ಪಿಸಿ ಇಲ್ಲಿ ನಿಲುಗಡೆಗಳನ್ನು ಒದಗಿಸುವುದರಿಂದ ಕೆಎಸ್ಆರ್ (ನಗರ ಕೇಂದ್ರ ರೈಲ್ವೆ ನಿಲ್ದಾಣ )  ಮೆಜೆಸ್ಟಿಕ್ ಸುತ್ತಮುತ್ತಲಿನ ದಟ್ಟಣೆಯನ್ನು ಕಡಿಮೆ ಮಾಡಬಹುದು ಎಂದರು.

ಅಕ್ಟೋಬರ್ 23 ರಂದು ವಸತಿ ಸಚಿವ ವಿ.ಸೋಮಣ್ಣ ಅವರೊಂದಿಗೆ ಇಲ್ಲಿಗೆ ಭೇಟಿನೀಡಿದ ನಂತರ ನಾಯಂಡಹಳ್ಳಿ ರೈಲ್ವೆ ನಿಲ್ದಾಣದ ನವೀಕರಣದ ಬಗ್ಗೆ ಸಂಸದರು ಹಲವು ವೇದಿಕೆಗಳಲ್ಲಿ ಗಮನ ಸೆಳೆದಿದ್ದರು. ಇನ್ನು, ಕಸದ ಬುಟ್ಟಿಗಳ ಮೇಲೆ  ಸ್ಥಳೀಯ ಭಾಷೆಯಲ್ಲಿ ಮಾಹಿತಿ ಇರಬೇಕೆಂದು ಸಂಸದರು ಒತ್ತಾಯಿಸಿದ ಬೆನ್ನಲ್ಲೇ, ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ 3030 ಜೋಡಿ ಕಸದ ಬುಟ್ಟಿಗಳ ಮಾಹಿತಿಯನ್ನು ಒಂದು ವಾರದಲ್ಲಿ ಬದಲಾಯಿಸುವುದಾಗಿ ಬೆಂಗಳೂರು ವಿಭಾಗೀಯ ರೈಲ್ವೆ ಭರವಸೆ ನೀಡಿದ್ದಾರೆ. ಸಂಸದರು ನೀಡಿದ್ದ ನಿರ್ದೇಶನದಂತೆ, ನಿಲ್ದಾಣದ ಸುತ್ತಮುತ್ತಲಿನ ಜಮೀನಿನ ಫೆನ್ಸಿಂಗ್ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳಿಸುವ ಭರವಸೆಯನ್ನು ರೈಲ್ವೆ ಅಧಿಕಾರಿಗಳು ನೀಡಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com