ಕುಡುಕರ ಮನೆ ಬಾಗಿಲಿಗೆ ಮದ್ಯ, ಸರ್ಕಾರದ ಚಿಂತನೆ: ಅಬಕಾರಿ ಸಚಿವ ಎಚ್ ನಾಗೇಶ್

ಕುಡುಕರು ಇನ್ಮುಂದೆ ಬಾರ್ ಗಳನ್ನು ಹುಡುಕಿಕೊಂಡು ಹೋಗುವ ಅಗತ್ಯವಿಲ್ಲ...! ಬದಲಾಗಿ ಮನೆ ಬಾಗಿಲಿಗೆ  ಮದ್ಯ ಪೂರೈಕೆ ಮಾಡಲು ಸರ್ಕಾರವೇ  ಚಿಂತನೆ ನಡೆಸಿದೆ
ಕುಡುಕರ ಮನೆ ಬಾಗಿಲಿಗೆ ಮದ್ಯ, ಸರ್ಕಾರದ ಚಿಂತನೆ: ಅಬಕಾರಿ ಸಚಿವ ಎಚ್ ನಾಗೇಶ್
ಕುಡುಕರ ಮನೆ ಬಾಗಿಲಿಗೆ ಮದ್ಯ, ಸರ್ಕಾರದ ಚಿಂತನೆ: ಅಬಕಾರಿ ಸಚಿವ ಎಚ್ ನಾಗೇಶ್

ಬೆಂಗಳೂರು: ಕುಡುಕರು ಇನ್ಮುಂದೆ ಬಾರ್ ಗಳನ್ನು ಹುಡುಕಿಕೊಂಡು ಹೋಗುವ ಅಗತ್ಯವಿಲ್ಲ...! ಬದಲಾಗಿ ಮನೆ ಬಾಗಿಲಿಗೆ  ಮದ್ಯ ಪೂರೈಕೆ ಮಾಡಲು ಸರ್ಕಾರವೇ  ಚಿಂತನೆ ನಡೆಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮದ್ಯದ ಅಂಗಡಿ ದೂರ ಇರುವುದರಿಂದ ಕುಡುಕರಿಗೆ ಸಮಸ್ಯೆಯಾಗದಂತೆ ಸಂಚಾರಿ ಮಳಿಗೆಗಳ ಮೂಲಕ ಮನೆ ಬಾಗಿಲಿಗೆ ಮದ್ಯ ಪೂರೈಸುವ ಚಿಂತನೆ ಇಲಾಖೆ ಮುಂದಿದೆ ಎಂದು  ಅಬಕಾರಿ ಸಚಿವ ಎಚ್ ನಾಗೇಶ್ ಹೇಳಿದ್ದಾರೆ.
 
ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ಮೊಬೈಲ್ ವೈನ್ ಶಾಪ್‍ಗಳನ್ನು ತೆರೆಯಲು ಸರ್ಕಾರ ಚಿಂತನೆ ಮಾಡಿದೆ.ಎಲ್ಲೆಲ್ಲಿ ವೈನ್ ಶಾಪ್‍ಗಳಿಲ್ಲ ಅಂತಹ ಪ್ರದೇಶಗಳಲ್ಲಿ ಸಂಚಾರಿ ವೈನ್ ಶಾಪ್‍ಗಳ ವ್ಯವಸ್ಥೆಗೆ ಕ್ರಮ  ಕೈಗೊಳ್ಳಲಾಗಿದೆ.ಇದರಿಂದ ಇಲಾಖೆಗೆ ಮತ್ತಷ್ಟು ಹೆಚ್ಚಿನ ಆದಾಯ ಬರುವ ನಿರೀಕ್ಷೆ ಸರ್ಕಾರದ್ದಾಗಿದೆ.ತಾಂಡಾಗಳಲ್ಲಿ  ಸಂಚಾರಿ ವೈನ್ ಶಾಪ್‍ಗಳ ವ್ಯವಸ್ಥೆ ಮಾಡಲು ಚಿಂತನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಮದ್ಯ ಪ್ರಿಯರಿಗೆ ಗುಣಮಟ್ಟದ ಮದ್ಯ ಪೂರೈಸ ಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. 2018-19 ರಲ್ಲಿ 19,750 ಸಾವಿರ  ಕೋಟಿ ರೂ ಆದಾಯ ಸಂಗ್ರಹ ಗುರಿ ನಿಗದಿ ಪಡಿಸಲಾಗಿತ್ತು. 19,943 ಕೋಟಿ ರೂ ಗುರಿಮೀರಿ ಸಾಧನೆ ಮಾಡಲಾಗಿದೆ.  2019-20 ನೇ ಸಾಲಿನಲ್ಲಿ 21 ಸಾವಿರ ಕೋಟಿ ಗುರಿ ನಿಗದಿ ಪಡಿಸಿದ್ದೇವೆ. ದೊಡ್ಡ ದೊಡ್ಡ  ಸಭೆ ಸಮಾರಂಭ, ಪಾರ್ಟಿಗಳಲ್ಲಿ  ಬೇರೆ ಕಡೆಯಿಂದ ಮದ್ಯ ತಂದು ಉಪಯೋಗಿಸುತ್ತಾರೆ.ಹೀಗಾಗಿ ಅಂತಹ ಅನಧಿಕೃತ ಪಾರ್ಟಿಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡುತ್ತಾರೆ. ಗಾಂಜಾ ಮತ್ತು ಮಾದಕವಸ್ತುಗಳ ಬಳಕೆಗೆ ಕಡಿವಾಣ  ಹಾಕುತ್ತೇವೆ ಎಂದು ಅವರು ಹೇಳಿದರು. ಮದ್ಯ ಖರೀದಿಗೆ ಆಧಾರ್ ಕಾರ್ಡ್‌ ಕಡ್ಡಾಯ ವಿಚಾರ ಮಾಡುವ ಪ್ರಶ್ನೆ ಉದ್ಬವಿಸುವುದಿಲ್ಲ.ಅಂತಹ ಕ್ರಮಗಳನ್ನು ಕೈಗೊಂಡದೆ ಇಲಾಖೆಯ ಆದಾಯಕ್ಕೆ ಹೊಡೆತ ಬೀಳಲಿದೆ.ಅಂತಹ ಪ್ರಸ್ತಾವನೆಗಳು ಇಲಾಖೆಯ ಮುಂದೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಅಬಕಾರಿ ಇಲಾಖೆಯಲ್ಲಿ ಶೇ 43 ರಷ್ಟು ಹುದ್ದೆಗಳು ಖಾಲಿ ಇದ್ದು, ಮೊದಲ ಆದ್ಯತೆ ಮೇಲೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ.1205 ಹುದ್ದೆಗಳು ಕೆಪಿಎಸ್ ಸಿ ನೇಮಕಾತಿ ಹಂತದಲ್ಲಿದ್ದು, ಉಳಿದಿರುವ  ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು. ಮದ್ಯಪಾನ ನಿಷೇಧದ ಬಗ್ಗೆ ಸರ್ಕಾರದ ಮುಂದೆ ಯಾವುದೇ ಚಿಂತನೆ ಇಲ್ಲ. ಈ ಹಿಂದೆ ಮಹಿಳೆಯರು  ಪ್ರತಿಭಟನೆ ಮಾಡಿದ್ದು ತಮಗೆ ತಿಳಿದಿಲ್ಲ.ತಾವು ಬಹುಶಃ ಬಾಂಬೆಯಲ್ಲಿದ್ದಾಗ ಈ ಘಟನೆ ನಡೆದಿರಬೇಕು ಎಂದು ಅವರು ಲಘು ಧಾಟಿಯಲ್ಲಿ ಚಟಾಕಿ ಹಾರಿಸಿದರು.

ಮದ್ಯಪಾನ ನಿಷೇಧಿಸಬೇಕೆಂದು ಮಹಿಳೆಯರು, ಕೆಲ ಸ್ವಾಮೀಜಿಗಳು ಒತ್ತಾಯ ಮಾಡುತ್ತಾರೆ ಅದು ಒಳ್ಳೆಯ ದೃಷ್ಠಿಯಿಂದ ಅವರು ಹೇಳಿದ್ದಾರೆ.ಆದರೆ ರಾಜ್ಯಕ್ಕೆ ಆದಾಯ ಬೇಕಲ್ಲ ?  ಯಾರೋ ಕೆಲವರು ಮಹಿಳೆಯರು ಹೇಳಿದ್ದಾರೆ ಎಂದು ಮದ್ಯಪಾನ ನಿಷೇಧ ಮಾಡಲು ಸಾದ್ಯವಿಲ್ಲ ಎಂದು ಸಚಿವ ಎಚ್ ನಾಗೇಶ್ ಸ್ಪಷ್ಟಪಡಿಸಿದರು. ಇದೇ ವೇಳೆ ಡಿಕೆ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಸಿರುವ  ಪ್ರಶ್ನೆಗೆ ಈ  ಬಗ್ಗೆ ಮುಖ್ಯಮಂತ್ರಿ ಅವರು ಮೂವರು ಸಚಿವರಿಗೆ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಈ  ಬಗ್ಗೆ ತಾವೇನು ಮಾತನಾಡುವುದಿಲ್ಲ ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com