ಮತ್ತೊಂದು ಹೂಡಿಕೆ ವಂಚನೆ ಪ್ರಕರಣ ಬೆಳಕಿಗೆ: 2,500 ಗ್ರಾಹಕರಿಗೆ 20 ಕೋಟಿ ರೂ. ವಂಚನೆ

ಐಎಂಎ ಹೂಡಿಕೆ ವಂಚನೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ನಗರದಲ್ಲಿ ಮತ್ತೊಂದು ಇಂತಹ ಪ್ರಕರಣ ನಡೆದಿದ್ದು, ಸುಮಾರು 2 ಸಾವಿರದ 500 ಗ್ರಾಹಕರಿಗೆ 20 ಕೋಟಿ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಐಎಂಎ ಹೂಡಿಕೆ ವಂಚನೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ನಗರದಲ್ಲಿ ಮತ್ತೊಂದು ಇಂತಹ ಪ್ರಕರಣ ನಡೆದಿದ್ದು, ಸುಮಾರು 2 ಸಾವಿರದ 500 ಗ್ರಾಹಕರಿಗೆ 20 ಕೋಟಿ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.


ಹಣ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಕಟ್ಟಿಸಿಕೊಂಡು ವ್ಯವಹರಿಸುತ್ತಿದ್ದ ಇಬ್ಬರು ವಂಚಕರನ್ನು ಕಬ್ಬನ್‍ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

ಹರಿಯಾಣದ ಜಿಂದ್ ಜಿಲ್ಲೆಯ ನಿವಾಸಿ ಸುನಿಲ್ ಕುಮಾರ್ ಚೌಧರಿ (36), ಕೇರಳದ ಕಣ್ಣೂರು ಜಿಲ್ಲೆಯ ನಿವಾಸಿ ರಿಜೇಶ ಪಿ (36) ಬಂಧಿತ ಆರೋಪಿಗಳು. ಇದೇ ಪ್ರಕರಣಕ್ಕೆ ಸಂಬಂಧಿಸಿ ಸೆ. 3ರಂದು ಮತ್ತೊಬ್ಬ ಆರೋಪಿ ಕೇರಳದ ಕಣ್ಣೂರು ಜಿಲ್ಲೆಯ ನಿವಾಸಿ ರಾಜೇಶ ಕೆ.ಎಸ್ (41) ಎಂಬಾತನನ್ನು ಬಂಧಿಸಲಾಗಿತ್ತು.

ಸಂಜೀವ್ ಕುಮಾರ್ ಎಂಬವರು ಸೆ.2ರಂದು ನೀಡಿದ ದೂರಿನ ಮೇರೆಗೆ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಅದೇ ದಿನ ಕಬ್ಬನ್‍ಪಾರ್ಕ್ ಪೊಲೀಸರು ಠಾಣಾ ವ್ಯಾಪ್ತಿಯಲ್ಲಿರುವ ಯು ಬಿ ಸಿಟಿಯ ಓಕ್‍ವುಡ್ ಹೋಟೆಲ್‍ಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಡಬ್ಲ್ಯುಎಎಂ ಸರ್ವೀಸ್ ಲಿಮಿಟೆಡ್‍ ಎಂಬ ಹೆಸರಿನ ಕಂಪನಿಯನ್ನು ಯು.ಬಿ ಸಿಟಿಯಲ್ಲಿ ತೆರೆದು ಈ ಕಂಪನಿಯಲ್ಲಿ ಹಣ ಹೂಡಿದರೆ ದ್ವಿಗುಣ ಗೊಳಿಸಿಕೊಡುವುದಾಗಿ ನಂಬಿಸುತ್ತಿದ್ದರು.

ಸಾರ್ವಜನಿಕರು 25,000 ರೂ.ಗಳನ್ನು ಕಟ್ಟಿದರೆ ವಾರಕ್ಕೆ 1,250 ರೂ.ನಂತೆ 20 ವಾರಗಳು ಹಣ ಬರುತ್ತದೆ. 21ನೇ ವಾರ 25,000 ರೂ.ಗಳು ವಾಪಸ್ ನೀಡುವುದಾಗಿ ಮತ್ತು 50,000 ರೂ.ಗಳನ್ನು ಕಟ್ಟಿದರೆ ವಾರಕ್ಕೆ 2500 ರೂ.ನಂತೆ 20 ವಾರಗಳು ಹಣ ಬರುತ್ತದೆ. 21ನೇ ವಾರ 50 ಸಾವಿರ ರೂಪಾಯಿಗಳನ್ನು ವಾಪಸ್ ನೀಡುವುದಾಗಿ ಭರವಸೆ ನೀಡಲಾಗಿತ್ತು.

ಅದೇ ರೀತಿ 1 ಲಕ್ಷ ರೂಪಾಯಿ ಕಟ್ಟಿದರೆ ವಾರಕ್ಕೆ 5000 ರೂ.ನಂತೆ 20 ವಾರಗಳು ಹಣ ಬರುತ್ತದೆ. 21ನೇ ವಾರ  1ಲಕ್ಷ ರೂ.ಗಳು ವಾಪಸ್ ನೀಡುವುದಾಗಿ ಹೇಳಿ ನಂಬಿಸಿ ವಂಚಿಸಿ ಅಕ್ರಮವಾಗಿ ಹಣಗಳಿಸುತ್ತಿದ್ದರು ಎಂದು ವಿಚಾರಣೆಯಿಂದ ತಿಳಿದುಬರುತ್ತದೆ.

ಈ ಕಂಪನಿಯ ಮುಖ್ಯ ಕಚೇರಿ ಗುರುಗಾಂವ್‍ನಲ್ಲಿದ್ದು, ಹಾಗೂ ಕಂಪನಿಯ ಹೆಚ್ಚಿನ ಗ್ರಾಹಕರನ್ನು ಆರೋಪಿ ರಿಜೇಶ ಪಿ.ಎಂಬಾತ ಕೇರಳದಿಂದ ಕರೆತಂದು ಸೇರಿಸಿರುವುದಾಗಿ ತಿಳಿದುಬಂದಿದೆ.

ಆರೋಪಿಗಳು ಸದ್ಯ ಪೊಲೀಸ್ ಬಂಧನದಲ್ಲಿದ್ದು, ಇವರನ್ನು ಬಂಧಿಸುವಲ್ಲಿ ಕಬ್ಬನ್‍ಪಾರ್ಕ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಹಾಗೂ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಯಾವುದೇ ಹೂಡಿಕೆ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡುವ ಮೊದಲು ಕಂಪನಿಯ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಳ್ಳುವಂತೆ ಪೊಲೀಸರು ಸಾರ್ವಜನಿಕರಲ್ಲಿ ಪದೇ ಪದೇ ಮನವಿ ಮಾಡುತ್ತಿದ್ದರೂ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com