ಹಾರ-ತುರಾಯಿ, ಸನ್ಮಾನ ಬೇಡ, ಅದೇ ಹಣವನ್ನು ದಾನ ನೀಡಿ: ಬೆಂಬಲಿಗರಿಗೆ ಸಚಿವರುಗಳ ಕಿವಿಮಾತು 

ಹೊಸದಾಗಿ ಅಧಿಕಾರ ವಹಿಸಿಕೊಂಡ ಮಂತ್ರಿಗಳನ್ನು ಕಾಣಲು ಹೋಗುವ ಅವರ ಅನುಯಾಯಿಗಳು, ಬೆಂಬಲಿಗರು ಬೊಕ್ಕೆಗಳನ್ನು, ಹಾರ-ತುರಾಯಿಗಳನ್ನು ಹಿಡಿದುಕೊಂಡು ಹೋಗುವುದು ಸಾಮಾನ್ಯ. 
ಹಣವನ್ನು ನೆರೆ ಸಂತ್ರಸ್ತರಿಗೆ ನೀಡುವಂತೆ ಮನವಿ ಮಾಡಿದ ಆರೋಗ್ಯ ಖಾತೆ ಸಚಿವ ಬಿ ಶ್ರೀರಾಮುಲು
ಹಣವನ್ನು ನೆರೆ ಸಂತ್ರಸ್ತರಿಗೆ ನೀಡುವಂತೆ ಮನವಿ ಮಾಡಿದ ಆರೋಗ್ಯ ಖಾತೆ ಸಚಿವ ಬಿ ಶ್ರೀರಾಮುಲು

ಬೆಂಗಳೂರು: ಹೊಸದಾಗಿ ಅಧಿಕಾರ ವಹಿಸಿಕೊಂಡ ಮಂತ್ರಿಗಳನ್ನು ಕಾಣಲು ಹೋಗುವ ಅವರ ಅನುಯಾಯಿಗಳು, ಬೆಂಬಲಿಗರು ಹೂವಿನ ಬೊಕ್ಕೆಗಳು, ಹಾರ-ತುರಾಯಿಗಳನ್ನು ಹಿಡಿದುಕೊಂಡು ಹೋಗುವುದು ಸಾಮಾನ್ಯ.


ಆದರೆ ಹಾರ, ತುರಾಯಿ ಸನ್ಮಾನಗಳಿಗೆ ದುಡ್ಡು ಖರ್ಚು ಮಾಡಬೇಡಿ, ಅದೇ ಹಣವನ್ನು ಕೊಡುಗೆ ಪೆಟ್ಟಿಗೆಗೆ ಹಾಕಿ, ಅದನ್ನು ನೆರೆ ಸಂತ್ರಸ್ತರ ಪರಿಹಾರಕ್ಕೆ ನೀಡುತ್ತೇವೆ ಎಂದಿದ್ದಾರೆ ರಾಜ್ಯದ ಹಲವು ಸಚಿವರು. 


ಕಳೆದ ತಿಂಗಳು ಆಗಸ್ಟ್ 20ರಂದು ಸಚಿವರಾಗಿ ಜಗದೀಶ್ ಶೆಟ್ಟರ್ ಪ್ರಮಾಣವಚನ ಸ್ವೀಕರಿಸಿದ ನಂತರ ಅವರು ಟ್ವಿಟ್ಟರ್ ನಲ್ಲಿ ನನಗೆ ಹೂವಿನ ಬುಟ್ಟಿ ನೀಡಿ ಸನ್ಮಾನಿಸುವ ಬದಲು ಪುಸ್ತಕಗಳನ್ನು ಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ಅದನ್ನು ಪ್ರವಾಹದಲ್ಲಿ ಪುಸ್ತಕ, ಬ್ಯಾಗುಗಳನ್ನು ಕಳೆದುಕೊಂಡ ಮಕ್ಕಳಿಗೆ ಕೊಡಬಹುದು ಎಂದಿದ್ದರು.


ನಂತರ ಅವರದ್ದೇ ಹಾದಿ ತುಳಿದವರು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಬಿ ಶ್ರೀರಾಮುಲು, ಪ್ರವಾಸೋದ್ಯಮ ಸಚಿವ ಸಿ ಟಿ ರವಿ, ಕಂದಾಯ ಸಚಿವ ಆರ್ ಅಶೋಕ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ವಿಶ್ವನಾಥ್ ಮೊದಲಾದವರು.


ಸಿ ಟಿ ರವಿಯವರು ವಿಧಾನಸೌಧದ ತಮ್ಮ ಕೊಠಡಿ ಸಂಖ್ಯೆ 344ರಲ್ಲಿ ಸ್ಟಿಕರ್ ಅಂಟಿಸಿ ದಾನ ಕೊಡುವವರು ಕೊಡಬಹುದು ಎಂದು ಹಾಕಿದ್ದರು. ಜನರು ಕೊಡುಗೆ ಬಾಕ್ಸ್ ಗೆ ತಮ್ಮ ಕೈಲಾದಷ್ಟು ಕೊಡುಗೆ ನೀಡಬಹುದು. ನನ್ನ ಕಚೇರಿಗೆ ಬರುವವರು ಹಾರ, ತುರಾಯಿಗಳನ್ನು ತರುವುದು ಬೇಡ, ಪ್ರವಾಹ ಪೀಡಿತರಿಗೆ ಸಹಾಯವಾಗಲು ಅದೇ ಹಣ ನೀಡಿ ಎಂದು ನಾನು ಕೇಳಿದ್ದೇನೆ. ಕೆಲವರು ಅದರಂತೆ ಅನುಸರಿಸಿ ಹಣ ನೀಡುತ್ತಾರೆ. ಇನ್ನು ಕೆಲವರು ಕೇಳದೆ ಹಾರ ತಂದವರಿಗೆ ಮೊದಲು ಆ ಬಾಕ್ಸ್ ಗೆ ಸ್ವಲ್ಪ ದುಡ್ಡು ಹಾಕಿ ನಂತರ ನಿಮ್ಮ ಸನ್ಮಾನವನ್ನು ಒಪ್ಪುತ್ತೇನೆ ಎನ್ನುತ್ತೇನೆ. ಅವರು ಎಷ್ಟು ಹಣ ಕೊಡುತ್ತಾರೆ ಎನ್ನುವುದು ಮುಖ್ಯವಲ್ಲ ಎನ್ನುತ್ತಾರೆ ಸಚಿವ ಸಿ ಟಿ ರವಿ.


ಹೂವು, ಹಾರ, ಸನ್ಮಾನ ಎಲ್ಲ ಒಂದು ದಿನಕ್ಕಷ್ಟೆ, ನಂತರ ಅದು ಹಾಳಾಗಿ ಹೋಗುತ್ತದೆ. ಆದರೆ ಕಷ್ಟದಲ್ಲಿರುವವರಿಗೆ ನೀಡುವ ಹಣ ನಾಲ್ಕು ಜನಕ್ಕೆ ಉಪಯೋಗವಾಗುತ್ತದೆ. ಈ ಬಾಕ್ಸ್ ನ್ನು ಇನ್ನು ಕೆಲ ದಿವಸ ಇಲ್ಲಿಟ್ಟಿರುತ್ತೇನೆ, ನಂತರ ನನ್ನ ಕೊಡುಗೆ ಸೇರಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುತ್ತೇನೆ ಎಂದರು.


ಉತ್ತರ ಕರ್ನಾಟಕ ಭಾಗದ ಹಳ್ಳಿಗಳನ್ನು ಪುನಃ ಮೊದಲಿನಂತೆ ಮಾಡಲು ಕೋಟ್ಯಂತರ ರೂಪಾಯಿ ಬೇಕು. ಅದಕ್ಕಾಗಿ ಕೈಗಾರಿಕೋದ್ಯಮಿಗಳು ಮತ್ತು ಖಾಸಗಿ ಕಂಪೆನಿಗಳು ಹಣ ಕೊಡುಗೆಯಾಗಿ ನೀಡಿ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಈ ಮಧ್ಯೆ ಕೇಂದ್ರ ಸರ್ಕಾರ 5 ಸಾವಿರ ಕೋಟಿ ಮಧ್ಯಂತರ ಪರಿಹಾರ ನೀಡುವಂತೆ ಒತ್ತಡ ಹಾಕಿ ಎಂದು ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ.


ಇಂದು ಪ್ರಧಾನಿ ಮೋದಿಯವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಆಗ ಅವರಿಗೆ ಇಲ್ಲಿನ ವಸ್ತುಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡುವ ತುಡಿತದಲ್ಲಿ ರಾಜ್ಯ ಬಿಜೆಪಿ ನಾಯಕರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com