ಹೈದರಾಬಾದ್ ಕರ್ನಾಟಕ ಇನ್ಮುಂದೆ 'ಕಲ್ಯಾಣ ಕರ್ನಾಟಕ'!

ಕರ್ನಾಟಕದ ಈಶಾನ್ಯ ಭಾಗದ ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ 'ಕಲ್ಯಾಣ ಕರ್ನಾಟಕ'ವೆಂದು ಮರು ನಾಮಕರಣ ಮಾಡಲು ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು  ಕಾನೂನು ಸಂಸದೀಯ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ದಾರೆ.
ಜೆ.ಸಿ ಮಾಧುಸ್ವಾಮಿ
ಜೆ.ಸಿ ಮಾಧುಸ್ವಾಮಿ

ಬೆಂಗಳೂರು: ಕರ್ನಾಟಕದ ಈಶಾನ್ಯ ಭಾಗದ ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ 'ಕಲ್ಯಾಣ ಕರ್ನಾಟಕ'ವೆಂದು ಮರು ನಾಮಕರಣ ಮಾಡಲು ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು  ಕಾನೂನು ಸಂಸದೀಯ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ದಾರೆ.

ಸಿಎಂ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಣಯ ಹೊರಹೊಮ್ಮಿದೆ. ಅದರಂತೆ ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ಪುನಾರಚಿಸಿ 'ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ' ಎಂದು ಹೆಸರಿಸಲಾಗುತ್ತದೆ. ಇದರೊಂದಿಗೆ ಆ ಭಾಗದ ಜನರ ಬಹು ವರ್ಷಗಳ ಹಕ್ಕೊತ್ತಾಯಕ್ಕೆ ಮಾನ್ಯತೆ ದೊರಕಿದಂತಾಗಿದೆ. 

ಈ ಭಾಗದ ಅಭಿವೃದ್ಧಿ ಮತ್ತು ಕಲ್ಯಾಣ ವನ್ನು ಗಮನದಲ್ಲಿರಿಸಿಕೊಂಡು ಈ ಹೆಸರು ನೀಡಲಾಗಿದೆ ಎಂದು ಬಿಜೆಪಿ ಶಾಸಕ ರಾಜ್ ಕುಮಾರ್ ಪಾಟೀಲ್ ಹೇಳಿದ್ದಾರೆ. 

ಆರು ಜಿಲ್ಲೆಗಳಲ್ಲಿ ಒಟ್ಟು 41 ವಿಧಾನಸಭೆ ಕ್ಷೇತ್ರಗಳಿದ್ದು,ಸುಮಾರು 1.3 ಕೋಟಿ ಜನಸಂಖ್ಯೆಯಿದೆ ಎಂದು ಹೇಳಿದ್ದಾರೆ, 

ಸ್ವಾತಂತ್ರ್ಯ ಪೂರ್ವದಲ್ಲಿ ಹೈದರಾಬಾದ್‌ ಪ್ರಾಂತ್ಯದಲ್ಲಿ ನಿಜಾಮರ ಆಳ್ವಿಕೆಯಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದು ಭಾಷಾವಾರು ಪ್ರಾಂತ್ಯಗಳ ಆಧಾರದಲ್ಲಿ ರಾಜ್ಯಗಳ ರಚನೆಯಾದ ಬಳಿಕವೂ ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡ ಜಿಲ್ಲೆಗಳನ್ನು ಹೈದರಾಬಾದ್‌ ಕರ್ನಾಟಕವೆಂದೇ ಗುರುತಿಸಲಾಗುತ್ತಿದೆ. ಇದನ್ನು ಬದಲಿಸಿ ಕಲ್ಯಾಣ ಕರ್ನಾಟಕವೆಂದು ಘೋಷಿಸುವಂತೆ ಹೋರಾಟ ಮಾಡಿಕೊಂಡು ಬರಲಾಗಿತ್ತು. ಈ ನಿಟ್ಟಿನಲ್ಲಿ ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ, ಸಾಹಿತಿ ಗೊ.ರು.ಚನ್ನಬಸಪ್ಪ ಅವರು ಮಾರ್ಗದರ್ಶನ ಮಾಡಿದ್ದರು. ಈ ಪ್ರದೇಶದ ಜನಪ್ರತಿನಿಧಿಗಳೂ ಸತತವಾಗಿ ಒತ್ತಾಯಿಸುತ್ತ ಬಂದಿದ್ದರು. 

ಈ ನಡುವೆ ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ನಿಕಟಪೂರ್ವ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಹಾಲಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರಿಗೂ ಈ ಸಂಬಂಧ ಮನವಿ ಸಲ್ಲಿಸಿದ್ದರು. 

ಸೆಪ್ಟೆಂಬರ್‌ 17ರಂದು ನಡೆಯುವ ಹೈದರಾಬಾದ್‌ ಕರ್ನಾಟಕ ವಿಮೋಚನಾ ಚಳವಳಿ ದಿನಾಚರಣೆಯಂದು ಕಲ್ಯಾಣ ಕರ್ನಾಟಕದ ಘೋಷಣೆಯಾಗಬೇಕೆಂದು  ರಾಜಕುಮಾರ್ ಪಾಟೀಲ್ ಹೇಳಿದ್ದಾರೆ. ಬೀದರ್, ಕಲಬುರಗಿ, ಬಳ್ಳಾರಿ, ರಾಯಚೂರು,  ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳು ಈ ಭಾಗಕ್ಕೆ ಸೇರುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com