ಬೆಂಗಳೂರು 'ನಗರಕ್ಕೆ ಇಂದು ಐದು ಜನ ಪೊಲೀಸ್ ಆಯುಕ್ತರುಗಳು'

ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದ ಐವರು ಮಕ್ಕಳ ಪೊಲೀಸ್ ಅಧಿಕಾರಿಯಾಗುವ ಆಸೆಯನ್ನು ಪೊಲೀಸ್ ಇಲಾಖೆ ಈಡೇರಿಸಿದೆ.ಆ ಮಕ್ಕಳಿಗೆ ಒಂದು ದಿನದ ಮಟ್ಟಿಗೆ ನಗರ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸಲು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವಕಾಶ ಮಾಡಿಕೊಟ್ಟರು.
ಪುಟಾಣಿ ಮಕ್ಕಳು
ಪುಟಾಣಿ ಮಕ್ಕಳು

ಬೆಂಗಳೂರು: ವಿವಿಧ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಐವರು ಚಿಣ್ಣರು ಒಂದು ದಿನದ ಮಟ್ಟಿಗೆ ಬೆಂಗಳೂರು ನಗರ ಪೊಲೀಸ್​ ಆಯುಕ್ತರಾಗಿ ಸೋಮವಾರ ಅಧಿಕಾರ ಸ್ವೀಕರಿಸುವ ಮೂಲಕ ತಮ್ಮ ಜೀವಿತದ ಆಸೆಯ ಕನಸನ್ನು ನನಸು ಮಾಡಿಕೊಂಡರು

ರುತನ್ ಕುಮಾರ್ (8), ಮಹಮದ್ ಶಕೀಬ್ (10), ಅರ್ಷಾಥ್ ಪಾಷಾ (7), ಶ್ರಾವಣಿ ಬಂಟ್ಟಾಳ (8), ಸಯ್ಯದ್ ಇಮಾದ್ (5) ಸೇರಿ ಐವರನ್ನು ನಗರ ಪೊಲೀಸ್​ ಆಯುಕ್ತರಾದ ಭಾಸ್ಕರ್​ ರಾವ್​ ಚಿಣ್ಣರನ್ನು ಕೈ ಕುಲುಕುವ ಮೂಲಕ ಬೆಂಗಳೂರು ನಗರ ಪೋಲೀಸ್ ಆಯುಕ್ತರಾಗಿ, ತಮ್ಮ ಕಚೇರಿಗೆ ಬರಮಾಡಿಕೊಂಡರು. ಬಳಿಕ ಇವರೆಲ್ಲರಿಗೂ ಬೆಂಗಳೂರು ನಗರ ಪೊಲೀಸರು ಗೌರವವಂದನೆ ಸಲ್ಲಿಸಿದರು. ನಂತರ ಡಾಗ್ ಸ್ಕ್ವಾಡ್ ಕರೆದು ಚಿಣ್ಣರನ್ನು ಪರಿಚಯಿಸುವ ಮೂಲಕ ಅವರ ಆಸೆ ಈಡೇರಿಸಲಾಯಿತು. ಡಾಗ್ ಸ್ಕ್ಯಾಡ್ ಗೆ ಕೈ ಕುಲುಕಿ ಮಕ್ಕಳು ಸಂತಸಪಟ್ಟರು.

ಇಂದು ಒಟ್ಟು 7 ಮಕ್ಕಳು ಬೆಂಗಳೂರು ನಗರ ಪೊಲೀಸ್​ ಆಯುಕ್ತರಾಗಿ ಅಧಿಕಾರ ಸ್ವೀಕರಿಸಬೇಕಿತ್ತು. ಆದರೆ, ಇಬ್ಬರು ಮಕ್ಕಳು ತೀವ್ರ ಜ್ವರದಿಂದ ಬಳಲುತ್ತಿರುವುದರಿಂದ ಕೇವಲ 5 ಮಕ್ಕಳು ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರು. ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು 'ಮೇಕ್​ ಎ ವಿಷ್'​ ಫೌಂಡೇಷನ್​ ಸಂಸ್ಥೆಯ ಸಹಯೋಗದಲ್ಲಿ ಬೆಂಗಳೂರು ನಗರ ಪೊಲೀಸರು ಈ ಕಾರ್ಯಕ್ರಮ ಆಯೋಜಿಸಿದ್ದರು.

ಈ ಎಲ್ಲಾ ಮಕ್ಕಳು ತಮ್ಮ ಜೀವನದಲ್ಲಿ ಪೊಲೀಸ್​ ಅಧಿಕಾರಿಯಾಗಬೇಕು ಎಂಬ ಕನಸು ಕಂಡವರು. ಆದರೆ, ಕಾಯಿಲೆಗೆ ತುತ್ತಾಗಿರುವುದರಿಂದ ಅವರ ಕನಸು ಕನಸಾಗಿಯೇ ಉಳಿದುಕೊಳ್ಳುತ್ತಿತ್ತು. ಆದ್ದರಿಂದ ಪೊಲೀಸ್​ ಅಧಿಕಾರಿಯಾಗಬೇಕೆಂಬ ಅವರ ಆಸೆಯಂತೆ ಫೌಂಡೇಶನ್ ಹಾಗೂ ಆಯುಕ್ತರು ಈ ಕಾರ್ಯಕ್ರಮ ಆಯೋಜಿಸುವ ಮೂಲಕ ಚಿಣ್ಣರ ಕನಸನ್ನು ಈಡೇರಿಸಿದ್ದಾರೆ

ಪೊಲೀಸ್​ ಆಯುಕ್ತರ ಕಚೇರಿಯಲ್ಲಿರುವ ಏಕ್​ ದಿನ್​ ಕಾ ಸುಲ್ತಾನ್​ ಎಂಬ ದಾಖಲಾತಿಯಲ್ಲಿ ಸಹಿ ಮಾಡುವ ಮೂಲಕ ಇವರೆಲ್ಲರೂ ಅಧಿಕಾರ ಸ್ವೀಕರಿಸಿದರು.

ಪೊಲೀಸ್​ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪುಟಾಣಿ ರಿತನ್​ ಕುಮಾರ್​, ಕನ್ನಡ ಚಲನಚಿತ್ರ ನಟ ದರ್ಶನ್​ ಅವರಿಂದ ಪ್ರೇರಣೆಗೊಂಡು ತಾನು ಪೊಲೀಸ್​ ಆಯುಕ್ತರಾಗಬೇಕು ಎಂದು ನಿರ್ಧರಿಸಿದ್ದೆ. ದರ್ಶನ್​ ನಟನೆಯ ಐರಾವತ ಸಿನಿಮಾ ನೋಡಿದ್ದೇನೆ. ಅದರಲ್ಲಿ ಅವರು ಪೊಲೀಸ್​ ಅಧಿಕಾರಿಯಾಗಿ ಸಮಾಜದ ನಾನಾ ತಪ್ಪುಗಳನ್ನು ತಿದ್ದುತ್ತಾರೆ. ಹಾಗಾಗಿ ಅವರಂತೆ ನಾನು ಕೂಡ ಸಮಾಜದ ತಪ್ಪುಗಳನ್ನು ತಿದ್ದಲು ಪೊಲೀಸ್​ ಅಧಿಕಾರಿಯಾಗಬೇಕು ಎಂದು ನಿರ್ಧರಿಸಿದ್ದಾಗಿ ತಮ್ಮ ಆಸೆಯನ್ನು ಹಂಚಿಕೊಂಡರು.

ನಗರ ಪೊಲೀಸ್ ಆಯುಕ್ತರಾದ ಎನ್ ಭಾಸ್ಕರ್ ರಾವ್ ಸುದ್ದಿಗಾರರೊಂದಿಗೆ ಮಾತನಾಡಿ, 'ಮೇಕ್​ ಎ ವಿಷ್'​ ಫೌಂಡೇಷನ್​ ಸಂಸ್ಥೆಯ ಸಹಯೋಗದಲ್ಲಿ ಐದು ಮಕ್ಕಳಿಗೆ ನಗರ ಪೊಲೀಸ್ ಆಯುಕ್ತರಾಗಿ ಆಹ್ವಾನಿಸಿ, ಗನ್, ಕೈಕೊಳ, ಬ್ಯಾಜ್ ನೀಡಿ ಮಕ್ಕಳಿಗೆ ಶುಭಾಶಯ ಕೋರಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು

'ಮೇಕ್ ಅ ವಿಶ್' ಸಂಸ್ಥೆ, ಮಾರಣಾಂತಿಕ ಅನಾರೋಗ್ಯ ಪೀಡಿತ ಮಕ್ಕಳ ಆಸೆ ತಿಳಿದುಕೊಂಡು ಅದನ್ನು ಪೂರೈಸುವಲ್ಲಿ ಕಾರ್ಯನಿರ್ವಹಿಸುತ್ತಿದೆ. ವಿವಿಧ ವೃತ್ತಿಗಳಲ್ಲಿ ಆಸಕ್ತಿ ಇರುವ ಮಕ್ಕಳ ಆಸೆಯನ್ನು ಫೌಂಢೇಶನ್ ಈಡೇರಿಸುತ್ತಿದ್ದು, ಇಂದು ಪೊಲೀಸ್ ಆಯುಕ್ತರಾಗುವ ಮಕ್ಕಳ ಕನಸನ್ನು ಈಡೇರಿಸಲಾಯಿತು. ಈ ಮೂಲಕ ಜನಸಾಮಾನ್ಯರ ನೋವಿಗೆ ಸ್ಪಂದಿಸಲು ಪೊಲೀಸ್ ಇಲಾಖೆಯಿಂದ ಸಾಧ್ಯವಾಯಿತು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com