ಪಶ್ಚಿಮ ಘಟ್ಟ, ಮಹಾರಾಷ್ಟ್ರದಲ್ಲಿ ಮಳೆ: ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರವಾಹ ಭೀತಿ
ಪಶ್ಚಿಮ ಘಟ್ಟಗಳು ಮತ್ತು ಮಹಾರಾಷ್ಟ್ರಗಳಲ್ಲಿ ಧಾರಾಕಾರ ಮಳೆ ಮುಂದುವರಿದಿರುವುದರಿಂದ ಉತ್ತರ ಕರ್ನಾಟಕ ಭಾಗಗಳಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.
Published: 09th September 2019 08:01 AM | Last Updated: 09th September 2019 05:05 PM | A+A A-

ದಾಂಡೇಲಿಯಲ್ಲಿ ಪ್ರವಾಹ ರೀತಿಯ ಪರಿಸ್ಥಿತಿಗೆ ಮುಳುಗಿಹೋದ ಮನೆಗಳು
ಕಾರವಾರ: ಮಲೆನಾಡು ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಸುಪಾ ಅಣೆಕಟ್ಟಿನಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗಿದ್ದು ದಾಂಡೇಲಿ ಸುತ್ತಮುತ್ತ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಜೊಯ್ಡಾ ತಾಲ್ಲೂಕಿನಲ್ಲಿರುವ ದಾಂಡೇಲಿ ಅಣೆಕಟ್ಟು ಕೆಲ ದಿನಗಳ ಹಿಂದೆಯೇ ಗರಿಷ್ಠ ಪ್ರಮಾಣವನ್ನು ತಲುಪಿತ್ತು. ಅದರಿಂದ 55 ಸಾವಿರ ಕ್ಯೂಸೆಕ್ ನೀರು ಕಾಳಿ ನದಿಗೆ ಬಿಡಲಾಗಿತ್ತು. ಅಣೆಕಟ್ಟಿಗೆ 46 ಸಾವಿರ ಕ್ಯೂಸೆಕ್ ನೀರು ಹರಿದುಬಂದಿದ್ದರಿಂದ ನದಿಗೆ 55 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಯಿತು. ಅಣೆಕಟ್ಟಿನ ಸುತ್ತಮುತ್ತ ಭಾರೀ ಮಳೆ ಸುರಿದಿದ್ದರಿಂದ ಮೊನ್ನೆಯಷ್ಟು ಹೊತ್ತಿಗೆ ಮಳೆಯ ಪ್ರಮಾಣ ತಗ್ಗಿದರೂ ಕೂಡ ಒಳಹರಿವು ಮಾತ್ರ ಕಡಿಮೆಯಾಗಲಿಲ್ಲ.
ಈ ಪ್ರದೇಶದಲ್ಲಿ ಒಟ್ಟು ನಾಲ್ಕು ಅಣೆಕಟ್ಟುಗಳಿವೆ. ತಗ್ಗು ಪ್ರದೇಶಗಳಲ್ಲಿ ಅನೇಕ ಗ್ರಾಮಗಳಿವೆ. ಎರಡು ದಿನಗಳ ಹಿಂದೆ ಮಲ್ಲಪುರದಲ್ಲಿ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಲಾಗಿದೆ.ಪ್ರವಾಹ ರೀತಿಯ ಪರಿಸ್ಥಿತಿ ಕಾರವಾರ ತಾಲ್ಲೂಕಿನಲ್ಲಿ ಸದ್ಯ ನಿಯಂತ್ರಣದಲ್ಲಿದ್ದು ಜನರು ಆತಂಕಕ್ಕೀಡಾಗುವ ಅಗತ್ಯವಿಲ್ಲ ಎಂದಿದ್ದಾರೆ.
ಶರಾವತಿ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಹೊನ್ನಾವರದಲ್ಲಿ ಪ್ರವಾಹ ನೀರು ಕಡಿಮೆಯಾಗಿದೆ. ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆ ಗ್ರಾಮಸ್ಥರು ತಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದಾರೆ. ಮೊನ್ನೆಯವರೆಗೆ 11 ನಿರಾಶ್ರಿತ ಕೇಂದ್ರಗಳಲ್ಲಿ 400 ಜನರು ಆಶ್ರಯ ಪಡೆದಿದ್ದರು. ನಿನ್ನೆ ಸಂಜೆಯ ಹೊತ್ತಿಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದರಿಂದ ಕೇವಲ 3 ನಿರಾಶ್ರಿತ ಕೇಂದ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು.
ಉ.ಕದಲ್ಲಿ ಮತ್ತೆ ಪ್ರವಾಹ ಭೀತಿ: ನ್ನೊಂದೆಡೆ ಪಶ್ಚಿಮ ಘಟ್ಟಗಳು ಮತ್ತು ಮಹಾರಾಷ್ಟ್ರಗಳಲ್ಲಿ ಧಾರಾಕಾರ ಮಳೆ ಮುಂದುವರಿದಿರುವುದರಿಂದ ಉತ್ತರ ಕರ್ನಾಟಕ ಭಾಗಗಳಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಕೊಯ್ನಾ ಸೇರಿದಂತೆ ಅನೇಕ ಜಲಾಶಯಗಳಿಂದ ನೀರಿನ ಹೊರಬಿಡುವ ಪ್ರಮಾಣ ಹೆಚ್ಚಾಗಿದೆ. ಇಂದು ಬೆಳಗ್ಗೆಯಷ್ಟು ಹೊತ್ತಿಗೆ ವಿವಿಧ ಜಲಾಶಯಗಳಿಂದ ಒಟ್ಟು 1 ಲಕ್ಷದ 90 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿದೆ.