ಬೆಂಗಳೂರು: ಆನ್ ಲೈನ್ ವಂಚನೆ, 3 ರು. ಆಸೆಗೆ 95 ಸಾವಿರ ಕಳೆದುಕೊಂಡ ಮಹಿಳೆ!

ಮನೆಯಲ್ಲೇ ಕುಳಿತು ಆನ್ ಲೈನ್ ಆ್ಯಪ್ ಗಳ ಮೂಲಕ ತಮ್ಮ ಮೊಬೈಲ್ ಅನ್ನು ಮಾರಲು ಹೋಗಿ ಮಹಿಳೆಯೊಬ್ಬರು ಬರೋಬ್ಬರಿ 95 ಸಾವಿರ ರುಪಾಯಿಯನ್ನು ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮನೆಯಲ್ಲೇ ಕುಳಿತು ಆನ್ ಲೈನ್ ಆ್ಯಪ್ ಗಳ ಮೂಲಕ ತಮ್ಮ ಮೊಬೈಲ್ ಅನ್ನು ಮಾರಲು ಹೋಗಿ ಮಹಿಳೆಯೊಬ್ಬರು ಬರೋಬ್ಬರಿ 95 ಸಾವಿರ ರುಪಾಯಿಯನ್ನು ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

47 ವರ್ಷದ ಅಪರ್ಣಾ ಥಕ್ಕರ್ ಸುರಿ ಎಂಬುವರು ತಮ್ಮ ಮೊಬೈಲ್ ಅನ್ನು ಓಎಲ್‌ಎಕ್ಸ್‌ನಲ್ಲಿ ಮಾರಲು ಮುಂದಾಗಿದ್ದರು. ಇನ್ನು ಈ ಮೊಬೈಲ್ ಅನ್ನು ತೆಗೆದುಕೊಳ್ಳುವುದಾಗಿ ಮೊಹಮ್ಮದ್ ಬಿಲಾಲ್ ಎಂಬಾತ ಅರ್ಪಣಾ ಅವರಿಗೆ ಕರೆ ಮಾಡಿದ್ದ. ನಂತರ ಅಪರ್ಣಾ ಆನ್ ಲೈನ್ ಆ್ಯಪ್ ಸ್ವಿಗ್ಗಿ ಗೋ ಆ್ಯಪ್ ನಲ್ಲಿ ಬಿಲಾಲ್ ಗೆ ಮೊಬೈಲ್ ತಲುಪಿಸಲು ಮುಂದಾಗಿದ್ದಾರೆ.

ಸ್ವಿಗ್ಗಿ ಗೋ ಆ್ಯಪ್ ಡೆಲಿವರಿ ಬಾಯ್ ಮೊಬೈಲ್ ಅನ್ನು ಅರ್ಪಣಾರಿಂದ ಪಡೆದುಕೊಂಡಿದ್ದಾನೆ. ನಂತರ 11 ಗಂಟೆ ಸುಮಾರಿಗೆ ಬಿಲಾಲ್ ಮಹಿಳೆಗೆ ಕರೆ ಮಾಡಿ ನಿಮ್ಮ ಆರ್ಡರ್ ಕ್ಯಾನ್ಸಲ್ ಆಗಿದೆಯಂತೆ ಹೀಗಾಗಿ ಮೊಬೈಲ್ ಡೆಲಿವರಿ ಕೊಡುವುದಿಲ್ಲ ಡೆಲಿವರಿ ಬಾಯ್ ಹೇಳಿದ್ದಾಗಿ ಅಪರ್ಣಾಗೆ ತಿಳಿಸಿದ್ದಾನೆ. ನಂತರ ಡೆಲಿವರಿ ಬಾಯ್ ಗೆ ಕರೆ ಮಾಡಿದಾಗ ಆತ ಸಹ ಇದನ್ನೇ ಹೇಳಿದ್ದು ನೀವು ಸ್ವಿಗ್ಗಿ ಕಸ್ಟಮರ್ ಕೇರ್ ಗೆ ಕರೆ ಮಾಡುವಂತೆ ತಿಳಿಸಿದ್ದಾನೆ. 

ಅದೇ ರೀತಿ ಅಪರ್ಣಾ ಕಸ್ಟಮರ್ ಕೇರ್ ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿಯೋರ್ವ ನಿಮ್ಮ ಮೊಬೈಲ್ ಹಿಂಪಡೆಯಬೇಕು ಅಂದರೆ ಸ್ವಿಗ್ಗಿ ಖಾತೆಗೆ 3 ರುಪಾಯಿ ಕಳುಹಿಸುವಂತೆ ತಿಳಿಸಿದ್ದಾನೆ. ಆತ ಹೇಳಿದಂತೆ ಎಲ್ಲವನ್ನು ಅರ್ಪಣಾ ಮಾಡಿದ್ದಾರೆ. ಇದಾದ ಕೆಲವೇ ನಿಮಿಷದಲ್ಲಿ ಅರ್ಪಣಾ ಅವರಿಗೆ ಸಂದೇಶವೊಂದು ಬಂದಿದೆ. ಅದರಲ್ಲಿ ನಿಮ್ಮ ಖಾತೆಯಿಂದ 95 ಸಾವಿರ ರುಪಾಯಿಯನ್ನು ವರ್ಗಾವಣೆ ಮಾಡಲಾಗಿದೆ ಅಂತ. 

ಇದನ್ನು ನೋಡಿದ ಅಪರ್ಣಾ ಕೂಡಲೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. 

ಹ್ಯಾಕರ್ ಗಳು ಅಪರ್ಣಾ ಅವರ ಖಾತೆಯನ್ನು ಹ್ಯಾಕ್ ಮಾಡಿ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಮಹಿಳೆಯೊಬ್ಬರು ಆನ್ ಲೈನ್ ಆ್ಯಪ್ ಗಳನ್ನು ನಂಬಿ ಹಣ ಕಳೆದುಕೊಂಡಿರುವುದು ವಿಷಾದವೇ ಸರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com