ಸಿದ್ದು, ಹೆಚ್'ಡಿಕೆ ಜಾರಿಗೆ ತಂದಿದ್ದ ಯೋಜನೆಗಳಲ್ಲಿ ಭಾರೀ ಹಗರಣ: ಸಿಬಿಐ ಮುಷ್ಠಿಯಲ್ಲಿ 2 ಪ್ರಮುಖ ಪ್ರಕರಣಗಳು

ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸಿದ್ದರಾಮಯ್ಯ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರಗಳು ಜಾರಿಗೆ ತಂದಿದ್ದ ಯೋಜನೆಗಳ ಮೇಲೆ ಕಣ್ಣು ಹಾಯಿಸಿರುವ ಬಿಜೆಪಿ, ಯೋಜನೆಗಳಲ್ಲಿ ಭಾರೀ ಹಗರಣ ನಡೆಸಿರುವುದನ್ನು ಬಹಿರಂಗಗೊಳಿಸಿದ್ದು, 2 ಪ್ರಮುಖ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿದೆ. 
ಸಿದ್ದರಾಮಯ್ಯ ಮತ್ತು ಹೆಚ್.ಡಿ.ಕುಮಾರಸ್ವಾಮಿ (ಸಂಗ್ರಹ ಚಿತ್ರ)
ಸಿದ್ದರಾಮಯ್ಯ ಮತ್ತು ಹೆಚ್.ಡಿ.ಕುಮಾರಸ್ವಾಮಿ (ಸಂಗ್ರಹ ಚಿತ್ರ)

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸಿದ್ದರಾಮಯ್ಯ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರಗಳು ಜಾರಿಗೆ ತಂದಿದ್ದ ಯೋಜನೆಗಳ ಮೇಲೆ ಕಣ್ಣು ಹಾಯಿಸಿರುವ ಬಿಜೆಪಿ, ಯೋಜನೆಗಳಲ್ಲಿ ಭಾರೀ ಹಗರಣ ನಡೆಸಿರುವುದನ್ನು ಬಹಿರಂಗಗೊಳಿಸಿದ್ದು, 2 ಪ್ರಮುಖ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿದೆ. 

ಟೆಲಿಫೋನ್ ಕದ್ದಾಲಿಕೆ ಹಾಗೂ ಐಎಂಎ ಎರಡು ಹಗರಣಗಳನ್ನು ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ವಹಿಸಿದೆ. 

ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರು ಜಾರಿಗೆ ತಂದಿದ್ದ ಹಲವು ಯೋಜನೆಗಳಲ್ಲಿ ಭಾರೀ ಹಗರಣಗಳಿವೆ ಎಂದು ಈ ಹಿಂದೆಯೇ ಬಿಜೆಪಿ ಹೇಳಿತ್ತು. ಅಧಿಕಾರಕ್ಕೆ ಬಂದು 45 ದಿನಗಳು ಕಳೆದರೂ ಬಿಜೆಪಿ ತನಿಖೆಗೆ ಆದೇಶಿಸಿರಲಿಲ್ಲ. ಹಗರಣಗಳು ಕಂಡು ಬಂದ 10 ಯೋಜನೆಗಳ ಪೈಕಿ ಇದೀಗ 5 ಯೋಜನೆಗಳಿಗೆ ಬಿಜೆಪಿ ತಡೆಹಿಡಿದಿದೆ. 

ಜು.26 ರಂದು ಅಧಿಕಾರ ಸ್ವೀಕರಿಸುವುದಕ್ಕೂ ಮುನ್ನವೇ ಬಿ.ಎಸ್.ಯಡಿಯೂರಪ್ಪ ಅವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ. ವಿಜಯಭಾಸ್ಕರ್ ಅವರಿಗೆ ಪತ್ರ ಬರೆದಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ತಂದಿರುವ ಹೊಸ ಯೋಜನೆಗಳು ಹಾಗೂ ಅಧಿಕಾರಿಗಳ ವರ್ಗಾವಣೆಯಲ್ಲಿ ಭಾರೀ ಹಗರಣ ನಡೆದಿದೆ ಎಂದು ಹೇಳಿದ್ದರು. ಅಧಿಕಾರಕ್ಕೆ ಬಂದ ಬಳಿಕ ಯಡಿಯೂರಪ್ಪ ಅವರು ಮೈತ್ರಿ ಸರ್ಕಾರದ ಹಲವು ಯೋಜನೆಗಳನ್ನು ತಡೆಹಿಡಿದಿದ್ದಾರೆ. ನಗರಕ್ಕೆ ಸಂಬಂಧಿಸಿದೆ ಇಂದಿರಾ ಕ್ಯಾಂಟೀನ್, ವೈಟ್ ಟಾಪಿಂಗ್, ಮುಖ್ಯಮಂತ್ರಿ ನಗರೋತ್ಥಾನ ಯೋಜನೆ ಸೇರಿದೆದ ಹಲವು ಯೋಜನೆಗಳನ್ನು ತನಿಖೆಗೆ ಆದೇಶಿಸಿದ್ದಾರೆ. 

ಅಕ್ರಮಗಳ ಕುರಿತಂತೆ 2-3 ತಿಂಗಳುಗಳ ಒಳಗಾಗಿ ವರದಿ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೂಚನೆ ನೀಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. 

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ, ಹಗರಣ ವಿಚಾರಗಳು ಈ ಬಾರಿಯ ಚಳಿಗಾಲ ಅಧಿವೇಶನದಲ್ಲಿ ಪ್ರಮುಖ ವಿಚಾರವಾಗಲಿದೆ. ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಚಳಿಗಾಲ ಅಧಿವೇಶನ ನಡೆಯಲಿದೆ. ವಿರೋಧ ಪಕ್ಷಗಳ ದನಿ ದುರ್ಬಲಗೊಳಿಸುವಂತೆ ಮಾಡಲು ಯಡಿಯೂರಪ್ಪ ಸರ್ಕಾರದ ಯತ್ನವಿದು ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ. 

ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಯಡಿಯೂರಪ್ಪ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರ ಬಿಜೆಪಿ ಸರ್ಕಾರ ನಾವು ಜಾರಿಗೆ ತಂದ ಯೋಜನೆಗಳನ್ನು ಪರಿಶೀಲನೆ ನಡೆಸುತ್ತಿರುವುದು ಉತ್ತಮವಾಗಿದೆ. ಸ್ವತಃ ಭ್ರಷ್ಟರಾಗಿರುವ ಅವರು ವಿರೋಧ ಪಕ್ಷದಲ್ಲಿರುವ ನ್ಯೂನತೆಗಳನ್ನು ಕಂಡು ಹಿಡಿಯುವ ಭರದಲ್ಲಿ ಹತಾಶರಾಗುತ್ತಿದ್ದಾರೆ. ನಮ್ಮ ಜನಪರ ಯೋಜನೆಗಳನ್ನು ಕೊನೆಗೊಲಿಸರು ಬಿಜೆಪಿ ನವೀನ ಮಾರ್ಗಗಳನ್ನು ಹುಡುಕುತ್ತಿದೆ. ತನಿಖೆ ನಡೆಸುವುದನ್ನು ನಾವು ತಡೆಯುವುದಿಲ್ಲ. ಆದರೆ, ತನಿಖೆಯ ಹೆಸರಿನಲ್ಲಿ ಯೋಜನೆಗಳನ್ನು ಅಂತ್ಯಗೊಳಿಸಿದರೆ, ಸುಮ್ಮನಿರುವುದಿಲ್ಲ. ಪ್ರತಿಭಟಿಸುತ್ತೇವೆಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಸಿಎನ್ ಅಶ್ವತ್ಥ ನಾರಾಯಣ್ ಅವರು, ಸಾರ್ವಜನಿಕರ ಹಣ ದುರ್ಬಳಕೆಯಾಗವುದನ್ನು ನೋಡಿ ಯಾವುದೇ ಜವಾಬ್ದಾರಿಯುತ ಸರ್ಕಾರ ಸುಮ್ಮನಿರುವುದಿಲ್ಲ. ಹಿಂದಿನ ಸರ್ಕಾರ ಜಾರಿಗೆ ತಂದ ಯಾವುದೇ ಯೋಜನೆಗಳನ್ನು ನಾವು ಮೊಟಕುಗೊಳಿಸುವುದಿಲ್ಲ. ತನಿಖೆ ಬಳಿಕ ಹಣ ಪೋಲಾಗುವುದನ್ನು ನಾವು ತಡೆಯುತ್ತಿದ್ದೇವೆ. ಯೋಜನೆಗಳಲ್ಲಿ ಅಕ್ರಮಗಳು ಕಂಡು ಬಂದರೆ, ನಾವೇನೂ ಮಾಡಬಾರದೇ? ಎಂದು ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com