ದುಬಾರಿ ಸಂಚಾರಿ ದಂಡಕ್ಕೆ ಜನಾಕ್ರೋಶ: ಗುಜರಾತ್ ಹಾದಿಯತ್ತ ಕರ್ನಾಟಕ, ಇಳಿಕೆಯಾಗುತ್ತಾ ದಂಡ!

ನೂತನ ಸಂಚಾರಿ ನಿಯಮ ಉಲ್ಲಂಘನೆಗೆ ವಿಧಿಸಲಾಗುತ್ತಿರುವ ದುಬಾರಿ ದಂಡದ ವಿಚಾರ ಜನರ ಆಕ್ರೋಶಕ್ಕೆ ತುತ್ತಾಗಿರುವಂತೆಯೇ ಗುಜರಾತ್ ನಂತೆಯೇ ಇದೀಗ ಕರ್ನಾಟಕ ಸರ್ಕಾರ ಕೂಡ ದಂಡದ ಪ್ರಮಾಣ ಕಡಿತ ಮಾಡುವ ಕುರಿತು ಗಂಭೀರ ಚಿಂತನೆಯಲ್ಲಿದೆ ಎಂದು ಹೇಳಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನೂತನ ಸಂಚಾರಿ ನಿಯಮ ಉಲ್ಲಂಘನೆಗೆ ವಿಧಿಸಲಾಗುತ್ತಿರುವ ದುಬಾರಿ ದಂಡದ ವಿಚಾರ ಜನರ ಆಕ್ರೋಶಕ್ಕೆ ತುತ್ತಾಗಿರುವಂತೆಯೇ ಗುಜರಾತ್ ನಂತೆಯೇ ಇದೀಗ ಕರ್ನಾಟಕ ಸರ್ಕಾರ ಕೂಡ ದಂಡದ ಪ್ರಮಾಣ ಕಡಿತ ಮಾಡುವ ಕುರಿತು ಗಂಭೀರ ಚಿಂತನೆಯಲ್ಲಿದೆ ಎಂದು ಹೇಳಲಾಗಿದೆ.

ಈ ಕುರಿತಂತೆ ಪತ್ರಿಕೆಯೊಂದು ವರದಿ ಮಾಡಿದ್ದು, ಸಂಚಾರ ನಿಯಮ ಉಲ್ಲಂಘನೆಯ ದಂಡದ ಪ್ರಮಾಣದ ಬಗ್ಗೆ ಸಾರ್ವಜನಿಕರ ಆಕ್ರೋಶಕ್ಕೆ ಮಣಿದಿರುವ ರಾಜ್ಯ ಸರ್ಕಾರ, ಗುಜರಾತ್‌ ಮಾದರಿಯಲ್ಲಿ ದಂಡ ಪ್ರಮಾಣವನ್ನು ಪರಿಷ್ಕರಿಸಲು ಮುಂದಾಗಿದೆ ಎನ್ನಲಾಗಿದೆ. 

ಮೋಟಾರು ವಾಹನ (ತಿದ್ದುಪಡಿ) ಮಸೂದೆ ಜಾರಿ ಬರುತ್ತಿದ್ದಂತೆ ರಾಜ್ಯದ ಎಲ್ಲೆಡೆ ಸಂಚಾರಿ ಪೊಲೀಸರು ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಭಾರಿ ಮೊತ್ತದ ದಂಡ ವಿಧಿಸುತ್ತಿರುವ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದೆ. ದುಬಾರಿ ದಂಡದ ಕುರಿತು ದಿನಕ್ಕೊಂದು ರೀತಿಯ ಸುದ್ದಿಗಳು ಹರಿದಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಜೋರು ಚರ್ಚೆ ನಡೆಯುತ್ತಿದೆ. 

ಇನ್ನು ಸಂಚಾರಿ ನಿಯಮ ಉಲ್ಲಂಘನೆ ನಿಯಮ ಜಾರಿ ಬಳಿಕ ದಂಡದ ಪ್ರಮಾಣವನ್ನು ಇಳಿಸುವಂತೆ ಸಾರ್ವಜನಿಕ ವಲಯದಲ್ಲಿ ಒತ್ತಡವೂ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಗುಜರಾತ್ ನಂತೆಯೇ ದಂಡದ ಪ್ರಮಾಣ ಕಡಿತಕ್ಕೆ ಮುಂದಾಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ದುಬಾರಿ ದಂಡ ಪಾವತಿಸಿದ ಕೆಲವರು ನೇರವಾಗಿ ಶಾಸಕರು ಮತ್ತು ಸಚಿವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಹಲವು ಸಚಿವರು ಕೂಡ ದಂಡದ ಪ್ರಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸಾರಿಗೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ಬುಧವಾರ ನಡೆಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ದಂಡ ಪ್ರಮಾಣ ಕಡಿಮೆ ಮಾಡುವ ಬಗ್ಗೆ ತಾವೇ ಪ್ರಸ್ತಾಪಿಸಿದರು.

‘ದುಬಾರಿ ದಂಡದಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ದಂಡದ ಪ್ರಮಾಣವನ್ನು ಇಳಿಸಬೇಕು. ಗುಜರಾತ್‌ನಿಂದ ಆದೇಶ ಪ್ರತಿಯನ್ನು ತರಿಸಿಕೊಂಡು, ದಂಡದ ಪ್ರಮಾಣವನ್ನು ಕೂಡಲೇ ಇಳಿಸಬೇಕು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ರಸ್ತೆ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ‘ಮೋಟಾರು ವಾಹನ (ತಿದ್ದುಪಡಿ) ಮಸೂದೆ 2019’ ಕ್ಕೆ ಸಂಸತ್ತು ಒಪ್ಪಿಗೆ ನೀಡಿತ್ತು. ಇದೇ ತಿಂಗಳ ಆರಂಭದಿಂದ ಈ ಕಾನೂನು ರಾಷ್ಟ್ರವ್ಯಾಪಿ ಜಾರಿಗೆ ಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com