2022 ಮಾರ್ಚ್ ವೇಳೆಗೆ 16,838 ಪೊಲೀಸರ ಹುದ್ದೆ ಭರ್ತಿ ಮಾಡಿ: ಸರ್ಕಾರಕ್ಕೆ 'ಹೈ' ಆದೇಶ

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ ಖಾಲಿಯಿರುವ 16,838 ಸಬ್ ಇನ್ಸ್'ಪೆಕ್ಟರ್ ಹಾಗೂ ಕಾನ್ಸ್ ಟೇಬಲ್ ಹುದ್ದೆಗಳನ್ನು 2022ರ ಮಾರ್ಚ್ ವೇಳೆಗೆ ಭರ್ತಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಬುಧವಾರ ಆದೇಶಿಸಿದೆ. 

Published: 12th September 2019 09:17 AM  |   Last Updated: 12th September 2019 09:21 AM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ ಖಾಲಿಯಿರುವ 16,838 ಸಬ್ ಇನ್ಸ್'ಪೆಕ್ಟರ್ ಹಾಗೂ ಕಾನ್ಸ್ ಟೇಬಲ್ ಹುದ್ದೆಗಳನ್ನು 2022ರ ಮಾರ್ಚ್ ವೇಳೆಗೆ ಭರ್ತಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಬುಧವಾರ ಆದೇಶಿಸಿದೆ. 

ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿ ವಿಚಾರವಾಗಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿತ್ತು. 

ಈ ಅರ್ಜಿಯನ್ನು ಬುಧವಾರ ಮುಖ್ಯ ನ್ಯಾಯಮೂರ್ತಿ ಎ.ಎಸ್.ಏಕ ಹಾಗೂ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. 

ವಿಚಾರಣೆ ವೇಳೆ ಸರ್ಕಾರಿ ವಕೀಲ ಬಿ.ಪಿ.ಕೃಷ್ಣ ಪ್ರಮಾಣಪತ್ರ ಸಲ್ಲಿಸಿ, ರಾಜ್ಯ ಪೊಲೀಸ್ ಇಲಾಖೆಯಲ್ಲಿ 16,838 ಸಬ್ ಇನ್ಸ್ ಪೆಕ್ಟರ್ ಹಾಗೂ ಕಾನ್ಸ್ ಟೇಬಲ್ ಹುದ್ದೆಗಳು ಖಾಲಿಯಿವೆ. ಆ ಹುದ್ದೆಗಳನ್ನು 2022ರ ಮಾರ್ಚ್ ವೇಳೆಗೆ 4 ಹಂತಗಳಲ್ಲಿ ತುಂಬಲಾಗುವುದು. ಮೊದಲ ಹಂತದಲ್ಲಿ 300 ಹುದ್ದೆಗಳ ನೇಮಕ ಪ್ರಕ್ರಿಯೆಯನ್ನು 2019ರ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದ್ದಾರೆ. ಆಲ್ಲದೆ, ಪೊಲೀಸ್ ಹುದ್ದೆಗಳಿಗೆ ನೇಮಕಾತಿಕೊಂಡವರಲ್ಲಿ ಏಕಕಾಲಕ್ಕೆ ಗರಿಷ್ಠ 6 ಸಾವರ ಜನರಿಗೆ ಮಾತ್ರ ತರಬೇತಿ ನೀಡುವ ಸಾಮರ್ಥ್ಯವನ್ನು ಹೊಂದಲಾಗಿದೆ. ಹೀಗಾಗಿ 16 ಸಾವಿರ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಏಕಕಾಲಕ್ಕೆ ಕೈಗೆತ್ತಿಕೊಂಡರೆ ತರಬೇತಿ ಹಾಗೂ ನಿಯೋಜನೆ ಕಷ್ಟಕರವಾಗಲಿದೆ. ಆದ್ದರಿಂದ ನಾಲ್ಕು ಹಂತದಲ್ಲಿ 16 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಈ ಅಂಶ ಪರಿಗಣಿಸಿ, ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಎಲ್ಲಾ ಹುದ್ದೆಗಳನ್ನು 2019ರ ಡಿಸೆಂಬರ್ ವೇಳೆಗ ಭರ್ತಿ ಮಾಡುವಂತೆ ಈ ಹಿಂದೆ ನೀಡಿದ್ದ ಆದೇಶವನ್ನು ಮಾರ್ಪಡಿಸುವಂತೆ ನ್ಯಾಯಪೀಠದ ಬಳಿ ಮನವಿ ಮಾಡಿಕೊಂಡಿದ್ದಾರೆ. 

ಈ ಮನವನ್ನು ಪರಿಗಣಿಸಿದ ನ್ಯಾಯಪೀಠ, ಪೊಲೀಸ್ ಇಲಾಖೆಯಲ್ಲಿ ಸದ್ಯ ಖಾಲಿಯಿರುವ 16,838 ಹುದ್ದೆಗಳನ್ನು2022ರ ಮಾರ್ಚ್ ವೇಳೆಗೆ ಭರ್ತಿ ಮಾಡಬೇಕು. ಮುಂದಿನ ವಿಚಾರಣೆ ವೇಳೆ ಎಷ್ಟು ಪೊಲೀಸ್ ಹುದ್ದೆಗಳು ಮಂಜೂರಾಗಿವೆ? ಎಷ್ಟು ಮಂದಿಗೆ ಹುದ್ದೆಗಳಿಗೆ ಬಡ್ತಿ ನೀಡಲಾಗಿದೆ ಎಂಬುದರ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಅ.9ಕ್ಕೆ ಮುಂದೂಡಿದೆ. 

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp