ಅನರ್ಹ ಶಾಸಕರಿಗೆ ಮತ್ತೆ ಸುಪ್ರೀಂನಲ್ಲಿ ಹಿನ್ನಡೆ: ತ್ವರಿತ ವಿಚಾರಣೆಗೆ ನಕಾರ

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳ್ಳಲು ಕಾರಣರಾಗಿದ್ದ 17 ಅನರ್ಹ ಶಾಸಕರಿಗೆ ಮತ್ತೆ ಸುಪ್ರೀಂಕೋರ್ಟ್ ಶಾಕ್ ನೀಡಿದ್ದು, ತ್ವರಿತ ವಿಚಾರಣೆಗೆ ಗುರುವಾರ ನಿರಾಕರಿಸಿದೆ.
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳ್ಳಲು ಕಾರಣರಾಗಿದ್ದ 17 ಅನರ್ಹ ಶಾಸಕರಿಗೆ ಮತ್ತೆ ಸುಪ್ರೀಂಕೋರ್ಟ್ ಶಾಕ್ ನೀಡಿದ್ದು, ತ್ವರಿತ ವಿಚಾರಣೆಗೆ ಗುರುವಾರ ನಿರಾಕರಿಸಿದೆ.

ನ್ಯಾಯಮೂರ್ತಿ ರಮಣ ನೇತೃತ್ವದ ಪೀಠ ತುರ್ತು ವಿಚಾರಣೆಗೆ ನಿರಾಕರಿಸಿದ್ದು, ತ್ವರಿತ ವಿಚಾರಣೆ ನಡೆಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದೆ. ಅಲ್ಲದೆ, ನ್ಯಾಯಾಲಯದಲ್ಲಿ ಎಲ್ಲಾ ಪ್ರಕರಣಗಳನ್ನೂ ಸರದಿಯ ಪ್ರಕಾರವೇ ವಿಚಾರಣೆ ನಡೆಸಲಾಗುತ್ತಿದೆ. ನಿಮ್ಮ ಸರದಿ ಬರುವವರೆಗೂ ಕಾಯಬೇಕು. ನೀವು ಹೇಳಿದ ಕೂಡಲೇ ಅರ್ಜಿಯನ್ನು ತುರ್ತು ವಿಚಾರಣೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

17 ಮಂದಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ತಮ್ಮನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ರಮಣ ಮತ್ತು ಅಜಯ್ ರಸ್ತೋಗಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಿಗದಿಯಾಗಿತ್ತು. ಬಳಿಕ ಅನರ್ಹ ಶಾಸಕರ ಅರ್ಜಿ ವಿಚಾರಣೆಗೆ ನಿಗದಿಯಾಗಿದ್ದ ದಿನಾಂಕವನ್ನು ರದ್ದು ಮಾಡಲಾಗಿತ್ತು. 

ರದ್ದು ಮಾಡಿದ ಸುಪ್ರೀಂಕೋರ್ಟ್ ಆದೇಶ ಪ್ರಶ್ನಿಸುತ್ತಾ 17 ಅನರ್ಹ ಶಾಸಕರ ಅರ್ಜಿಯನ್ನು ಪಟ್ಟಿಯಲ್ಲಿ ಕೈಬಿಡದಂತೆ ಹಿರಿಯ ವಕೀಲ ರಾಕೇಶ್ ದ್ವಿವೇದಿಯವರು ಮನವಿ ಮಾಡಿದ್ದರು. ಅನರ್ಹ ಶಾಸಕರ ಪರ ವಕೀಲರ ಮನವಿಗೆ ಇದೀಗ ಸುಪ್ರೀಂಕೋರ್ಟ್ ಸ್ಪಂದನೆ ನೀಡಿಲ್ಲ. ಹೀಗಾಗಿ ಪ್ರಕರಣದ ವಿಚಾರಣೆ ನಡೆಯುವವರೆಗೂ ಅನರ್ಹ ಶಾಸಕರು ಕಾದು ನೋಡಬೇಕಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com