ಡಿಕೆ ಶಿವಕುಮಾರ್ ಮತ್ತೆ 4 ದಿನ ಇಡಿ ವಶಕ್ಕೆ

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಡಿಕೆ ಶಿವಕುಮಾರ್ ಅವರನ್ನು ಮತ್ತೆ 4 ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿದೆ.
ವಿಚಾರಣೆ ಬಳಿಕ ಡಿಕೆಶಿ
ವಿಚಾರಣೆ ಬಳಿಕ ಡಿಕೆಶಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಡಿಕೆ ಶಿವಕುಮಾರ್ ಅವರನ್ನು ಮತ್ತೆ 4 ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿದೆ.

ಜಾರಿ ನಿರ್ದೇಶನಾಲಯದ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಶಿವಕುಮಾರ್ ಅವರನ್ನುಇಂದು  ಮಧ್ಯಾಹ್ನ ಅಧಿಕಾರಿಗಳು ರೋಸ್ ಅವೆನ್ಯೂ ನ್ಯಾಯಾಲಯ ಸಮುಚ್ಚಯದ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಈ ವೇಳೆ ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಬೇಕೆಂದು ಡಿಕೆಶಿವಕುಮಾರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ವಾದ ಮಂಡಿಸಿದ್ದರೆ, ವಿಚಾರಣೆ ಪೂರ್ಣಗೊಂಡಿಲ್ಲ 5 ದಿನ ವಶಕ್ಕೆ ನೀಡಿ ಎಂದು ಇಡಿ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ.ನಟರಾಜ್‌ ತಮ್ಮ ವಾದ ಮಂಡಿಸಿದರು. 

ಇನ್ನು ವಿಚಾರಣೆ ಸಂದರ್ಭದಲ್ಲಿ ನ್ಯಾಯಾಧೀಶರು ಸೋಮವಾರದ ಒಳಗಡೆ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಇಡಿಗೆ ಸೂಚಿಸಿದರು. ಅಂತೆಯೇ ಇಡಿ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ.ನಟರಾಜ್‌ ಅವರ ವಾದಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದ ನ್ಯಾಯಾಧೀಶರು, 'ಮುಂದಿನ 5 ದಿನಗಳಲ್ಲಿ ಈ ಎಲ್ಲ ಪ್ರಶ್ನೆಗಳಿಗೆ ಆರೋಪಿ ಉತ್ತರ ನೀಡುತ್ತಾರಾ ಎಂದು ಜಡ್ಜ್ ಪ್ರಶ್ನಿಸಿದರು. ಈ ಪ್ರಶ್ನೆಗೆ, ಹಲವು ದಾಖಲೆಗಳಿಗೆ ಸಂಬಂಧಿಸಿದಂತೆ ವಿಚಾರಣೆ ಬಾಕಿಯಿದೆ ಎಂದು ನಟರಾಜ್ ಉತ್ತರಿಸಿದರು. ಎರಡು ಕಡೆ ವಾದ, ಪ್ರತಿವಾದ ಆಲಿಸಿದ ಕೋರ್ಟ್ ಡಿಕೆಶಿವಕುಮಾರ್ ಅವರನ್ನು ಸೆ.17ರವರೆಗೆ ಇಡಿ ವಶಕ್ಕೆ ನೀಡಿತು.

ಐದು ದಿನ ವಶಕ್ಕೆ ಕೇಳಿದ ಜಾರಿ ನಿರ್ದೇಶನಾಲಯ
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಡಿಕೆ ಶಿವಕುಮಾರ್ ಅವರನ್ನು ಐದು ದಿನ ವಶಕ್ಕೆ ನೀಡುವಂತೆ ಜಾರಿ ನಿರ್ದೇಶನಾಲಯ ಕೋರ್ಟ್ ಅನ್ನು ಕೇಳಿದೆ. ಡಿಕೆ ಶಿವಕುಮಾರ್ ಅವರ ಬಳಿ ಇದ್ದ ಸುಮಾರು 200 ಕೋಟಿ ರೂಗಳ ಮೂಲ ಇನ್ನೂ ಪತ್ತೆಯಾಗಿಲ್ಲ, ಈ ಬಗ್ಗೆ ಈ ಹಿಂದಿನ ವಿಚಾರಣೆಯಲ್ಲಿ ಅವರು ಏನನ್ನೂ ಹೇಳಿಲ್ಲ. ಹೀಗಾಗಿ ಇನ್ನೂ ಐದು ದಿನಗಳ ಕಾಲ ಅವರನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಜಾರಿ ನಿರ್ದೇಶನಾಲಯದ ಪರ ವಕೀಲರು ವಾದ ಮಂಡಿಸಿದರು.

317 ಖಾತೆಗಳಲ್ಲಿ 800 ಕೋಟಿ ಆಸ್ತಿ ಪತ್ತೆ
ಇಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ವಾದ ಮಂಡಿಸಿ, ವಿಚಾರಣೆ ಸಂದರ್ಭದಲ್ಲಿ ಆದಾಯದ ಮೂಲ ತೋರಿಸಿಲ್ಲ, ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿಲ್ಲ. ಬಹಳಷ್ಟು ಆಸ್ತಿಗಳನ್ನು ಬೇನಾಮಿಯಾಗಿ ಮಾಡಿದ್ದಾರೆ, ಒಟ್ಟು 317 ಬ್ಯಾಂಕ್ ಖಾತೆಯ ಮೂಲಕ ಹಣವನ್ನು ವರ್ಗಾವಣೆ ಮಾಡಿದ್ದು 800 ಕೋಟಿಗೂ ಅಧಿಕ ಆಸ್ತಿ ಪತ್ತೆಯಾಗಿದೆ. 22 ವರ್ಷದ ಮಗಳು ಐಶ್ವರ್ಯಾ 108 ಕೋಟಿ ಗಳಿಸಿದ್ದಾರೆ. ತನಿಖಾ ಸಂಸ್ಥೆ ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿ ವಿಚಾರಣೆ ನಡೆಸುತ್ತಿದೆ. ಹೀಗಾಗಿ 5 ದಿನಗಳ ಕಾಲ ಮತ್ತೆ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. 

ಡಿಕೆಶಿ ಆರೋಗ್ಯ ಸರಿಯಿಲ್ಲ, ಈಗಾಗಲೇ 100 ಗಂಟೆಗೂ ಅಧಿಕ ಕಾಲ ವಿಚಾರಣೆ ಎದುರಿಸಿದ್ದಾರೆ: ಅಭಿಷೇಕ್ ಮನು ಸಿಂಘ್ವಿ
ಇದರಕ್ಕೂ ಮೊದಲು ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ತಮ್ಮ ವಾದ ಮಂಡಿಸಿ, 'ಶಿವಕುಮಾರ್ ಅವರನ್ನು ಅಧಿಕಾರಿಗಳು ಈಗಾಗಲೇ 100 ಗಂಟೆಗೂ ಅಧಿಕ ಕಾಲ ವಿಚಾರಣೆ ನಡೆಸಿದ್ದಾರೆ. ನಿನ್ನೆಡಿಕೆಶಿ ಆರೋಗ್ಯದಲ್ಲಿ ವ್ಯತ್ಯಯವಾದಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಹೈ ಬಿಪಿಯಿಂದ ಬಳಲಿದ್ದರು. ನಾನು ಈ ಹಿಂದೆ ಕಸ್ಟಡಿಯಲ್ಲಿ ಮೃತಪಟ್ಟ ಡಿಕೆ ಬಸು ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿದ್ದೆ. ಅತ್ಯಂತ ಕ್ರಿಮಿನಲ್‍ಗೂ ವೈದ್ಯಕೀಯ ನೆರವು ನೀಡಲಾಗುತ್ತದೆ. ಹೀಗಾಗಿ ನನ್ನ ಕಕ್ಷಿದಾರರಿಗೂ ವೈದ್ಯಕೀಯ ನೆರವು ಈಗ ಅಗತ್ಯವಿದೆ. ಡಿಕೆ ಶಿವಕುಮಾರ್ ಅವರು ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಇನ್ನು ವಿಚಾರಣೆ ನಡೆಸುವ ಅಗತ್ಯವಿಲ್ಲ. ಅನಾರೋಗ್ಯದಲ್ಲಿರುವ ವ್ಯಕ್ತಿಯನ್ನು ವಿಚಾರಣೆ ನಡೆಸಬಾರದು. 

ಪ್ರಕರಣದಲ್ಲಿ ಹೆಸರಿಸಲಾಗಿರುವ ಆಂಜನೇಯ, ಸಚಿನ್ ನಾರಾಯಣ್, ಸುನಿಲ್ ಶರ್ಮಾ ಬೇರೆ ವ್ಯಕ್ತಿಗಳು. ಅವರು ಪ್ರತ್ಯೇಕವಾಗಿ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ. ಆದರೆ ಇಡಿ ಇವರ ಆಸ್ತಿಯೂ ಡಿಕೆ ಶಿವಕುಮಾರ್ ಅವರದ್ದು ಎಂದು ಹೇಳುತ್ತಿದೆ. ಕರ್ನಾಟಕ ಹೈಕೋರ್ಟ್ ಈ ಪ್ರಕರಣದ ವಿಚಾರಣೆಗೆ ತಡೆ ನೀಡಿದೆ. ಯಾರದ್ದೋ ಆಸ್ತಿ ವಿಚಾರಣೆಗಾಗಿ ಶಿವಕುಮಾರ್ ಅವರನ್ನು ಇಡಿ ಪ್ರಶ್ನೆ ಮಾಡುವುದು ಸರಿಯಲ್ಲ. ಬಿಪಿ ಎಂಬುದು ನಾಟಕ ಮಾಡುವ ವಿಷಯವಲ್ಲ. ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡುತ್ತಿಲ್ಲ. ಒಬ್ಬ ವ್ಯಕ್ತಿ ಎಷ್ಟು ಒತ್ತಡಗಳನ್ನು ಸಹಿಸಿಕೊಳ್ಳಲು ಸಾಧ್ಯ. 13 ದಿನಗಳ ನಿರಂತರ ವಿಚಾರಣೆಯಿಂದ ಶಿವಕುಮಾರ್ ಅವರ ಆರೋಗ್ಯ ಹದಗೆಟ್ಟಿದೆ. ಕಕ್ಷಿದಾರರ 22 ವರ್ಷದ ಪುತ್ರಿಯನ್ನು ಇಡಿ ವಿಚಾರಣೆಗೆ ಒಳಪಡಿಸಿದೆ. ಶಿವಕುಮಾರ್ ಏನು ಮುಚ್ಚಿಡುವುದಿಲ್ಲ. ಎಲ್ಲಿಗೂ ಓಡಿ ಹೋಗುವುದಿಲ್ಲ. ವಿಚಾರಣೆಗೆ ಬೇಕೆಂದಾಗ ಹಾಜರಾಗುತ್ತಾರೆ ಎಂದು  ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com