ಪ್ರವಾಹ ಹಿನ್ನೆಲೆ: ಬೆಳಗಾವಿ ವಿಧಾನಮಂಡಲ ಅಧಿವೇಶನಕ್ಕೆ ಸರ್ಕಾರ ಹಿಂದೇಟು

ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹಲವು ಭಾಗಗಳಲ್ಲಿ ತಲೆದೋರಿರುವ ಭಾರೀ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಬಹುದು ಎನ್ನುವ ಕಾರಣಕ್ಕೆ ಈ ಬಾರಿ ಕುಂದಾನಗರಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಸದೇ ಇರಲು ರಾಜ್ಯ ಸರ್ಕಾರ ಉದ್ದೇಶಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹಲವು ಭಾಗಗಳಲ್ಲಿ ತಲೆದೋರಿರುವ ಭಾರೀ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಬಹುದು ಎನ್ನುವ ಕಾರಣಕ್ಕೆ ಈ ಬಾರಿ ಕುಂದಾನಗರಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಸದೇ ಇರಲು ರಾಜ್ಯ ಸರ್ಕಾರ ಉದ್ದೇಶಿಸಿದೆ. 

ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸದೇ ಇರುವುದು ಸೇರಿದಂತೆ ಹಲವು ರೈತ ಪರ ಸಮಸ್ಯೆಗಳು ಬಗೆಹರಿಯದ ಕಾರಣ ಸರ್ಕಾರ ಅಧಿವೇಶನ ನಡೆಸಲು ಹಿಂದೇಟು ಹಾಕಿದೆ ಎನ್ನಲಾಗಿದೆ. ರಾಜ್ಯದಲ್ಲಿ ಈ ಬಾರಿ ಹಿಂದೆಂದೂ ಕಂಡರಿಯದಂತಹ ಪ್ರವಾಹ ತಲೆದೋರಿದ್ದು, ಸಾವಿರಾರು ಕೋಟಿ ರೂ ನಷ್ಟವಾಗಿದೆ. ಲಕ್ಷಾಂತರ ಜನರ ಬದುಕು ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು, ಮಲೆನಾಡು ಭಾಗಗಳಿಗಿಂತಲೂ ಹೆಚ್ಚಾಗಿ ಬೆಳಗಾವಿ ಸೇರಿ, ಉತ್ತರ ಕರ್ನಾಟಕ ಭಾಗದಲ್ಲಿ ಜನ ಬಾಧಿತರಾಗಿದ್ದಾರೆ.  

ಕಾಳಜಿಕೇಂದ್ರಗಳಲ್ಲಿ ಸಾಕಷ್ಟು ಸಮಸ್ಯೆಗಳು ತಲೆ ದೋರಿತ್ತು. ತಾತ್ಕಾಲಿಕ ನೆರವೂ ಸಹ ಸಂತ್ರಸ್ತರಿಗೆ ದೊರೆತಿರಲಿಲ್ಲ. ಕೇಂದ್ರ ಸರ್ಕಾರ ಸಹ ಇದೂವರೆಗೆ ಯಾವುದೇ ಪರಿಹಾರ ಘೋಷಿಸಿಲ್ಲ. ಮತ್ತೊಂದೆಡೆ ಸಂತ್ರಸ್ತರಿಗೆ ಸಾಂತ್ವಾನ ಹೇಳುವ ಪ್ರಯತ್ನವನ್ನು ಕೇಂದ್ರ ಮಾಡಿಲ್ಲ. ಬಿಜೆಪಿಯ ಈ ನಡೆ ಒಂದು ಕಡೆ ಉತ್ತರ ಕರ್ನಾಟಕ ಭಾಗದ ಜನರ ಕೆಂಗಣ್ಣಿಗೆ ಗುರಿಯಾಗಿದ್ದರೆ, ಮತ್ತೊಂದು ಕಡೆ ವಿಪಕ್ಷ ಕಾಂಗ್ರೆಸ್ ನ ಟೀಕೆಗೆ ದೊಡ್ಡ ಅಸ್ತ್ರವಾಗಿ ಪರಿಣಮಿಸಿದೆ. ಹೀಗಾಗಿ  ಈ ಬಾರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಿದಲ್ಲಿ ಭಾರೀ ಪ್ರತಿಭಟನೆ ಎದುರಿಸುವ ಆತಂಕ ಸರ್ಕಾರಕ್ಕೆ ಎದುರಾಗಿದೆ.

ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ತೀವ್ರ ಪ್ರವಾಹ ಪರಿಸ್ಥಿತಿ ಕಾರಣದಿಂದಾಗಿ ಈ ಬಾರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವುದು ಕಷ್ಟವಾಗಿದೆ. ಈಗಲ್ಲದಿದ್ದರೂ ಮುಂದಿನ ದಿನಗಳಲ್ಲಾದರೂ  ಬೆಳಗಾವಿಯಲ್ಲಿ ಅಧಿವೇಶನ ಮಾಡಲೇಬೇಕು. ಹೀಗಾಗಿ ಯಾವಾಗ ಅಧಿವೇಶನ ಕರೆಯಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದರು. ಈಗಾಗಲೇ ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್ ಶಾಸಕರು ಪ್ರವಾಹ ಸಂತ್ರಸ್ತ ಪ್ರದೇಶಗಳಲ್ಲಿ  ಸಂಚರಿಸಿ ಆಸ್ತಿಪಾಸ್ತಿ ಹಾನಿ ಬಗ್ಗೆ ಅಧ್ಯಯನ ಮಾಡಿ ವರದಿ ಸಂಗ್ರಹಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಹಲವೆಡೆ ಸರ್ಕಾರದ ವೈಫಲ್ಯ ಖಂಡಿಸಿ ಪ್ರತಿಭಟನೆಗೆ ಸಂತ್ರಸ್ತರು ಸಜ್ಜಾಗಿದ್ದಾರೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದರು.

ಇದೀಗ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಚರ್ಚೆ ಮಾಡುವ ಉದ್ದೇಶದಿಂದ ಸಂಪ್ರದಾಯಿಕವಾಗಿ ನಡೆಸಿಕೊಂಡು ಬರುತ್ತಿರುವ  ಬೆಳಗಾವಿ ಚಳಿಗಾಲ ಅಧಿವೇಶನಕ್ಕೆ ಸರ್ಕಾರ ಹಿಂಜರಿಯುತ್ತಿರುವುದು ಮತ್ತೊಮ್ಮೆ ವಿಪಕ್ಷಗಳ ಟೀಕೆಗೆ ಗುರಿಯಾಗುವುದು ನಿಶ್ಚಿತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com