ಅನರ್ಹ ಶಾಸಕರಿಗೆ ಮತ್ತೆ ಹಿನ್ನಡೆ: ಅರ್ಜಿ ವಿಚಾರಣೆ ಸೆ.23ಕ್ಕೆ ಮುಂದೂಡಿದ ಸುಪ್ರೀಂಕೋರ್ಟ್

ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್‍ನ 17 ಅನರ್ಹ ಶಾಸಕರು ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಮಂಗಳವಾರ ಸುಪ್ರೀಂಕೋರ್ಟ್‍ನ ತ್ರಿಸದಸ್ಯ ಪೀಠದಲ್ಲಿ ವಿಚಾರಣೆಗೆ ಬಂದಾಗ ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್ ವಿಚಾರಣೆಯಿಂದ ಹಿಂದೆ ಸರಿದರು. ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಸೆಪ್ಟಂಬರ್ 23ಕ್ಕೆ ಮುಂದೂಡಲಾಗಿದೆ.
ಅನರ್ಹ ಶಾಸಕರು
ಅನರ್ಹ ಶಾಸಕರು

ನವದೆಹಲಿ: ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್‍ನ 17 ಅನರ್ಹ ಶಾಸಕರು ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಮಂಗಳವಾರ ಸುಪ್ರೀಂಕೋರ್ಟ್‍ನ ತ್ರಿಸದಸ್ಯ ಪೀಠದಲ್ಲಿ ವಿಚಾರಣೆಗೆ ಬಂದಾಗ ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್ ವಿಚಾರಣೆಯಿಂದ ಹಿಂದೆ ಸರಿದರು. ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಸೆಪ್ಟಂಬರ್ 23ಕ್ಕೆ ಮುಂದೂಡಲಾಗಿದೆ.

ಅರ್ಜಿ ಸಲ್ಲಿಕೆಯಾಗಿ ಹಲವು ದಿನಗಳು ಕಳೆದಿವೆ. ಆದ್ದರಿಂದ ಇಂದೇ ವಿಚಾರಣೆ ನಡೆಸುವಂತೆ ಅನರ್ಹ ಶಾಸಕರ ಪರ ವಕೀಲರಾದ ಮುಕುಲ್ ರೋಹ್ಟಗಿ ಮನವಿ ಮಾಡಿದರು. ಕರ್ನಾಟಕ ರಾಜ್ಯದವರೇ ಆಗಿರುವ ತಾವು ಈ ಪೀಠದಲ್ಲಿ ಇರುವುದು ಸರಿಯಲ್ಲ ಎಂದು ಪೀಠದಲ್ಲಿದ್ದ ಶಾಂತನಗೌಡರ್ ಹೇಳಿದರು. ಆದರೆ ಇದಕ್ಕೆ ತಮ್ಮ ಆಕ್ಷೇಪವಿಲ್ಲ ಎಂದು ಅರ್ಜಿದಾರರ ಪರ ವಕೀಲರು ಹಾಗೂ ಕೆಪಿಸಿಸಿ ಪರ ವಕೀಲರು ಹೇಳಿದರು. ಆದರೆ ಶಾಂತನಗೌಡರ್ ಪೀಠದಿಂದ ಹಿಂದೆ ಸರಿದರು ಎಂದು ತಿಳಿದುಬಂದಿದೆ.

ಇದರಿಂದ ಪೀಠ ಮರು ರಚನೆಯಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಪೀಠದಲ್ಲಿ ನ್ಯಾ.ಎನ್.ವಿ.ರಮನ್, ನ್ಯಾ. ಮೋಹನ್ ಶಾಂತನಗೌಡರ್ ಮತ್ತು ನ್ಯಾ.ಅಜಯ್ ರಸ್ತೋಗಿ ಇದ್ದರು. ಇದೀಗ ನ್ಯಾಯಮೂರ್ತಿ ಮೋಹನ್ ಅವರು ಹಿಂದೆ ಸರಿದ ಪರಿಣಾಮ ಮತ್ತೊಬ್ಬರನ್ನು ನೇಮಕ ಮಾಡಿ ಮರುಪೀಠ ರಚನೆಯಾಗಬೇಕಾಗಿದೆ.

ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ, ನಮ್ಮ ಕಕ್ಷಿದಾರರು ಆಗಸ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಸಾಕಷ್ಟ ಸಮಯವಾಗಿದ್ದು, ಆದಷ್ಟು ಬೇಗ ಅರ್ಜಿಯ ವಿಚಾರಣೆ ನಡೆಸಬೇಕೆಂದು ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡರು. ವಿಚಾರಣೆ ಮುಂದೂಡುವುದರಿಂದ ನಮಗೆ ಯಾವುದೇ ತೊಂದರೆ ಇಲ್ಲ ಎಂದು ಕೆಪಿಸಿಸಿ ಪರ ವಕೀಲ ಕಪಿಲ್ ಸಿಬಲ್ ತಿಳಿಸಿದ್ದಾರೆ.

ನ್ಯಾ.ಮೋಹನ್ ಶಾಂತನಗೌಡರು ಕರ್ನಾಟಕದ ಹಾವೇರಿ ಜಿಲ್ಲೆಯವರು. ಅರ್ಜಿ ಸಲ್ಲಿಸಿರುವ ಶಾಸಕರ ಪೈಕಿ ಬಿ.ಸಿ.ಪಾಟೀಲ್ ಸಹ ಹಾವೇರಿ ಮೂಲದವರಾಗಿದ್ದರಿಂದ ನಾವೇ ಅರ್ಜಿಯನ್ನು ಕೈಗೆತ್ತಿಕೊಳ್ಳುವುದು ಉತ್ತಮ ಅಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ನಾವು ಸಲ್ಲಿಸಿದ್ದ ಅರ್ಜಿ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆಗೆ ಬಂದಿದೆ. ಅದೇ ನಮಗೆ ಸಂತೋಷ. ಆದರೆ ನ್ಯಾಯಮೂರ್ತಿಯೊಬ್ಬರು ಪೀಠದಿಂದ ಹಿಂದೆ ಸರಿದಿದ್ದಾರೆ. ಈ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸೋಮವಾರ ಮತ್ತೆ ವಿಚಾರಣೆ ನಡೆಯುವ ಸಾಧ್ಯತೆ ಇದೆ. ನಾವು ತೀರ್ಪಿಗಾಗಿ ಕಾಯುವುದು ಅನಿವಾರ್ಯವಾಗಿದೆ ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಮತ್ತು ವಿಪ್ ಉಲ್ಲಂಘಿಸಿದ ಆರೋಪದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ನ 17 ಶಾಸಕರನ್ನು ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. ಈ ನಿರ್ಧಾರವನ್ನು ಪ್ರಶ್ನಿಸಿ ಎಲ್ಲಾ 17 ಮಂದಿ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

ರಮೇಶ್‌ ಜಾರಕಿಹೊಳಿ, ಮಹೇಶ್‌ ಕುಮಟಳ್ಳಿ, ಶ್ರೀಮಂತ್‌ ಪಾಟೀಲ್‌, ಪ್ರತಾಪ್‌ ಗೌಡ ಪಾಟೀಲ್‌, ಶಿವರಾಮ್‌ ಮಹಾಬಲೇಶ್ವರ ಹೆಬ್ಬಾರ್‌, ಬಿ ಸಿ ಪಾಟೀಲ್‌, ಆರ್‌. ಶಂಕರ್‌, ಆನಂದ್ ಸಿಂಗ್‌, ಡಾ.ಕೆ. ಸುಧಾಕರ್‌, ಬೈರತಿ ಬಸವರಾಜ್‌, ಎಸ್.ಟಿ. ಸೋಮಶೇಖರ್‌, ಮುನಿರತ್ನ, ಆರ್‌ ರೋಷನ್‌ ಬೇಗ್‌, ಎಂಟಿಬಿ ನಾಗರಾಜ್‌ , ಜೆಡಿಎಸ್‍ನ ಗೋಪಾಲಯ್ಯ, ಎಚ್.‍ವಿಶ್ವನಾಥ್, ಕೆ.ಸಿ.ನಾರಾಯಣ ಗೌಡ ಅನರ್ಹಗೊಂಡ ಶಾಸಕರಾಗಿದ್ದಾರೆ.

17 ಮಂದಿ ಶಾಸಕರ ನಿರ್ಧಾರದಿಂದ ಹಿಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com