ಹೊರ ವರ್ತುಲ ರಸ್ತೆ
ಹೊರ ವರ್ತುಲ ರಸ್ತೆ

ಪರಿಷ್ಕೃತ ಹೊರ ವರ್ತುಲ ರಸ್ತೆ ಯೋಜನೆ ಜಾರಿಗೆ ಸಂಪುಟ ಅನುಮೋದನೆ: ನವ ನಗರೋತ್ಥಾನಕ್ಕೆ ಹೆಸರು ಬದಲಾವಣೆ

ರಾಜಧಾನಿ ಬೆಂಗಳೂರಿನ ಪರಿಷ್ಕೃತ ಹೊರ ವರ್ತುಲ ರಸ್ತೆ ನಿರ್ಮಾಣ ಯೋಜನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. 8100 ಕೋಟಿ ಜೊತೆಗೆ 3850 ಕೋಟಿ ಹೆಚ್ಚುವರಿ ಕಾಮಗಾರಿ ಸೇರಿ 11,950 ಕೋಟಿ ರೂಗಳ ಕ್ರಿಯಾ ಯೋಜನಾ...

ಬೆಂಗಳೂರು: ರಾಜಧಾನಿ ಬೆಂಗಳೂರಿನ ಪರಿಷ್ಕೃತ ಹೊರ ವರ್ತುಲ ರಸ್ತೆ ನಿರ್ಮಾಣ ಯೋಜನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. 8100 ಕೋಟಿ ಜೊತೆಗೆ 3850 ಕೋಟಿ ಹೆಚ್ಚುವರಿ ಕಾಮಗಾರಿ ಸೇರಿ 11,950 ಕೋಟಿ ರೂಗಳ ಕ್ರಿಯಾ ಯೋಜನಾ ಪ್ರಸ್ತಾವನೆಗೆ ಅಂಗೀಕಾರ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಪ್ರಮುಖ ನಾಲ್ಕು ಹೊರ ವರ್ತುಲ ರಸ್ತೆಗಳನ್ನು ಸಂಪರ್ಕಿಸುವ 65.5 ಕೀ.ಮೀ. ಉದ್ದದ ಹೊರ ವರ್ತುಲ ರಸ್ತೆ ಯೋಜನೆಗೆ ಎದುರಾಗಿದ್ದ ಅಡೆತಡೆಗಳನ್ನು ನಿವಾಸರಿಲಾಗಿದೆ. ಈ ಯೋಜನೆಯನ್ನು ಬಿಡಿಎ ಹಾಗೂ  ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ  ನಿಯಮಿತ(ಕೆಯುಐಡಿಎಫ್ ಸಿ) ಸಂಸ್ಥೆಯ ಜೊತೆಗೆ  ಜತೆ ವಿಶೇಷ ಯೋಜನಾ ವಿಭಾಗ (ಸ್ಪೆಷಲ್ ಪರ್ಪಸ್ ವೆಹಿಕಲ್) ರಚನೆ ಮಾಡಿ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ವಿವರಿಸಿದರು.

ಪರಿಷ್ಕೃತ ಯೋಜನೆಯಂತೆ ಈ‌ ಹಿಂದೆ ಇದ್ದ  75 ಮೀಟರ್ ರಸ್ತೆ ಅಗಲವನ್ನು 100 ಮೀಟರ್ ಗೆ ಏರಿಸಲಾಗಿದೆ. 8,100 ಕೋಟಿ ರೂ ಭೂಸ್ವಾಧೀನಕ್ಕೆ ಹಾಗೂ 3,850 ಕೋಟಿ ರಸ್ತೆ ಕಾಮಗಾರಿಗೆ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ವರ್ತುಲ ರಸ್ತೆ ನಿರ್ಮಾಣಕ್ಕೆ ಅಂದಾಜು ಸುಮಾರು 1,810 ಎಕರೆ ಭೂಮಿ ಅಗತ್ಯತೆ ಇದ್ದು, ಎರಡು ಎಕರೆಗಿಂತ ಕಡಿಮೆ ಇರುವ ಭೂ ಮಾಲೀಕರಿಗೆ ಹೊಸ ಭೂ ಸ್ವಾಧೀನ ನಿಯಮದ ಪ್ರಕಾರ ಪರಿಹಾರ ನೀಡಲಾಗುವುದು. ಇವರಿಗೆ ಪೂರ್ಣ ಪ್ರಮಾಣದಲ್ಲಿ ನಗದು ರೂಪದಲ್ಲಿ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಇನ್ನು 2 ಎಕರೆಗಿಂತ ಹೆಚ್ಚಿರುವ ಭೂ ಒಡೆತನವಿರುವ ಮಾಲೀಕರಿಗೆ 50% ನಗದು ಮತ್ತು 50% ಟಿಡಿಆರ್ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಅಂತೆಯೇ ಈ ಪ್ರದೇಶದಲ್ಲಿರುವ ಸರ್ಕಾರಿ ಭೂಮಿಯನ್ನು ಉಚಿತವಾಗಿ ಯೋಜನೆಗಾಗಿ ಒದಗಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ಎರಡು ಎಕರೆ ಮೇಲ್ವಟ್ಟು ಹಿಡುವಳಿ ಹೊಂದಿರುವ ಮಾಲೀಕರಿಗೆ ಶೇ 50ರಷ್ಟು ಹಣದ ರೂಪದಲ್ಲಿ ಉಳಿದದ್ದನ್ನು ಅಭಿವೃದ್ಧಿ ಹಕ್ಕು - ಟಿಡಿಆರ್ ರೂಪದಲ್ಲಿ ನೀಡುವುದು. ಇದಕ್ಕೆ ಮಾಲೀಕರು ಒಪ್ಪಿಗೆ ನೀಡದಿದ್ದಲ್ಲಿ ಪೂರ್ಣ ಪ್ರಮಾಣದಲ್ಲಿ ನಗದು ರೂಪದಲ್ಲಿಯೇ ಅವರು ಭೂ ಪರಿಹಾರ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಭೂ ಮಾಲೀಕರು ಇಚ್ಚೆ ಪಟ್ಟಲ್ಲಿ ಪರ್ಯಾಯ ಭೂಮಿ ಮಂಜೂರು ಮಾಡುವ ಚಿಂತನೆಯೂ ಸರ್ಕಾರದ ಹಂತದಲ್ಲಿ ಚೆರ್ಚೆಯಾಗಿದೆ. ಆದರೆ ಇದು ಮತ್ತಷ್ಟು ಸಮಸ್ಯಾತ್ಮಕ ವಿಚಾರವಾಗಿರುವ ಕಾರಣ ಟಿಡಿಆರ್ ರೂಪದಲ್ಲಿ ಅಥವಾ ನಗದು ರೂಪದಲ್ಲಿಯೇ ಪರಿಹಾರ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದರು. 

ಬಿಡಿಎಗೆ ಭೂ ಸ್ವಾಧೀನಕ್ಕೆ ಅಗತ್ಯವಿರುವ 8100 ಕೋಟಿ ರೂ ಹಣವನ್ನು ರಾಜ್ಯ ಸರ್ಕಾರ ಸಾಲದ ರೂಪದಲ್ಲಿ ನೀಡಲಿದೆ. ಇನ್ನು ರಸ್ತೆ ಕಾಮಗಾರಿಗಾಗಿ ಜೈಕಾ ಮೂಲಕ 3850 ಕೋಟಿ ರೂ ಸಾಲ ಪಡೆಯಲಾಗುವುದು. ಒಂದು ವರ್ಷದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣ‌ಗೊಂಡರೆ, ಮೂರು ವರ್ಷದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು

ಮುಖ್ಯಮಂತ್ರಿ ಅವರ ನವ ಬೆಂಗಳೂರು ಯೋಜನೆ ಹೆಸರನ್ನು ಬದಲಾವಣೆ ಮಾಡಿ 'ಮುಖ್ಯಮಂತ್ರಿ ನವನಗರೋತ್ಥನ' ಎಂದು ಮರು ನಾಮಕರಣ ಮಾಡಲಾಗಿದ್ದು, ಹೊಸ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಈ ಯೋಜನೆಯ ಅಡಿಯಲ್ಲಿ ಹಿಂದಿನ 8015 ಕೋಟಿ ರೂ. ಕ್ರಿಯಾ ಯೋಜನೆಯನ್ನು ರದ್ದುಗೊಳಿಸಿ, ಅದಕ್ಕೆ ಪೂರಕವಾಗಿ 328 ಕೋಟಿ ರೂಪಾಯಿ ಸೇರ್ಪಡೆ ಮಾಡಿ ಹೊಸ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ವಿವರಿಸಿದರು.

ಮುಖ್ಯಮಂತ್ರಿ ನವ ನಗರೋತ್ಥಾನ ಯೋಜನೆಯಲ್ಲಿ ಅಗತ್ಯವಿರುವ ವಾರ್ಡ್, ಪ್ರದೇಶಗಳಲ್ಲಿ ಕಾಮಗಾರಿ ಕೈಗೊಳ್ಳುವ ಬದಲಾಗಿ ಬೇಕಾಬಿಟ್ಟಿ ಅನುದಾನ ಹಂಚಿಕೆ ಮಾಡಲಾಗಿತ್ತು. ಅದನ್ನೆಲ್ಲವನ್ನು ಪುನರ್ ಪರಿಶೀಲನೆ ನಡೆಸಿ ಹೊಸ ಯೋಜನೆ ರೂಪಿಸಲಾಗಿದೆ. ಮುಖ್ಯಮಂತ್ರಿ ಅವರು ನಗರ ಸಂಚಾರದ ವೇಳೆ ಹಲವಾರು ಪ್ರದೇಶಗಳಲ್ಲಿ ಸಮಸ್ಯೆಗಳನ್ನು ಗುರುತಿಸಿರುವ ಹಿನ್ನೆಲೆಯಲ್ಲಿ ಐಟಿಪಿಎಲ್ ಗೆ  ಪರ್ಯಾಯ 15 ರಸ್ತೆಗಳ ನಿರ್ಮಾಣಕ್ಕೆ 250 ಕೋಟಿ ರೂ ಹಂಚಿಕೆ ಮಾಡಲಾಗಿದೆ. ಇನ್ನು 25 ಕೋಟಿ ಮೆಕ್ಯಾನಿಕಲ್ ಸ್ವೀಪರ್ ಗೆ ನೀಡಲು ಒಪ್ಪಿದ್ದರೆ, 3.25  ಕೋಟಿ ರೂ.ಒಣ ಕಸ ಸಂಗ್ರಹ ಘಟಕ  ನಿರ್ಮಾಣಕ್ಕೆ ಹಂಚಿಕೆ ಮಾಡಲಾಗಿದ್ದು, ಹೀಗಾಗಿ ಹೆಚ್ಚುವರಿ 328 ಕೋಟಿರೂ ಹೊಸ ಕ್ರಿಯಾ ಯೋಜನೆಗೆ ಅನುದಾನ ನೀಡಲಾಗುವುದು ಎಂದು ಅವರು ವಿವರಿಸಿದರು.

ಮೈತ್ರಿ ಸರ್ಕಾರ ಹಾಗೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆಗೆ (ಸಿಸಿ ರೋಡ್-ವೈಟ್ ಟ್ಯಾಪಿಂಗ್ ) ಪ್ರತಿ ಕಿಲೋಮೀಟರ್ 11 ಕೋಟಿ  ವೆಚ್ಚ ಮಾಡಲಾಗುತ್ತಿತ್ತು. ವೈಟ್ ಟಾಪಿಂಗ್ ರಸ್ತೆ ಕಾಮಗಾರಿಯನ್ನು ಕಡಿಮೆ‌ ವೆಚ್ಚದಲ್ಲಿ ನಿರ್ಮಿಸಲು ಅವಕಾಶವಿದೆ ಎಂದು ಜನರಿಗೆ ತೋರಿಸಲು ಹೊಸದಾಗಿ ವೈಟ್ ಟ್ಯಾಪಿಂಗ್ ಕಾಮಗಾರಿ ಕೈಗೊಳ್ಳಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಅದರಂತೆ ಪ್ರಾಯೋಗಿಕವಾಗಿ ಪ್ರತಿ‌ ಕಿಲೋಮೀಟರ್ ಗೆ 5 - 6 ಕೋಟಿ ರೂ ವೆಚ್ಚದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳಲು 50 ಕೋಟಿ ರೂ ನೀಡಲು ತೀರ್ಮಾನಿಸಲಾಗಿದೆ. ಆದರೆ ಬಿಜೆಪಿ ಸರ್ಕಾರ ಸಿಸಿ ರಸ್ತೆ ನಿರ್ಮಾಣವನ್ನು ಮುಂದುವರೆಸುತ್ತದೆ ಎಂಬ ಉದ್ದೇಶವಲ್ಲ. ವೈಟ್ ಟ್ಯಾಪಿಂಗ್ ಕಾಮಗಾರಿಯಲ್ಲಿ ಶೇ 40ರ ಷ್ಟು ಅನುದಾನ ಕಾಮಗಾರಿಗೆ ಖರ್ಚಾದರೆ ಉಳಿದ ಹಣವನ್ನು ಮೇಲ್ವಿಚಾರಣೆ ಹಾಗೂ ಒಳ ಚರಂಡಿ, ಚರಂಡಿ, ಲೈನಿಂಗ್ ಕಾಮಗಾರಿ ಹಾಗೂ ಇತರೆ ಕಾಮಗಾರಿಗಳಿಗೆ ಬಳಕೆ ಮಾಡಲಾಗುತ್ತಿತ್ತು.ಇದರಿಂದ ಪ್ರತೀ ಕಿ ಮೀ 10 ರಿಂದ 11 ಕೋಟಿ ವೆಚ್ಚವಾಗುತ್ತಿತ್ತು. ಇದನ್ನು ತಪ್ಪಿಸಲು ವಿನೂತವಾಗಿ ಕಡಿಮೆ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.

Related Stories

No stories found.

Advertisement

X
Kannada Prabha
www.kannadaprabha.com