ಶಿವಮೊಗ್ಗ: ತ್ರಿವಳಿ ತಲಾಖ್ ನಿಷೇಧದ ಹೊರತಾಗಿಯೂ ವಾಟ್ಸಪ್ ನಲ್ಲಿ ಮಹಿಳೆಗೆ ತಲಾಖ್ ಕೊಟ್ಟ ದುಬೈ ಪತಿ

ತ್ರಿವಳಿ ತಲಾಖ್ ನಿಷೇಧದ ಹೊರತಾಗಿಯೂ ಶಿವಮೊಗ್ಗ ಮೂಲದ ಮಹಿಳೆಗೆ ವಾಟ್ಸಪ್ ನಲ್ಲೇ ತಲಾಖ್ ನೀಡಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.
ಸಂತ್ರಸ್ತ ಮಹಿಳೆ ಆಯಿಶಾ
ಸಂತ್ರಸ್ತ ಮಹಿಳೆ ಆಯಿಶಾ

21 ವರ್ಷ ಸಂಸಾರ ನಡೆಸಿದ್ದ ಪತಿರಾಯ, ವಾಟ್ಸ್ ಆ್ಯಪ್‌ನಲ್ಲೇ ತ್ರಿವಳಿ ತಲಾಖ್

ಶಿವಮೊಗ್ಗ: ತ್ರಿವಳಿ ತಲಾಖ್ ನಿಷೇಧದ ಹೊರತಾಗಿಯೂ ಶಿವಮೊಗ್ಗ ಮೂಲದ ಮಹಿಳೆಗೆ ವಾಟ್ಸಪ್ ನಲ್ಲೇ ತಲಾಖ್ ನೀಡಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.

ಶಿವಮೊಗ್ಗ ಜಿಲ್ಲೆಯ ಟ್ಯಾಂಕ್‌ ಮೊಹಲ್ಲಾ ನಿವಾಸಿಯಾಗಿರುವ ಆಯಿಶಾ ಸಿದ್ದಿಕಾ ಅದೇ ಬಡಾವಣೆಯ ಮುಸ್ತಫಾ ಬೇಗ್‌ ಜತೆ ಪ್ರೀತಿಯಾಗಿ 21 ವರ್ಷಗಳ ಹಿಂದೆಯೇ ಮದುವೆಯಾಗಿದ್ದರು. ಇದೀಗ 21 ವರ್ಷ ಸಂಸಾರ ನಡೆಸಿದ ಪತಿರಾಯ ಪತ್ನಿಗೆ ವಾಟ್ಸಪ್‌ ನಲ್ಲೇ 3 ಬಾರಿ ತಲಾಕ್‌ ಮೆಸೇಜ್ ಮಾಡಿ ವಿಚ್ಛೇದನ ನೀಡಿದ್ದಾನೆ. ಇದರಿಂದ ನೊಂದ ಪತ್ನಿ ಆಯಿಶಾ ನ್ಯಾಯ ಕೊಡಿಸುವಂತೆ ಮಹಿಳಾ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. 

ಆಕೆ ನೀಡಿರುವ ಮಾಹಿತಿ ಅನ್ವಯ, ದುಬೈನಲ್ಲಿ ಸಿಸಿ ಕ್ಯಾಮೆರಾ, ಲ್ಯಾಪ್ ಟಾಪ್‌ ಟೆಕ್ನಿಶಿಯನ್‌ ಆಗಿರುವ ಮುಸ್ತಫಾ ವರ್ಷಕ್ಕೆರಡು ಬಾರಿ ಪತ್ನಿ ಹಾಗೂ ದತ್ತು ಮಗಳನ್ನು ನೋಡಲು ಬರುತ್ತಿದ್ದ. ಜತೆಗೆ ಪ್ರತಿ ತಿಂಗಳು ಹಣ ಕಳುಹಿಸುತ್ತಿದ್ದ. ಈ ವರ್ಷ ಜನವರಿಯಲ್ಲಿ ಭಾರತಕ್ಕೆ ಬಂದು ವಾಪಸ್‌ ಹೋದ ಮೇಲೆ ವಾಟ್ಸಪ್‌ನಿಂದ ಪತ್ನಿಗೆ ತಲಾಖ್‌ ಸಂದೇಶ ಕಳುಹಿಸಿದ್ದಾನೆ. ಇದನ್ನು ಒಪ್ಪದ ಪತ್ನಿ ಮಾತು ಮುಂದುವರಿಸಲು ಪ್ರಯತ್ನಿಸಿದಾಗ ಮತ್ತೆರಡು ಬಾರಿ ತಲಾಖ್‌ ಸಂದೇಶ ಕಳಿಸಿದ್ದಾನೆ ಎಂದು ಆಯಿಶಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲಗೆ ತಲಾಖ್‌ ನೀಡಬೇಡಿ ಎಂದು ಪತಿ  ಮುಸ್ತಫಾಗೆ ಅಂಗಲಾಚಿದರೂ ಆತ ಕೇಳಿಲ್ಲ ಎಂದು ಪೊಲೀಸರ ಬಳಿ ಅಳಲು ತೋಡಿಕೊಂಡಿದ್ದಾರೆ. 

ಈ ಕುರಿತು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಆಯಿಶಾ, ಪ್ರಧಾನಿ ಮೋದಿ ತಲಾಖ್‌ ನಿಷೇಧ ಕಾನೂನು ಜಾರಿಗೆ ತಂದಿದ್ದಾರೆ. ಆದರೂ ತ್ರಿವಳಿ ತಲಾಖ್ ದುರ್ಬಳಕೆಯಾಗುತ್ತಿದೆ. ನಾನು ಈ ತಲಾಖ್ ಅನ್ನು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ನಾನು ದೂರು ನೀಡಿದ್ದು, ಪೊಲೀಸರು ನನಗೆ ನ್ಯಾಯಕೊಡಿಸಬೇಕು. ಆದರೆ ಪತಿ ದುಬೈನಲ್ಲಿರುವುದರಿಂದ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಿದ್ದಾರೆ. ನಾನು ನನ್ನ ಪತಿ ಮತ್ತು ವಿದೇಶಾಂಗ ಇಲಾಖೆಗೆ ಟ್ವೀಟ್‌ ಮಾಡಿ, ನ್ಯಾಯ ಕೇಳುವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com