ಬೆಳಗಾವಿ ಬದಲು ಬೆಂಗಳೂರಿನಲ್ಲೇ ಅ.14ರಿಂದ 26ರವರೆಗೆ ಚಳಿಗಾಲ ಅಧಿವೇಶನ

ಪ್ರವಾಹದಿಂದ ಜನರು ಸಂಕಷ್ಟದಲ್ಲಿರುವ ಹಿನ್ನಲೆಯಲ್ಲಿ ಈ ಬಾರಿ ಬೆಳಗಾವಿಯ ಬದಲು ಬೆಂಗಳೂರಿನಲ್ಲಿಯೇ ಬರುವ ಅಕ್ಟೋಬರ್ 14ರಿಂದ 26ರವರೆಗೆ ಚಳಿಗಾಲ ಅಧಿವೇಶನ ನಡೆಸಲು ಸಚಿವ ಸಂಪುಟ ಬುಧವಾರ ತೀರ್ಮಾನ ಕೈಗೊಂಡಿದೆ.
ವಿಧಾನಸೌಧ (ಸಂಗ್ರಹ ಚಿತ್ರ)
ವಿಧಾನಸೌಧ (ಸಂಗ್ರಹ ಚಿತ್ರ)

ಬೆಂಗಳೂರು: ಪ್ರವಾಹದಿಂದ ಜನರು ಸಂಕಷ್ಟದಲ್ಲಿರುವ ಹಿನ್ನಲೆಯಲ್ಲಿ ಈ ಬಾರಿ ಬೆಳಗಾವಿಯ ಬದಲು ಬೆಂಗಳೂರಿನಲ್ಲಿಯೇ ಬರುವ ಅಕ್ಟೋಬರ್ 14ರಿಂದ 26ರವರೆಗೆ ಚಳಿಗಾಲ ಅಧಿವೇಶನ ನಡೆಸಲು ಸಚಿವ ಸಂಪುಟ ಬುಧವಾರ ತೀರ್ಮಾನ ಕೈಗೊಂಡಿದೆ. 

ಅಧಿವೇಶನದಲ್ಲಿ ಬಜೆಟ್'ಗೆ ಅನುಮೋದನೆ ಪಡೆಯುವ ಜೊತೆಗೆ ಅತಿವೃಷ್ಟಿ ಹಾಗೂ ಪ್ರವಾಹದಿಂದ ಪರಿಹಾರ ಕಾರ್ಯ ಕೈಗೊಳ್ಳಬೇಕಾಗಿರುವುದರಿಂದ ಪೂರಕ ಬಜೆಟ್ ಮಂಡಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿಯವರು ಹೇಳಿದ್ದಾರೆ. 

ಸುವರ್ಣ ವಿಧಾನಸೌಧ ಉದ್ಘಾಟನೆಗೊಂಡಾಗಿನಿಂದಲೂ ಚಳಿಗಾಲ ಅಧಿವೇಶನವನ್ನು ಬೆಳಗಾವಿಯಲ್ಲಿಯೇ ನಡೆಸುವುದು ಸಂಪ್ರದಾಯವಾಗಿ ನಡೆದುಕೊಂಡು ಬರುತ್ತಿದೆ. ಆದರೆ, ಪ್ರವಾಹ ಹಿನ್ನೆಲೆಯಲ್ಲಿ ಈ ಬಾರಿಯ ಅಧಿವೇಶನವನ್ನು ರಾಜ್ಯ ಸರ್ಕಾರ ಬೆಂಗಳೂರಿನಲ್ಲಿಯೇ ನಡೆಸಲು ನಿರ್ಧರಿಸಿದೆ. 

ಈ ನಡುವೆ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ ಕಾರಿದ್ದು, ಜನರ ಆಕ್ರೋಶ ಎದುರಿಸಬೇಕಾಗುತ್ತದೆ ಎಂಬ ಭಯದಿಂದ ಬೆಳಗಾವಿ ಬದಲು ಬೆಂಗಳೂರಿನಲ್ಲಿಯೇ ಅಧಿವೇಶನ ನಡೆಸಲು ಬಿಜೆಪಿ ನಿರ್ಧರಿಸಿದೆ ಎಂದು ಹೇಳಿದೆ. 

ಕಾಂಗ್ರೆಸ್ ಪಕ್ಷದ ಈ ಟೀಕೆಗಳನ್ನು ತಿರಸ್ಕರಿಸಿರುವ ಬಿಜೆಪಿ, ಬೆಳಗಾವಿಯಲ್ಲಿ ಅಧಿವೇಶನ ನಡೆಸಿದರೆ, ಅಲ್ಲಿನ ಪರಿಹಾರ ಕಾರ್ಯಕ್ಕೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com