ಬಿಎಂಟಿಸಿಯಲ್ಲಿ ಮುಂದುವರೆದ ಕಿರಿಕಿರಿ: ಚಿಲ್ಲರೆ ಇಲ್ಲ ಎಂದು ಪ್ರಯಾಣಿಕನ ಕೆಳಗಿಳಿಸಿದ ನಿರ್ವಾಹಕಿ
ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಕರಿಗೆ ಪ್ರತೀನಿತ್ಯ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಬಸ್ ನಿರ್ವಾಹಕರು ಹಾಗೂ ಚಾಲಕರ ವಿರುದ್ಧ ದೂರುಗಳು ದಾಖಲಾಗುವುದೂ ಕೂಡ ಹೊಸದೇನಲ್ಲ. ಆದರೆ, ಈ ಬಾರಿ ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ಪ್ರಯಾಣಿಕರೊಬ್ಬರನ್ನು ಕೆಳಗಿಳಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
Published: 22nd September 2019 11:54 AM | Last Updated: 22nd September 2019 12:03 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಕರಿಗೆ ಪ್ರತೀನಿತ್ಯ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಬಸ್ ನಿರ್ವಾಹಕರು ಹಾಗೂ ಚಾಲಕರ ವಿರುದ್ಧ ದೂರುಗಳು ದಾಖಲಾಗುವುದೂ ಕೂಡ ಹೊಸದೇನಲ್ಲ. ಆದರೆ, ಈ ಬಾರಿ ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ಪ್ರಯಾಣಿಕರೊಬ್ಬರನ್ನು ಕೆಳಗಿಳಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಜಾಲಹಳ್ಳಿಯಿಂದ ಬೃಂದಾವನ (ಪೀಣ್ಯ2ನೇ ಹಂತ)ಕ್ಕೆ ತೆರಳುತ್ತಿದ್ದೆ. ಬಸ್ ಖಾಲಿಯಿತ್ತು. ಬಸ್ ಮುಂದೆ ಸಾಗಲು ಆರಂಭವಾಗುತ್ತಿದ್ದಂತೆಯೇ ಲೇಡಿ ಕಂಡೆಕ್ಟರ್ ಒಬ್ಬರು ಬಂದು ಎಲ್ಲಿಗೆ ಹೋಗಬೇಕೆಂದು ಕೇಳಿದರು. ಈ ವೇಳೆ ಟಿಕೆಟ್ ಕೊಡಲು ರೂ.100 ಕೊಟ್ಟಿದ್ದೆ. ಬಳಿಕ ಮುಂದಿನ ನಿಲ್ದಾಣದಲ್ಲಿ ಕೂಡಲೇ ಇಳಿದು ಹೋಗುವಂತೆ ತಿಳಿಸಿದರು. ಇದಾದ ಬಳಿಕ ಹಲವು ಪ್ರಯಾಣಿಕರು ಬಸ್ ಹತ್ತಿದ್ದರು. ಎಲ್ಲರೂ ಚಿಲ್ಲರೆಯನ್ನೇ ನೀಡಿದ್ದರು. ರೂ.90 ಚಿಲ್ಲರೆ ನೀಡುವುದು ನಿರ್ವಾಹಕಿಗೆ ದೊಡ್ಡದಾಗಿರಲಿಲ್ಲ. 2 ನಿಮಿಷಗಳ ಬಳಿಕ ನಿಲ್ದಾಣ ಬರುತ್ತಿದ್ದಂತೆಯೇ ಜೋರಾಗಿ ಬಸ್ ನಿಂದ ಇಳಿಯುವಂತೆ ಕೂಗಿದರು. ಅದೃಷ್ಟವೋ ಏನೋ ಬಸ್ ಇಳಿಯುತ್ತಿದ್ದಂತೆಯೇ ಮತ್ತೊಂದು ಬಸ್ ಸಿಕ್ಕಿತ್ತು. ಅಲ್ಲಿದ್ದ ಮತ್ತೊಬ್ಬ ಲೇಡಿ ಕಂಡೆಕ್ಟರ್ ರೂ.100ಕ್ಕೆ ಚಿಲ್ಲರೆ ಕೊಡ್ಡಿದ್ದರು ಎಂದು ರಿಚ್ಮಂಡ್ ಟೌನ್ ನಿವಾಸಿ ಆನಂದ್ ಡೆರಿಖ್ ಹೇಳಿದ್ದಾರೆ.
ಈ ಬಗ್ಗೆ ಆನಂದ್ ಅವರು ತಮ್ಮ ಟ್ವಿಟರ್ ನಲ್ಲಿಯೂ ಬರೆದುಕೊಂಡಿದ್ದು, ಚಿಲ್ಲರೆ ಇಲ್ಲದ ಕಾರಣಕ್ಕೆ ನನ್ನನ್ನು ಬಸ್ ನಿಂದ ಕೆಳಗಿಳಿಸಲಾಯಿತು. ಚಿಲ್ಲರೆ ಪಡೆದುಕೊಳ್ಳಲು ಅಂಗಡಿಯೊಂದಕ್ಕೆ ತೆರಳಿದ್ದ ಹಿನ್ನೆಲೆಯಲ್ಲಿ ಬಸ್ ಸಂಖ್ಯೆ ದಾಖಲಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಐಐಎಸ್'ಸಿ ಸಿವಿಲ್ ಇಂಜಿನಿಯರಿಂಗ್, ಸಾರಿಗೆ ವ್ಯವಸ್ಥೆಗಳ ಇಂಜಿನಿಯರ್ ಸಹಾಯಕ ಪ್ರಾಧ್ಯಾಪಕ ಡಾ.ಆಶಿಶ್ ವರ್ಮಾ ಮಾತನಾಡಿ, ಇಂತಹ ಸಮಸ್ಯೆಗಳನ್ನು ನಿವಾರಿಸಲು ಮೊಬಿಲಿಟಿ ಕಾರ್ಡ್ ಉತ್ತಮವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಈವರೆಗೂ ಇದೇ ರೀತಿಯ 200 ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷ 662 ಪ್ರಕರಣಗಳು ದಾಖಲಾಗಿರುವುದಾಗಿ ತಿಳಿದುಬಂದಿದೆ.