ಮನೆಗೆಲಸಕ್ಕೆ ಹೋದ ಮಂಗಳೂರಿನ ಮಹಿಳೆಗೆ ಕುವೈತ್ ನಲ್ಲಿ ತೀವ್ರ ಕಿರುಕುಳ; ರಕ್ಷಿಸಿದ ರಾಯಭಾರ ಕಚೇರಿ 

ಕುವೈತ್ ನಲ್ಲಿ ನರಕಯಾತನೆ ಅನುಭವಿಸಿದ್ದ ಮಂಗಳೂರು ಮೂಲದ ಮಹಿಳೆ ಸ್ವದೇಶಕ್ಕೆ ಸುರಕ್ಷಿತವಾಗಿ ಮರಳಿದ್ದಾರೆ. 
ರೇಶ್ಮಾ ಸುವರ್ಣ
ರೇಶ್ಮಾ ಸುವರ್ಣ

ಮಂಗಳೂರು: ಕುವೈತ್ ನಲ್ಲಿ ನರಕಯಾತನೆ ಅನುಭವಿಸಿದ್ದ ಮಂಗಳೂರು ಮೂಲದ ಮಹಿಳೆ ಸ್ವದೇಶಕ್ಕೆ ಸುರಕ್ಷಿತವಾಗಿ ಮರಳಿದ್ದಾರೆ.


ಮಂಗಳೂರಿನ ಕಸಬಾ ಬಂಗ್ರೆಯ ನಿವಾಸಿ ರೇಶ್ಮಾ ಸುವರ್ಣ(38ವ) ಅವರನ್ನು ಭಾರತೀಯ ರಾಯಭಾರಿ ಕಚೇರಿ ಸ್ವದೇಶಕ್ಕೆ ಮರಳಲು ಸಹಾಯ ಮಾಡಿದ್ದು ಪ್ರಸ್ತುತ ಮಹಾರಾಷ್ಟ್ರದ ಶಿರಡಿಯಲ್ಲಿದ್ದಾರೆ. 


ಕಳೆದ ಜನವರಿ 2ರಂದು ಕುವೈತ್ ಗೆ ಮನೆಗೆಲಸಕ್ಕೆಂದು ರೇಶ್ಮಾ ಕೇರಳದ ಜಾಫರ್ ಎಂಬ ಏಜೆಂಟ್ ರ ಮೂಲಕ ಕುವೈತ್ ನ ಹಟಿನ್ ನಲ್ಲಿ ವೃದ್ಧ ದಂಪತಿಯ ಮನೆಗೆಲಸಕ್ಕೆಂದು ಹೋಗಿದ್ದರು.


ಅಲ್ಲಿ ಹೋದ ಕೆಲ ದಿನಗಳಲ್ಲಿಯೇ ರೇಶ್ಮಾಗೆ ನರಕದ ದರ್ಶನ ಆರಂಭವಾಯಿತು. ಶಾರೀರಿಕ ಮತ್ತು ಮಾನಸಿಕ ಹಿಂಸೆ ನೀಡಲು ಆರಂಭಿಸಿದರು. ಗೃಹ ಬಂಧನದಲ್ಲಿರಿಸಲಾಯಿತು. ತನ್ನ ಕಷ್ಟವನ್ನು ವಾಯ್ಸ್ ಮೆಸೇಜ್ ಮೂಲಕ ರೇಶ್ಮಾ ಕಳುಹಿಸಿದ್ದು ವೈರಲ್ ಆಯಿತು. ಅದು ಕುವೈತ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಗೊತ್ತಾಗಿ ಭಾರತಕ್ಕೆ ಕಳುಹಿಸಲು ಸಹಾಯ ಮಾಡಿದರು. 


ಶಿರಡಿಯಿಂದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ರೇಶ್ಮಾ, ತಾನು ಮರಳಿ ಬರುತ್ತೇನೆ ಎಂಬ ಭಾವನೆಯೇ ಇರಲಿಲ್ಲ ಎನ್ನುತ್ತಾರೆ. ನನ್ನ ಪತಿಗೆ ಪಿತ್ತಜನಕಾಂಗದ ಸಮಸ್ಯೆ ಇತ್ತು. ಅವರ ಆರೋಗ್ಯದ ವೆಚ್ಚಕ್ಕೆಂದು 20 ಲಕ್ಷ ರೂಪಾಯಿ ಖರ್ಚು ಮಾಡಿದೆ, ಅದರ ಸಾಲವನ್ನು ತೀರಿಸಬೇಕಾಗಿತ್ತು. ಹೀಗಾಗಿ ದುಡಿಯಲೆಂದು ಕುವೈತ್ ಗೆ ಹೋದೆ. ಅಲ್ಲಿಗೆ ಹೋಗಿ ಕೆಲ ತಿಂಗಳಲ್ಲಿಯೇ ನನ್ನ ಪತಿ ತೀರಿಕೊಂಡರು.


ಏಜೆಂಟ್ ಬಳಿ ಸಹಾಯ ಕೋರಿದಾಗ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಮನೆ ಮಾಲಿಕರಿಗೆ ನನ್ನನ್ನು ಕೊಲ್ಲಲು ಹೇಳಿದ್ದಾರೆ. ನಂತರ ಕುವೈತ್ ನಲ್ಲಿರುವ ನನ್ನ ಸ್ನೇಹಿತರನ್ನು ಸಂಪರ್ಕಿಸಿದೆ. ಒಂದು ದಿನ ಕಸ ಬಿಸಾಡಲೆಂದು ಮನೆಯ ಹೊರಗೆ ಬಂದಾಗ ಡಸ್ಟ್ ಬಿನ್ ಒಳಗೆ ನನ್ನ ಪರ್ಸ್ ಹಾಕಿದೆ. ಅದು ರಾಯಭಾರಿ ಕಚೇರಿ ಸಿಬ್ಬಂದಿಗೆ ಸಿಕ್ಕಿ ನನ್ನನ್ನು ಕಾಪಾಡಿದರು ಎಂದು ರೇಶ್ಮಾ ಹೇಳುತ್ತಾರೆ.


ಪ್ರಸ್ತುತ ರೇಶ್ಮಾ ಶಿರಡಿಯಲ್ಲಿ ತನ್ನಿಬ್ಬರು ಮಕ್ಕಳು ಮತ್ತು ಅತ್ತೆ-ಮಾವನ ಜೊತೆ ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com