ಕೊಳ್ಳೇಗಾಲ: ನಾಲೆ ಒಡೆದು ಊರಿಗೆ ನುಗ್ಗಿದ ನೀರು; ಅಪಾರ ಬೆಳೆ ಹಾನಿ
ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ನಾಲೆ ತುಂಬಿ ಒಡೆದ ಪರಿಣಾಮ ತಾಲೂಕಿನ ಹೊಂಡರಬಾಳು ಗ್ರಾಮಕ್ಕೆ ನೀರು ನುಗ್ಗಿದ್ದು 100 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದ ಭತ್ತ ಸಂಪೂರ್ಣ ಜಲಾವೃತಗೊಂಡು ನಾಶವಾಗಿದೆ.
Published: 25th September 2019 01:48 PM | Last Updated: 25th September 2019 01:48 PM | A+A A-

ಸಾಂದರ್ಭಿಕ ಚಿತ್ರ
ಕೊಳ್ಳೇಗಾಲ: ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ನಾಲೆ ತುಂಬಿ ಒಡೆದ ಪರಿಣಾಮ ತಾಲೂಕಿನ ಹೊಂಡರಬಾಳು ಗ್ರಾಮಕ್ಕೆ ನೀರು ನುಗ್ಗಿದ್ದು 100 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದ ಭತ್ತ ಸಂಪೂರ್ಣ ಜಲಾವೃತಗೊಂಡು ನಾಶವಾಗಿದೆ.
ಹೊಂಡರಬಾಳು ಗ್ರಾಮದ ನಾಲೆಯಲ್ಲಿ ಮಳೆ ನೀರು ಹಾಗೂ ಕಬಿನಿ ನಾಲೆ ನೀರು ಹೆಚ್ಚಾದ ಹಿನ್ನೆಲೆ ನಾಲೆ ಒಡೆದು ತಗ್ಗು ಪ್ರದೇಶದ ಜಮೀನುಗಳಿಗೆ ನೀರು ಹರಿದಿದೆ. ಪರಿಣಾಮ ಕಳೆದೊಂದು ವಾರದಿಂದ ನಾಟಿ ಮಾಡಿದ್ದ ನೂರಾರು ಎಕೆರೆ ಭತ್ತದ ಪೈರುಗಳು ಸಂಪೂರ್ಣ ಜಲಾವೃತಗೊಂಡಿವೆ.
ಕೆಲ ಜಮೀನುಗಳಿಗೆ ರಭಸವಾಗಿ ನೀರು ನುಗ್ಗಿದ ಪರಿಣಾಮ ಭತ್ತದ ಪೈರುಗಳು ಕೊಚ್ಚಿ ಹೋಗಿವೆ. ರೈತರು ತಮ್ಮ ಜಮೀನಿಗೆ ನುಗ್ಗಿದ್ದ ನೀರನ್ನು ಹೊರ ಹಾಕಲು ಹರ ಸಾಹಸಪಡುತ್ತಿದ್ದ ದೃಶ್ಯ ಕಂಡು ಬಂತು.
ಕಾವೇರಿ ನೀರಾವರಿ ನಿಗಮದ ಇಂಜಿನಿಯರ್‌ಗಳು ನಮಗೆ ಬೇಕು ಎಂದಾಗ ಬೆಳೆಗೆ ನೀರು ಪೂರೈಸುವುದಿಲ್ಲ. ಬೇಡ ಎಂದಾಗ ನಾಲೆಯನ್ನು ಭದ್ರಪಡಿಸುವುದಿಲ್ಲ. ನಾಲೆಯಲ್ಲಿ ಗಿಡ-ಗಂಟಿ ಸೇರಿದಂತೆ ಸಮರ್ಪಕವಾಗಿ ಹೂಳೆತ್ತಿಸದ ಹಿನ್ನೆಲೆ ಮಳೆ ನೀರು ಸರಾಗವಾಗಿ ಹರಿಯದೆ ಜಮೀನುಗಳಿಗೆ ನುಗ್ಗಿದೆ’ ಎಂದು ರೈತರು ದೂರಿದರು.