ಸಾಕ್ಷ್ಯಚಿತ್ರದೊಂದಿಗೆ ಪ್ರಧಾನಿ ಭೇಟಿ ಮಾಡಲು  ಹೊರಟಿದ್ದಾರೆ ದ.ಕ ಜಿಲ್ಲೆಯ ಈ ಗ್ರಾಮಸ್ಥರು!

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬಲ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಗಳು ಸಾಕ್ಷ್ಯಚಿತ್ರ ತಯಾರಿಸಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಲು ನಿರ್ಧರಿಸಿದ್ದಾರೆ.
ಗ್ರಾಮದ ಹದಗೆಟ್ಟ ರಸ್ತೆಯ ದುಸ್ಥಿತಿ
ಗ್ರಾಮದ ಹದಗೆಟ್ಟ ರಸ್ತೆಯ ದುಸ್ಥಿತಿ

ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬಲ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಗಳು ಸಾಕ್ಷ್ಯಚಿತ್ರ ತಯಾರಿಸಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಸಾಕ್ಷ್ಯಚಿತ್ರ ತಯಾರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ತಮ್ಮ ಗ್ರಾಮದ ರಸ್ತೆಗಳು, ಬಸ್ ನಿಲ್ದಾಣ, ಆರೋಗ್ಯ ಮತ್ತು ಇತರ ಮೂಲಭೂತ ಸೌಕರ್ಯ ಕೇಂದ್ರಗಳ ದುಸ್ಥಿತಿ ಬಗ್ಗೆ ಇಂಗ್ಲಿಷ್ ಉಪ ಶೀರ್ಷಿಕೆ ಇಟ್ಟುಕೊಂಡು ಸಾಕ್ಷ್ಯಚಿತ್ರ ತಯಾರಿಸುತ್ತಿದ್ದಾರೆ. ಅದನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ತೋರಿಸುವ ಯೋಜನೆಯಲ್ಲಿದ್ದಾರೆ.


ಪ್ರಧಾನಿ ನರೇಂದ್ರ ಮೋದಿಯವರ ಫ್ಲಾಗ್ ಶಿಪ್ ಯೋಜನೆಯ ಸಂಸದರ ಆದರ್ಶ ಗ್ರಾಮದಡಿ ದಕ್ಷಿಣ ಕನ್ನಡ ಜಿಲ್ಲೆ ಸಂಸದ ನಳಿನ್ ಕುಮಾರ್ ಕಟೀಲ್ ಬಲ್ಪ ಗ್ರಾಮವನ್ನು ದತ್ತು ತೆಗೆದುಕೊಂಡು ಮಾದರಿ ಗ್ರಾಮವನ್ನಾಗಿ ರೂಪಿಸುವ ಉದ್ದೇಶ ಹೊಂದಿದ್ದರು. ಅದಾಗಿ 6 ವರ್ಷಗಳು ಕಳೆದರೂ ಇನ್ನೂ ಈ ಗ್ರಾಮಕ್ಕೆ ಮೂಲಭೂತ ಸೌಕರ್ಯ ಮರೀಚಿಕೆಯಾಗಿದೆ. 


ಕಳೆದ ಭಾನುವಾರ ಅಸೌಖ್ಯಕ್ಕೀಡಾಗಿದ್ದ ರಾಮಣ್ಣ ಪೂಜಾರಿ ಎಂಬವವರನ್ನು ಅವರ ಕುಟುಂಬಸ್ಥರು ಮರದ ಕುರ್ಚಿಯಲ್ಲಿ ಹೊತ್ತುಕೊಂಡು 1 ಕಿಲೋ ಮೀಟರ್ ನಡೆದುಕೊಂಡು ಹೋಗಿ ಆಂಬ್ಯುಲೆನ್ಸ್ ವಾಹನದಲ್ಲಿ ಕೂರಿಸಬೇಕಾಯಿತು. ಇವರ ಮನೆಗೆ ರಸ್ತೆ ಸಂಪರ್ಕ ಸರಿಯಾಗಿ ಇಲ್ಲ. 


ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಗ್ರಾಮಸ್ಥ ದಿನೇಶ್ ಎಣ್ಣೆಮಜಲು, ಬಳ್ಪದಿಂದ ಎಣ್ಣೆಮಜಲು, ಬೀಡಿಗುಡ್ಡೆ. ಅಡ್ಡಬೈಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟು ಹೋಗಿದೆ. ಇಲ್ಲಿನ ರಸ್ತೆಯ ಮರು ಡಾಂಬರೀಕರಣಕ್ಕೆ ಮೂರು ಬಾರಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಆದರೆ ಕೆಲಸ ಮಾತ್ರ ನೆರವೇರಲೇ ಇಲ್ಲ, ರಸ್ತೆ ಪರಿಸ್ಥಿತಿ ಮಾತ್ರ ಹಾಗೆಯೇ ಹದಗೆಟ್ಟು ಹೋಗಿದೆ. ಇಲ್ಲಿಗೆ ಹಣ ಮಂಜೂರಾಗಿದೆ ಎಂದು ಸಂಸದ ಕಟೀಲು ಹೇಳುತ್ತಾರೆ. ಹಾಗಾದರೆ ಹಣ ಎಲ್ಲಿ ಹೋಯಿತು? ದತ್ತು ತೆಗೆದುಕೊಂಡ ಗ್ರಾಮವನ್ನು ಸಂಸದರು ಏಕೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಕೇಳುತ್ತಾರೆ.


ಸಂಸದರ ಬಳಿ ಮನವಿ ಮಾಡಿ ನಿರಾಶೆಗೊಂಡಿರುವ ಗ್ರಾಮಸ್ಥರು ಇದೀಗ ದೆಹಲಿಗೆ ಪ್ರಧಾನ ಮಂತ್ರಿಗಳ ಬಳಿಗೆ ಹೋಗಲು ನಿರ್ಧರಿಸಿದ್ದಾರೆ. ಅದು ಇಲ್ಲಿನ ವಾಸ್ತವ ಚಿತ್ರಗಳನ್ನು ಡಾಕ್ಯುಮೆಂಟರಿ ಮಾಡುವ ಮೂಲಕ. ಈ ಸಾಕ್ಷ್ಯಚಿತ್ರದಲ್ಲಿ ನಿರತರಾಗಿರುವ ಸತೀಶ್ ಪೂಜಾರಿ, ಗ್ರಾಮಕ್ಕೆ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ. ಅಂಗಡಿಯಿಂದ ಏನಾದರೂ ಸಾಮಾನು ತರಬೇಕೆಂದರೂ ಮೈಲುಗಟ್ಟಲೆ ಹೋಗಬೇಕು. ನಮಗೆ ಬೇರೆ ದಾರಿಯಿಲ್ಲ, ಹೀಗಾಗಿ ಸಂಸದರನ್ನೇ ಭೇಟಿ ಮಾಡುತ್ತೇವೆ. ಸಾಕ್ಷ್ಯಚಿತ್ರದಲ್ಲಿ ಶೌಚಾಲಯ, ಶಾಲೆ, ಆರೋಗ್ಯ ಕೇಂದ್ರಗಳು ಮತ್ತು ರಸ್ತೆಗಳಿಲ್ಲದ್ದರ ಬಗ್ಗೆ ವಿವರಿಸಿದ್ದೇವೆ ಎಂದರು.


ಸಂಸದ ಆದರ್ಶ ಗ್ರಾಮ ಕೇವಲ ಭಾಷಣ, ಬ್ಯಾನರ್,ಶಂಕು ಸ್ಥಾಪನೆ, ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆ. ಆದರೆ ವಾಸ್ತವ ಸ್ಥಿತಿ ಬೇರೆಯದೇ ಇದೆ. ಜನರು ಬದಲಾವಣೆ ಬಯಸಿ ಬಿಜೆಪಿಗೆ ಮತ ಹಾಕಿದ್ದಾರೆ ಎನ್ನುತ್ತಾರೆ ಈ ಗ್ರಾಮಸ್ಥರನ್ನು ಅನ್ಯಾಯದ ವಿರುದ್ಧ ಹೋರಾಡಲು ಒಟ್ಟು ಸೇರಿಸಿರುವ ಸ್ವತಃ ಬಿಜೆಪಿ ಕಾರ್ಯಕರ್ತನಾಗಿರುವ ಗುರುಪ್ರಸಾದ್ ಪಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com