ಕನ್ನಡದಲ್ಲಿ ಬೈಲಾಪ್ರತಿ ಸಲ್ಲಿಸದ ಬಿಬಿಎಂಪಿ: ಪಾಲಿಕೆ ವಿರುದ್ಧ ಹೈಕೋರ್ಟ್ ಕೆಂಡಾಮಂಡಲ

ನಗರ ವ್ಯಾಪ್ತಿಯಲ್ಲಿ ಎಲ್ಲಾ ಬಗೆಯ ಜಾಹೀರಾತು ನಿಷೇಧಿಸುವ ನಿಟ್ಟಿನಲ್ಲಿ ಅನುಮೋದನೆಗೊಳಿಸಿರುವ ಹೋರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ-2018ನ್ನು ಕನ್ನಡ ಭಾಷೆಯಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸುವುದಕ್ಕೆ ವಿಳಂಬವಾಗಲು ಕಾರಣರಾದ ಬಿಬಿಎಂಪಿ ವಿರುದ್ದ ಹೈಕೋರ್ಟ್ ಬುಧವಾರ ತೀವ್ರವಾಗಿ ಕೆಂಡಕಾರಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಎಲ್ಲಾ ಬಗೆಯ ಜಾಹೀರಾತು ನಿಷೇಧಿಸುವ ನಿಟ್ಟಿನಲ್ಲಿ ಅನುಮೋದನೆಗೊಳಿಸಿರುವ ಹೋರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ-2018ನ್ನು ಕನ್ನಡ ಭಾಷೆಯಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸುವುದಕ್ಕೆ ವಿಳಂಬವಾಗಲು ಕಾರಣರಾದ ಬಿಬಿಎಂಪಿ ವಿರುದ್ದ ಹೈಕೋರ್ಟ್ ಬುಧವಾರ ತೀವ್ರವಾಗಿ ಕೆಂಡಕಾರಿದೆ. 

ಬಿಬಿಎಂಪಿ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ಕ್ರಮ ಕೈಗೊಳ್ಳುವುದಾಗಿ ಹೈಕೋರ್ಟ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ. 

ಅಕ್ರಮ ಜಾಹೀರಾತುಗಳ ಹಾವಳಿ ತಡೆಯುವ ಸಲುವಾಗಿ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಹಾಗೂ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. 

ಅರ್ಜಿಯು ಸೆ.9ರಂದು ವಿಚಾರಣೆಗೆ ಬಂದಿದ್ದ ವೇಳೆ, ಬಿಬಿಎಂಪಿ ಕಳುಹಿಸಿರುವ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ-2018 ಅನ್ನು ಅನುಮೋದನೆಗೊಳಿಸಿ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ ಎಂದು ತಿಳಿಸಿದ ಸರ್ಕಾರ ಪ್ರತಿಯನ್ನು ಸಲ್ಲಿಸಿತ್ತು. ಕೇವಲ ಆಂಗ್ಲಭಾಷೆಯಲ್ಲಿ ಅಧಿಸೂಚನೆ ಹೊರಡಿಸಿದ್ದನ್ನು ಗಮನಿಸಿದ ನ್ಯಾಯಪೀಠ, ಕನ್ನಡ ಭಾಷೆಯಲ್ಲೂ ಗೆಜೆಡ್ ಅಧಿಸೂಚನೆ ಪ್ರಕಟಿಸಿ ಅದರ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ ಬಿಬಿಎಂಪಿಯು ಕನ್ನಡ ಭಾಷೆಯಲ್ಲಿನ ಬೈಲಾ ಪ್ರತಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಬೇಕಿತ್ತು. ಬುಧವಾರ ಅರ್ಜಿ ಮತ್ತೆ ವಿಚಾರಣೆಗೆ ಬಂದಾಗ ಬಿಬಿಎಂಪಿ ಪರ ವಕೀಲರು, ಭಾಷಾಂತರಕಾರರ ಅಲಭ್ಯತೆಯಿಂದ ಕನ್ನಡದಲ್ಲಿನ ಬೈಲಾವನ್ನು ಗೆಜೆಟ್ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಕಳುಹಿಸಿಕೊಟ್ಟಿಲ್ಲ. ಅದಕ್ಕಾಗಿ ಕಾಲಾವಕಾಶ ನೀಡಬೇಕೆಂದು ಕೋರಿದರು. 

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರ ಪರ ವಕೀಲ ಜಿ.ಆರ್.ಮೋಹನ್, ಕೆಎಂಸಿ ಕಾಯ್ದೆಯ ಸೆಕ್ಷನ್ 428ರ ಪ್ರಕಾರ ಬೈಲಾ ಅನ್ನು ಅನುಮೋದಿಸಿ ಏಕಕಾಲದಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸಬೇಕಿದೆ. ಅದಕ್ಕಾಗಿ ಎರಡೂ ಭಾಷೆಯಲ್ಲಿನ ಬೈಲಾ ಪ್ರತಿಯನ್ನು ಬಿಬಿಎಂಪಿ ಸರ್ಕಾರಕ್ಕೆ ಕಳುಹಿಸಿಕೊಡಬೇಕಿತ್ತು. ಕನ್ನಡದಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸದ ಹೊರತು ಬೈಲಾ ಅನುಷ್ಠಾನಕ್ಕೆ ಬರುವುದಿಲ್ಲ ಎಂದು ದೂರಿದರು. 

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನ್ಯಾಯಾಲಯ ನಿರ್ದೇಶನಗಳನ್ನು ಪಾಲಿಸದ ಅಧಿಕಾರಿಗಳ ವಿರುದ್ಧ ನ್ಯಾಯಂಕ ನಿಂದನೆ ಪ್ರಕ್ರಿಯೆ ಜರುಗಿಸಲಾಗುವುದು, ಹೀಗಾಗಿ ತಪ್ಪಿತಸ್ಥ ಅಧಿಕಾರಿಗಳ ಹೆಸರಹು ತಿಳಿಸಿ ಬಿಬಿಎಂಪಿ ಪ್ರಮಾಣಪತ್ರ ಸಲ್ಲಿಸಬೇಕು. ಅದನ್ನು ಪರಿಗಣಿಸಿ ನ್ಯಾಯಾಲಯ ಆದೇಶ ಪಾಲಿಸಿದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವುದಕ್ಕೆ ವಿವರಣೆ ಕೇಳಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ಅ.15ಕ್ಕೆ ಮುಂದೂಡಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com