ಮಂಗಳೂರು ಮಾಲ್ ಘಟನೆ ಕುರಿತು ನಳಿನ್ ಕುಮಾರ್ ಕಟೀಲ್ ಟ್ವೀಟ್, ವಿವಾದ

'ಭಾರತ ಹಿಂದು ರಾಷ್ಟ್ರ' ಎಂಬ ಹೇಳಿಕೆಗೆ ಸಂಬಂಧಿಸಿದಂತೆ ವಿಮಾ ಕಂಪನಿಯ ಏಜೆಂಟ್ ಮೇಲೆ ದಾಳಿ ನಡೆಸಿದ ಘಟನೆ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಮಹಿಳೆಯರನ್ನು ಚುಡಾಯಿಸುವವರನ್ನು....
ಸಂಸದ ನಳಿನ್ ಕುಮಾರ್ ಕಟೀಲ್
ಸಂಸದ ನಳಿನ್ ಕುಮಾರ್ ಕಟೀಲ್

ಮಂಗಳೂರು: 'ಭಾರತ ಹಿಂದು ರಾಷ್ಟ್ರ' ಎಂಬ ಹೇಳಿಕೆಗೆ ಸಂಬಂಧಿಸಿದಂತೆ ವಿಮಾ ಕಂಪನಿಯ ಏಜೆಂಟ್ ಮೇಲೆ ದಾಳಿ ನಡೆಸಿದ ಘಟನೆ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಮಹಿಳೆಯರನ್ನು ಚುಡಾಯಿಸುವವರನ್ನು ಪ್ರಶ್ನಿಸುವವರ ಮೇಲೆ ಹಲ್ಲೆ ನಡೆಸುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಗುರುವಾರ ಟ್ವೀಟ್ ಮಾಡಿದ್ದಾರೆ. 

'ಭಾರತ ಹಿಂದು ರಾಷ್ಟ್ರ ಮತ್ತು ಮುಸ್ಲಿಮರು ಇಲ್ಲಿಗೆ ಬರಬಾರದು' ಎಂಬ ಹೇಳಿಕೆ ಏಜೆಂಟ್ ಮಂಜುನಾಥ್ ಮೇಲೆ ಹಲ್ಲೆ ನಡೆಸಲು ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ಕಟೀಲ್ ಅವರ ಟ್ವೀಟ್ ಓದಿದ ಬಳಿಕ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತರು, ಇದುವರೆಗೆ ನಡೆದ ತನಿಖೆಯಲ್ಲಿ, ಚುಡಾಯಿಸಿದ್ದಕ್ಕೆ ಹಲ್ಲೆ ನಡೆಸಿರುವ ಸಾಧ್ಯತೆ ಕಂಡುಬಂದಿಲ್ಲ ಎಂದಿದ್ದಾರೆ.

ಮಂಗಳೂರು ಮಾಲ್‌ ಒಂದರಲ್ಲಿ ಬುಧವಾರ ಈ ಘಟನೆ ನಡೆದಿದೆ. ವಿಮೆ ಏಜೆಂಟ್‌ ಎನ್ನಲಾದ ವ್ಯಕ್ತಿ 'ಭಾರತ ಹಿಂದು ರಾಷ್ಟ್ರ ಮತ್ತು ಮುಸ್ಲಿಮರು ಇಲ್ಲಿಗೆ ಬರಬಾರದು' ಎಂದು ಹೇಳಿದ್ದಾರೆ ಎಂದು ಆರೋಪಿಸಿದ ಯುವಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ.

ಬಂಟ್ವಾಳದ ಮಂಜುನಾಥ್‌ ಎಂಬವರು ಮಾಲ್‌ನಲ್ಲಿ ಇದ್ದ ಸಂದರ್ಭ ಯುವಕರ ಗುಂಪೊಂದು ಯುವತಿಯರನ್ನು ಚುಡಾಯಿಸುತ್ತಿದ್ದರು. ಇದನ್ನು ಮಂಜುನಾಥ ಪ್ರಶ್ನಿಸಿದ್ದಕ್ಕೆ, ನಮ್ಮನ್ನು ಪ್ರಶ್ನಿಸಲು ನೀನ್ಯಾರು ಎಂದು ವಿದ್ಯಾರ್ಥಿಗಳ ಗುಂಪು ವಾಗ್ವಾದಕ್ಕೆ ಇಳಿದಿದ್ದಾರೆ. ಆಗ ಮಂಜುನಾಥ ಇದು 'ಹಿಂದೂ ರಾಷ್ಟ್ರ' ಎಂದು ಹೇಳಿದ್ದಾರೆ. ಇದರಿಂದ ಇನ್ನಷ್ಟು ಕೆರಳಿದ ವಿದ್ಯಾರ್ಥಿಗಳು ಇನ್ನೊಮ್ಮೆ ಹೇಳುವಂತೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರಿಂದ ತಪ್ಪಿಸಿಕೊಂಡು ಮುಂದುವರಿದಾಗ ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ಪಾಂಡೇಶ್ವರ ಠಾಣೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಮೊಹಿಯುದ್ದೀನ್‌ ಸಫ್ವಾನ್‌, ಅಬ್ದುಲ್‌ ರಹೀಮ್‌ ಸಾದ್‌ ಹಾಗೂ ಇನ್ನೊಬ್ಬನನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com