ನೋಂದಣಿ ಇಲ್ಲದೆ ಕಾರು ಚಾಲನೆ: ಇಬ್ಬರ ಬಂಧನ

ನೋಂದಣಿ ಇಲ್ಲದೆ ರಸ್ತೆಯಲ್ಲಿ ಕಾರು ಚಾಲನೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಹೆಣ್ಣೂರು ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನೋಂದಣಿ ಇಲ್ಲದೆ ರಸ್ತೆಯಲ್ಲಿ ಕಾರು ಚಾಲನೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಹೆಣ್ಣೂರು ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ. 

ನೋಂದಣಿ ಇಲ್ಲದ ಕಾರುಗಳನ್ನು ನಗರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದ ಹಿನ್ನಲೆಯಲ್ಲಿ ಅಧಿಕಾರಿಗಳು ತಂಡಗಳನ್ನು ರಚನೆ ಮಾಡಿ, ರಸ್ತೆಯಲ್ಲಿ ನೋಂದಣಿ ಇಲ್ಲದೆ ಸಂಚಾರ ನಡೆಸುತ್ತಿದ್ದ ಕಾರುಗಳ ಮೇಲೆ ಗಮನ ಹರಿಸಿದ್ದರು. 

ಇದರಂತೆ ಮಾರಾಟ ಜಾಲದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಹೆಣ್ಣೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಮಣಿಕಾಂತ (28) ಅರುಣ್ (26) ಎಂದು ಗುರ್ತಿಸಲಾಗಿದೆ. 

ಇಬ್ಬರೂ ಆರೋಪಿಗಳು ಈವರೆಗೂ ಗ್ರಾಹಕರಿಗೆ ನೋಂದಾವಣಿ ಇಲ್ಲದ 10 ಕಾರುಗಳನ್ನು ಮಾರಾಟ ಮಾಡಿದ್ದಾರೆಂದು ವರದಿಗಳು ತಿಳಿಸಿವೆ. ಹೆಣ್ಣೂರು ಕ್ರಾಸ್ ಬಳಿಯಿರುವ ಕ್ರೈಸ್ ಆಸ್ಪತ್ರೆಯ ಬಳಿ ನೋಂದಣಿ ಇಲ್ಲದ ಮಾರುತಿ ಸ್ವಿಫ್ಟ್ ಕಾರು ನಿಂತಿರುವ ವಿಚಾರ ತಿಳಿದುಬರುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ಪೊಲೀಸರು ಮಣಿಕಾಂತ್ ಹಾಗೂ ಅರುಣ್ ಅವರನ್ನು ಸ್ಥಳದಲ್ಲಿಯೇ ಬಂಧನಕ್ಕೊಳಪಡಿಸಿದ್ದಾರೆ. 

ಆರೋಪಿ ಮಣಿಕಾಂತ ಕಾರ್ ಶೋರೂಂ ಹಾಗೂ ಇನ್ಶುರೆನ್ಸ್ ಕನ್ಸಲ್ಟೆನ್ಸಿ ನಡೆಸುತ್ತಿದ್ದ. ಇದಕ್ಕೂ ಮುನ್ನ ಇಬ್ಬರೂ ಆರೋಪಿಗಳು ಶೋರೂಮ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಕಾರನ್ನು ಕೊಳ್ಳುವುದು ಹಾಗೂ ಅದನ್ನು ಮಾರಾಟ ಮಾಡುವುದು ಹೇಗೆ ಎಂಬುದನ್ನು ಇಬ್ಬರೂ ತಿಳಿದುಕೊಂಡಿದ್ದರು. ಹಣ ಮಾಡುವ ಉದ್ದೇಶದಿಂದ ಮಣಿಕಾಂತ ನೋಂದಣಿ ಇಲ್ಲದ ಕಾರುಗಳನ್ನು ಮಾರಾಟ ಮಾಡಲು ಮುಂದಾಗಿದ್ದ. 

ಮೂರು ದಿನಗಳಲ್ಲಿ ನೋಂದಣಿ ಇಲ್ಲದ 10 ಕಾರುಗಳನ್ನು ಕಂಡು ಹಿಡಿದಿದ್ದೇವೆ. ಆರೋಪಿಗಳ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ ಎಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com