ಅನುದಾನ ಕಡಿತಕ್ಕೆ ಆಕ್ರೋಶ: ಸರ್ಕಾರದ ವಿರುದ್ಧ ಕೈ ಪ್ರತಿಭಟನೆ

ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಕಡಿತ ಹಾಗೂ ಬಿಬಿಎಂಪಿ ವಾರ್ಡ್'ಗಳಿಗೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ನೀತಿ ಅನುಸರಿಸಿರುವ ಬಿಜೆಪಿ ಸರ್ಕಾರದ ಧೋರಣೆ ವಿರುದ್ಧ ನಗರದ ಪುರಭವನ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ತೀವ್ರವಾಗಿ ಪ್ರತಿಭಟನೆ ನಡೆಸಿದರು.
ಅನುದಾನ ಕಡಿತಕ್ಕೆ ಆಕ್ರೋಶ: ಸರ್ಕಾರದ ವಿರುದ್ಧ ಕೈ ಪ್ರತಿಭಟನೆ
ಅನುದಾನ ಕಡಿತಕ್ಕೆ ಆಕ್ರೋಶ: ಸರ್ಕಾರದ ವಿರುದ್ಧ ಕೈ ಪ್ರತಿಭಟನೆ

ಬೆಂಗಳೂರು: ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಕಡಿತ ಹಾಗೂ ಬಿಬಿಎಂಪಿ ವಾರ್ಡ್'ಗಳಿಗೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ನೀತಿ ಅನುಸರಿಸಿರುವ ಬಿಜೆಪಿ ಸರ್ಕಾರದ ಧೋರಣೆ ವಿರುದ್ಧ ನಗರದ ಪುರಭವನ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ತೀವ್ರವಾಗಿ ಪ್ರತಿಭಟನೆ ನಡೆಸಿದರು. 

ಕಾಂಗ್ರೆಸ್ ಹಿರಿಯ ಮುಖಂಡ, ಶಾಸಕ ರಾಮಲಿಂಗಾರೆಡ್ಡಿ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಶಾಸಕಿ ಸೌಮ್ಯಾ ರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಿಸಿದ್ದ ಕಾಂಗ್ರೆಸ್ ಶಾಸಕರು, ಪಾಲಿಕೆ ಸದಸ್ಯರು ಹಾಗೂ ಕಾರ್ಯಕರ್ತರು, ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಎಸಗುತ್ತಿದೆ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ಪ್ರತಿಭಟನೆ ವೇಳೆ ಮಾತನಾಡಿರುವ ರಾಮಲಿಂಗಾ ರೆಡ್ಡಿಯವರು, ಕಾಂಗ್ರೆಸ್ 17 ಶಾಸಕರ ಕ್ಷೇತ್ರಗಳಿಗೆ ರೂ.3752 ಕೋಟಿ ಮಂಜೂರಾಗಿತ್ತು. ಈಗ 13 ಮಂದಿ ಶಾಸಕರಿಗೆ ಕೇವಲ ರೂ.943 ಕೋಟಿ ನಿಗದಿಯಾಗಿತ್ತು, ಸುಮಾರು ರೂ.2,800 ಕೋಟಿ ಕಡಿತಗೊಳಿಸಲಾಗಿದೆ. ಈ ಹಿಂದೆ ಕಾಂಗ್ರೆಸ್ ಸರಕ್ರಾ ಇದ್ದಾಗ ಬಿಜೆಪಿಯ 10 ಶಾಸಕರ ಕ್ಷೇತ್ರಗಳಿಗೆ ರೂ.1671 ಕೋಟಿ ನೀಡಲಾಗಿತ್ತು. ಈಗ ಅವರ ಕ್ಷೇತ್ರಗಳಿಗಾಗಿ ರೂ.3499 ಕೋಟಿ ಮಂಜೂರಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಶಾಸಕರ 5 ಕ್ಷೇತ್ರಗಳಿಗೆ ರೂ.2778 ಕೋಟಿ ನೀಡಿದ್ದಾರೆ. ಜೆಡಿಎಸ್ ಶಾಸಕರಿಗೆ ರೂ.528 ಕೋಟಿಯಲ್ಲಿ ರೂ.52 ಕೋಟಿ ಮಾತ್ರ ನೀಡಲಾಗಿದೆ. ಈ ರೀತಿ ಮಾಡುವ ಮೂಲಕ ನಮ್ಮ ಕ್ಷೇತ್ರಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಪದೇ ಪದೇ ದೆಹಲಿಗೆ ಹೋಗಲು ಮುಖ್ಯಮಂತ್ರಿಗಳಿಗೆ ಹಣವಿದೆ. ಇತರೆ ದೇಶಗಳಿಗೆ ಪ್ರವಾಸಕ್ಕೆ ತೆರಳಲು ಪ್ರಧಾನಮಂತ್ರಿಗಳ ಬಳಿ ಹಣವಿದೆ. ಈ ಹಣವನ್ನು ಬೆಂಗಳೂರು ನಗರ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಬಹುದು. ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದ ಆಯ್ಕೆಯಾದವರು. ಆದರೂ ನಗರಕ್ಕಾಗಲೀ ಅಥವಾ ರಾಜ್ಯಕ್ಕಾಗಲಿ ಅವರು ಏನನ್ನೂ ಮಾಡಿಲ್ಲ ಎಂದು ತಿಳಿಸಿದ್ದಾರೆ. 

ಇದೇ ವೇಳೆ ಮಾತನಾಡಿರುವ ಸೌಮ್ಯಾ ರೆಡ್ಡಿಯವರು, ನಗರ ಅಭಿವೃದ್ಧಿ ವಿಚಾರ ಬಂದಾಗ ಮುಖ್ಯಮಂತ್ರಿಗಳು ರಾಜಕೀಯ ಮಾಡುತ್ತಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಸಿಎಂ ನಗರ ಪ್ರದಕ್ಷಿಣೆ ಮಾಡಿದ್ದರು. ನಿಯಮಗಳ ಪ್ರಕಾರ ನಗರ ಪ್ರದಕ್ಷಿಣೆ ವೇಳೆ ಮುಖ್ಯಮಂತ್ರಿಗಳೊಂದಿಗೆ ಆಯಾ ಕ್ಷೇತ್ರದ ಶಾಸಕರು ಅವರೊಂದಿಗಿರಬೇಕು. ಆದರೆ, ಈ ಬಗ್ಗೆ ಎಷ್ಟೋ ಕಾಂಗ್ರೆಸ್ ನಾಯಕರಿಗೆ ಮಾಹಿತಿಯೇ ಇಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ನಾನು ಈ ಮಾಹಿತಿ ತಿಳಿದುಕೊಂಡೆ. ವೈಟ್ ಟಾಪಿಂಗ್ ರಸ್ತೆಗಳು ನಮಗೆ ಬೇಡ. ಸಾಮಾನ್ಯ ರಸ್ತೆಗಳು ಬೇಕು. ರಸ್ತೆಗಳ ದುರಸ್ತಿ ಕಾರ್ಯಕ್ಕೆ ನಮಗೆ ಹಣ ಬೇಕು ಎಂದು ಹೇಳಿದ್ದಾರೆ. 
 
ವೈಟ್ ಟಾಪಿಂಗ್ ನಲ್ಲಿ ಭಾರೀ ಹಗಣವಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಈ ಯೋಜನೆಯನ್ನು ತಂದಿದ್ದೇ ಬಿಜೆಪಿ ಸರ್ಕಾರ ಎಂಬುದನ್ನು ಅವರು ಮರೆತಂದಿದ್ದಾರೆ. ಅನುದಾನ ಬಿಡುಗಡೆ ಕುರಿತು ಸರ್ಕಾರ ಅನುಸರಿಸುತ್ತಿರುವ ತಾರತಮ್ಯದ ವಿರುದ್ಧ ಶೀಘ್ರದಲ್ಲಿಯೇ ವಿಧಾನಸೌಧದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರಾಮಲಿಂಗಾ ರೆಡ್ಡಿಯವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com