ಹ್ಯಾಂಡ್ ಬ್ರೇಕ್ ಹಾಕದ ಚಾಲಕ: ನಿಂತಿದ್ದ ಶಾಲಾ ಬಸ್ ಚಲಿಸಿ 3 ವಿದ್ಯಾರ್ಥಿಗಳಿಗೆ ಗಾಯ

ಶಾಲೆ ಮುಂದೆ ನಿಲ್ಲಿಸಲಾಗಿದ್ದ ಬಸ್ ದಿಢೀರನೇ ಮುಂದೆ ಚಲಿಸಿದ ಪರಿಣಾಮ ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬನಶಂಕರಿ 3ನೇ ಹಂತದ ಶ್ರೀನಿವಾಸ ನಗರದಲ್ಲಿ ಶುಕ್ರವಾರ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹ್ಯಾಂಡ್ ಬ್ರೇಕ್ ಹಾಕದ ಕಾರಣ ಏಕಾಏಕಿ ಮುಂದಕ್ಕೆ ಸಾಗಿದ ಬಸ್: ವಿದ್ಯಾರ್ಥಿಗಳಿಗೆ ಡಿಕ್ಕಿ

ಬೆಂಗಳೂರು: ಶಾಲೆ ಮುಂದೆ ನಿಲ್ಲಿಸಲಾಗಿದ್ದ ಬಸ್ ದಿಢೀರನೇ ಮುಂದೆ ಚಲಿಸಿದ ಪರಿಣಾಮ ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬನಶಂಕರಿ 3ನೇ ಹಂತದ ಶ್ರೀನಿವಾಸ ನಗರದಲ್ಲಿ ಶುಕ್ರವಾರ ನಡೆದಿದೆ. 

ಸೀತಾ ಸರ್ಕಲ್ ಹತ್ತಿರದ ಲಿಟಲ್ ಏಂಜಲ್ಸ್ ಶಾಲೆಯ 7 ವರ್ಷದ ಇಬ್ಬರು ಗಂಡು ಮಕ್ಕಳು ಹಾಗೂ 8 ವರ್ಷದ ವಿದ್ಯಾರ್ಥಿನಿ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

ಪ್ರಸ್ತುತ್ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಬ್ಬ ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಲಿಟಲ್ ಏಂಜೆಲ್ಸ್ ಶಾಲೆಯ ಚಾಲಕ, ಶಾಲೆಯ ವಾಹನದಲ್ಲಿ ಮಕ್ಕಳನ್ನು ಕರೆತಂದು ಬಿಟ್ಟು ನಂತರ ಬೆಳಿಗ್ಗೆ 8.30ರಲ್ಲಿ ಶಾಲೆ ಮುಂದೆ ವಾಹನ ನಿಲ್ಲಿಸಿದ್ದಾನೆ. ಆದರೆ, ವಾಹನಕ್ಕೆ ಹ್ಯಾಂಡ್ ಬ್ರೇಕ್ ಹಾಕದೆ ಚಾಲಕ ಬಸ್ಸಿನಿಂದ ಇಳಿದಿದ್ದಾರೆ. ಇಳಿಜಾರು ಪ್ರದೇಶವಾಗಿದ್ದರಿಂದ ಬಸ್ ಏಕಾಏಕಿ ಮುಂದಕ್ಕೆ ಸಾಗಿದೆ. ಅದೇ ವೇಳೆ ಪೋಷಕರ ಜೊತೆ ಶಾಲೆ ಮುಂದೆ ಬಂಧಿಳಿದು ಒಳ ಹೋಗುತ್ತಿದ್ದ ಮಕ್ಕಳಿಗೆ ಬಸ್ ಡಿಕ್ಕಿ ಹೊಡೆದಿದೆ. 

ಕೂಡಲೇ ಕೆಳಗೆ ಬಿದ್ದ ಮಕ್ಕಳನ್ನು ಶಾಲಾ ಸಿಬ್ಬಂದಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯಕೀಯ ಚಿಕಿತ್ಸೆಗೆ ಮಕ್ಕಳು ಸ್ಪಂದಿಸುತ್ತಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಪ್ರಕರಣ ಸಂಬಂಧ ನಿರ್ಲಕ್ಷ್ಯತನ ತೋರಿದ ಆರೋಪದ ಮೇರೆಗೆ ಶಾಲಾ ವಾಹನ ಚಾಲಕ ಆನಂದ ಹಾಗೂ ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಬನಶಂಕರಿ ಸಂಚಾರ ಠಾಣೆಯಲ್ಲಿ ಗಾಯಾಳು ವಿದ್ಯಾರ್ಥಿಗಳ ಪೋಷಕರು ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com