ಬಸವಣ್ಣನ ಕಾಲದಲ್ಲಿ ಸಮಾಜ ಬದಲಾವಣೆಗೆ ಪಕ್ವವಾಗಿರಲಿಲ್ಲ. ಆದರೆ...ಈಗ: ಎಸ್ ಎಲ್ ಭೈರಪ್ಪ

ಬಸವಣ್ಣನ ಕಾಲದಲ್ಲಿ ಸಮಾಜ ಬದಲಾವಣೆಗೆ ಪಕ್ವವಾಗಿರಲಿಲ್ಲ. ಈಗ ಶಿಕ್ಷಣ ಸಮಾಜದಲ್ಲಿ ಆ ಪಕ್ವತೆಯನ್ನು ತಂದಿದೆ ಎಂದು ಸಾಹಿತಿ ಎಸ್ ಎಲ್ ಭೈರಪ್ಪ ಹೇಳಿದ್ದಾರೆ.
ಮೈಸೂರು ದಸರಾ ಉದ್ಙಾಟನೆ-ಎಸ್ಎಲ್ ಬೈರಪ್ಪ
ಮೈಸೂರು ದಸರಾ ಉದ್ಙಾಟನೆ-ಎಸ್ಎಲ್ ಬೈರಪ್ಪ

ಸಮಾಜ ಉದ್ಧಾರ ಮಾಡುವುದಕ್ಕೆ ಅಂತ ಮದುವೆಯಾಗುವುದಿಲ್ಲ: ದಸರಾ ಉದ್ಙಾಟನೆ ಬಳಿಕ ಹೇಳಿಕೆ

ಮೈಸೂರು: ಬಸವಣ್ಣನ ಕಾಲದಲ್ಲಿ ಸಮಾಜ ಬದಲಾವಣೆಗೆ ಪಕ್ವವಾಗಿರಲಿಲ್ಲ. ಈಗ ಶಿಕ್ಷಣ ಸಮಾಜದಲ್ಲಿ ಆ ಪಕ್ವತೆಯನ್ನು ತಂದಿದೆ ಎಂದು ಸಾಹಿತಿ ಎಸ್ ಎಲ್ ಭೈರಪ್ಪ ಹೇಳಿದ್ದಾರೆ.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಎಸ್ ಎಲ್ ಬೈರಪ್ಪ ಅವರು, 'ಜಾತಿವಿನಾಶಕ್ಕೆ ಬಸವಣ್ಣ ಪ್ರಾಮಾಣಿಕವಾಗಿ ಪ್ರಯತ್ನಪಟ್ಟರು. ಜಾತಿಯನ್ನು ನಾಶ ಮಾಡಬೇಕಾದರೆ ಅಂತರಜಾತಿ ವಿವಾಹ ಆಗಬೇಕು ಅನ್ನುವ ಬಸವಣ್ಣನ ಪ್ರಯತ್ನ ಶ್ಲಾಘನೀಯ. ಆದರೆ ಆಗಿನ ಕಾಲದ ಜನರು ಅದನ್ನು ಒಪ್ಪಲಿಲ್ಲ. ಕಾರಣ ಅದು ಕೃಷಿ ಪ್ರಧಾನ ಆರ್ಥಿಕ ವ್ಯವಸ್ಥೆ ಆಗಿತ್ತು. ಆಗಿನ ಸಮಾಜ ಬದಲಾವಣೆ ಒಪ್ಪುತ್ತಿರಲಿಲ್ಲ. ಬಸವಣ್ಣನ ಕಾಲದಲ್ಲಿ ಸಮಾಜ ಬದಲಾವಣೆಗೆ ಪಕ್ವವಾಗಿರಲಿಲ್ಲ. ಆದರೆ ಇವತ್ತು ಗಂಡು ಅಥವಾ ಹೆಣ್ಣಿಗೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿದೆ. ಈಗ ಹುಡುಗಿ ಮತ್ತು ಹುಡುಗ ಇಬ್ಬರೂ ಓದಿರುತ್ತಾರೆ. ಎಲ್ಲೋ ಕೆಲಸ ಮಾಡುತ್ತಿರುತ್ತಾರೆ. ಪರಸ್ಪರ ಒಪ್ಪಿಗೆಯಿಂದ ಮದುವೆ ಮಾಡಿಕೊಳ್ತಾ ಇದ್ದಾರೆ. ಈ ಸ್ಥಿತಿಗೆ ಕಾರಣವಾಗಿದ್ದು ಆರ್ಥಿಕ ಸ್ವಾತಂತ್ರ್ಯ. ಜಾತಿ ಮೀರಿ ಮದುವೆಯಾಗುವುದು ಈಗ ನಡೆಯುತ್ತಿದೆ ಇದೆ ಎಂದು ಅವರು ಹೇಳಿದರು.

ಸಮಾಜ ಉದ್ಧಾರಕ್ಕೆ ಯಾರೂ ಮದುವೆಯಾಗುವುದಿಲ್ಲ ಎಂದು ಹೇಳಿದ ಬೈರಪ್ಪ, 'ಯಾರೂ ಸಮಾಜ ಉದ್ಧಾರ ಮಾಡುವುದಕ್ಕೆ ಅಂತ ಮದುವೆಯಾಗುವುದಿಲ್ಲ. ನಮಗೆ ಹೊಂದುತ್ತಾರಾ ಎಂಬುದನ್ನಷ್ಟೇ ಹುಡುಗ–ಹುಡುಗಿ ಯೋಚನೆ ಮಾಡುತ್ತಾರೆ. ಅದು ಹಾಗೆಯೇ ಆಗಬೇಕು. ಅಡುಗೆಮನೆ ಕಟ್ಟಿಸುವುದರಿಂದ ಹಿಡಿದು ಎಲ್ಲವೂ ಜಾತಿಯನ್ನು ಆಧರಿಸಿದೆ. ಇದನ್ನೂ ನಾವು ಯೋಚಿಸಬೇಕು. ಬಸವಣ್ಣನ ಹೆಸರು ಹೇಳುವವರು ಈ ಸಾಮಾಜಿಕ ಬದಲಾವಣೆ ಗಮನಿಸಬೇಕು. ಎಷ್ಟರಮಟ್ಟಿಗೆ ಸಮಾಜ ಬದಲಾವಣೆ ಆಗಿದೆ ಅಂತ ಗಮನವಿಟ್ಟು ನೋಡಬೇಕು. ಇಂಥ ವಿಷಯಗಳ ಬಗ್ಗೆ ಏನು ಆಲೋಚಿಸಬೇಕು ಅಂತ ನಮ್ಮ ಸಾಹಿತಿಗಳು ನೋಡಬೇಕು ಎಂದು ಹೇಳಿದರು.

ಬಸವಣ್ಣ ನಿಜವಾದ ಸಮಾಜ ಸುಧಾರಕ
ಪ್ರತಿಯೊಬ್ಬರಲ್ಲಿಯೂ ಇಷ್ಟ ದೇವತೆ ಅಂತ ಇದೆ. ಬಸವಣ್ಣನವರು ಅದನ್ನು ಒಪ್ಪಿಕೊಂಡರು. ಬಸವಣ್ಣ ನಿಜವಾದ ಸಮಾಜ ಸುಧಾರಕರು. ಕಾಯಕದ ಪಾವಿತ್ರ್ಯ, ಜಾತಿ ವಿನಾಶವನ್ನು ಬಸವಣ್ಣ ಪ್ರತಿಪಾದಿಸಿದರು. ಪ್ರತಿಯೊಬ್ಬರು ಕಾಯಕ ಮಾಡಬೇಕು, ಕೆಲಸ ಮಾಡದೆ ಊಟ ಮಾಡಬಾರದು ಅಂತ ಹೇಳಿದರು. ಇವತ್ತು ಪಶ್ಚಿಮ ದೇಶಗಳಲ್ಲಿ ಕಾಯಕನಿಷ್ಠೆ ಇದೆ. ನಮ್ಮ ದೇಶದಲ್ಲಿ ಹಾಳಾಗಿ ಹೋಗಿದೆ. ಕಾಯಕನಿಷ್ಠೆ ಹಾಳುಮಾಡಿದ್ದು ರಾಜಕಾರಣಿಗಳು. ಬಿಸಿಲು ಹತ್ತುವುದಕ್ಕೆ ಮೊದಲು ಎತ್ತು ಕಟ್ಟಬೇಕು. ಹವಾ ತಂಪಾಗಿರುವಾಗ ಸಾಕಷ್ಟು ಹೊಲದ ಕೆಲಸ ಆಗಬೇಕು. ಬಿಸಿಲು ಇಳಿದ ನಂತರ ಮತ್ತೆ ಕೆಲಸ ಮಾಡುತ್ತಾರೆ. ರಾಜಕಾರಿಣಿಗಳು ಅವರನ್ನು ದಾರಿ ತಪ್ಪಿಸುತ್ತಾರೆ. ನೀನು 10 ಗಂಟೆಗೆ ಹೋಗು ಅಂತ ಹಚ್ಚಿಕೊಡ್ತಾರೆ. ಬಿಸಿಲಿನಲ್ಲಿ ಹೊಲದ ಕೆಲಸ ಮಾಡಲು ಆಗುತ್ತದೆಯೇ? ಕಾಯಕನಿಷ್ಠೆ ಅನ್ನೋದು ಒಂದು ಥರದಲ್ಲಿ ಇತ್ತು. ಅದನ್ನು ಹಾಳು ಮಾಡಿದ್ದು ರಾಜಕಾರಿಣಿಗಳು ಎಂದು ಭೈರಪ್ಪ ದೂರಿದರು.

ಶಬರಿಮಲೆಗೆ ಮಹಿಳೆಯರನ್ನ ನುಗ್ಗಿಸುವ ಪ್ರಸಂಗ ಪ್ರಗತಿಪರರಿಗೆ ಏಕೆ ಬೇಕಿತ್ತು
ಇದೇ ವೇಳೆ ಶಬರಿಮಲೆ ವಿಚಾರವಾಗಿ ಮಾತನಾಡಿದ ಬೈರಪ್ಪ ಅವರು, ಕೆಲ ಪ್ರಗತಿಪರರು, ಕಮ್ಯೂನಿಸ್ಟ್​ಗಳು ಅದ್ಯಾರೋ ನಾಲ್ಕು ಮಹಿಳೆಯರನ್ನು‌ ಕರೆದುಕೊಂಡು ಹೋಗಿ‌ ಶಬರಿಮಲೆ ದೇವಾಲಯಕ್ಕೆ ನುಗ್ಗಿಸುತ್ತಾರೆ. ಶಬರಿ ಮಲೆಗೆ10 ವರ್ಷದೊಳಗಿನ ಹಾಗೂ 54 ವರ್ಷದ ಮೇಲಿನ‌ ಮಹಿಳೆಯರು ಹೋಗಬೇಕು ಅನ್ನುವ ಪದ್ಧತಿ ಮಾಡ್ಕೊಂಡಿದ್ರು. ಆದ್ರೆ ಕೆಲವರು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಹಾಕಿ ಈಗ ಸಮಾನತೆಯ ಆಧಾರದ ಮೇಲೆ ಎಲ್ಲರಿಗೂ ಅವಕಾಶ ಕೊಡಲಾಗಿದೆ. ಕೆಲ ಪ್ರಗತಿಪರರು, ಕಮ್ಯೂನಿಸ್ಟ್​ಗಳು ಅದ್ಯಾರೋ ನಾಲ್ಕು ಮಹಿಳೆಯರನ್ನು‌ ಕರೆದುಕೊಂಡು ಹೋಗಿ‌ ಶಬರಿಮಲೆ ದೇವಾಲಯಕ್ಕೆ ನುಗ್ಗಿಸುತ್ತಾರೆ. ಆದ್ರಲ್ಲಿ ಓರ್ವ ಮುಸ್ಲಿಂ ಮಹಿಳೆ ಇದ್ದರು. ಆ ಮಹಿಳೆಗೆ ಮುಸ್ಲಿಮರು ಏಕೆ ನೀನು ದೇವಸ್ಥಾನಕ್ಕೆ ಹೋದೆ ಅಂತ ಬಹಿಷ್ಕಾರ ಮಾಡ್ತಾರೆ. ಕೆಲ ಪ್ರಗತಿಪರರಿಗೆ ಇದೆಲ್ಲಾ ‌ಏಕೆ ಬೇಕಿತ್ತು? ಎಂದು ಭೈರಪ್ಪ ಪ್ರಶ್ನಿಸಿದ್ದಾರೆ.

ದೇಶದಲ್ಲಿ ಹೆಣ್ಣಿಗೆ ಬೆಲೆ ಇದೆ
ಪ್ರಕೃತಿಯನ್ನು ಸಾಧಾರಣವಾಗಿ ಹೆಣ್ಣು ಅಂತ ಹೇಳುತ್ತಾರೆ. ದೇವರು, ದೇವತೆ ಅಂತ ಹೇಳುವಾಗ ಹೆಣ್ಣು ದೇವತೆಗಳು ಪ್ರಧಾನವಾಗಿರುತ್ತವೆ. ಹೀಗಾಗಿಯೇ ಊರುಗಳಲ್ಲಿ ಹೆಣ್ಣು ಅಥವಾ ಗಂಡು ಕೇಳಲು ಹೋಗುವಾಗ ಅಲ್ಲಿನ ಗ್ರಾಮ ದೇವತೆಗೆ ಪೂಜೆ ಮಾಡಿ ನಂತರ ಕೇಳುತ್ತೇವೆ. ಮೊದಲು ಮಾತೃದೇವೋಭವ ಅನ್ನುವ ರೂಢಿ ಇದೆ. ಹಿರಿಯ ದಂಪತಿಗಳಿದ್ದಾಗಲೂ ಮೊದಲು ಹೆಣ್ಣಿಗೆ ನಮಸ್ಕರಿಸುವುದು ರೂಢಿ. ಈ ದೇಶದಲ್ಲಿ ಹೆಣ್ಣಿಗೆ ಬೆಲೆಯಿಲ್ಲ ಅಂತ ಹೇಳುತ್ತಾರೆ. ಅದಕ್ಕೆ ಮಧ್ಯಕಾಲದಲ್ಲಿ ಆದ ಬೆಳವಣಿಗೆಗಳು ಕಾರಣ. ನಮ್ಮಲ್ಲಿ ಕೆಲ ತಪ್ಪು ಗ್ರಹಿಕೆಗಳಿವೆ. ಇದಕ್ಕೆ ಅಯ್ಯಪ್ಪ ದೇವಸ್ಥಾನಕ್ಕೆ ನಿರ್ದಿಷ್ಟ ವಯೋಮಾನದ ಮಹಿಳೆಯರಿಗೆ ಪ್ರವೇಶ ನಿರಾಕರಣೆ ಒಂದು ಉದಾಹರಣೆ. ಮುಟ್ಟಾದ ಮಹಿಳೆಯರಿಗೆ ಪ್ರವೇಶ ಇಲ್ಲ ಎನ್ನುವುದು ಅಲ್ಲಿನ ಸಂಪ್ರದಾಯ. ಮಹಿಳಾ ಜಡ್ಜ್‌ ‘ಈ ವಿಚಾರದಲ್ಲಿ ನಾವು ತೀರ್ಪು ಕೊಡಲು ಆಗಲ್ಲ ಎಂದಿದ್ದರು’. ಆದರೆ ಅದು ಅಲ್ಪ ಬೆಂಬಲದ ತೀರ್ಪು ಎಂದು ಭೈರಪ್ಪ ಪ್ರಶ್ನಿಸಿದರು.

ನಾನು ದೇವರನ್ನು ನಂಬುತ್ತೇನೆ
ಸಾಹಿತಿಗಳು ದೇವರನ್ನು ನಂಬಬಾರದು ಎನ್ನುವ ಭಾವನೆ ಜನರಲ್ಲಿದೆ. ಆದರೆ ಆ ಅಭಿಪ್ರಾಯದ ಪ್ರಕಾರ ನಾನು ಸಾಹಿತಿ ಅಲ್ಲ. ನಾನು ದೇವರನ್ನು ನಂಬುತ್ತೇನೆ. ನನ್ನ ಮೊಮ್ಮಕ್ಕಳನ್ನು ಬೆಟ್ಟಕ್ಕೆ ಕರೆದುಕೊಂಡು ಬಂದು ದೇಗುಲದ ಹೊಸಿಲ ಮೇಲೆ ಮಲಗಿಸಿ ತೀರ್ಥ ಹಾಕಿಸಿಕೊಂಡು ಹೋಗಿದ್ದೇನೆ. ಮಹಾಸ್ಫೋಟದಿಂದ ಜಗತ್ತು ಸೃಷ್ಟಿಯಾಗಿದೆ. ಆ ಮಹಾಸ್ಫೋಟದಲ್ಲಿ ಕಾಲದೇಶ ಯಾವುದೂ ಇರಲಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ಕಾರಣ ಮತ್ತು ಕಾರ್ಯದ ಸಿದ್ಧಾಂತ ನಿಮಗೆ ಗೊತ್ತಿರಬಹುದು. ಮಹಾಸ್ಫೋಟದ ಸ್ಥಿತಿಯಲ್ಲಿ ಕಾಲವೂ ಇಲ್ಲ. ಅಲ್ಲಿಗೆ ವಿಜ್ಞಾನ ನಿಂತು ಹೋಗುತ್ತದೆ. ಅದನ್ನೇ ನಮ್ಮ ವೇದಗಳು ‘ಅದು ಮನಸ್ಸಿಗೆ ಎಟುಕಲ್ಲ’ ಅಂತ ಹೇಳುತ್ತವೆ. ವಿಜ್ಞಾನಿಗಳು ಕೆಲ ವಿಚಾರಗಳಲ್ಲಿ ನಮ್ಮ ವಿಜ್ಞಾನ ಅಲ್ಲಿಗೆ ನಿಂತು ಹೋಗುತ್ತದೆ ಅಂತ ಹೇಳ್ತಾರೆ. ನಮ್ಮಲ್ಲಿ ದೇವರು ಅನ್ನುವ ಭಾವನೆಯೇ ಬಹಳ ಮುಖ್ಯ. ದೇವರನ್ನು ಸಾಕಾರ ರೂಪದಲ್ಲಿ, ನಿರಾಕಾರ ರೂಪದಲ್ಲಿ, ಹೆಣ್ಣು ಅಂತ, ಗಂಡು ಅಂತ, ಅದಕ್ಕಿಂತಲೂ ಮೀರಿದ್ದು ಅಂತಲೂ ನೋಡ್ತಾರೆ. ‘ಅದು’ ಅಂತ ನ್ಯೂಟ್ರಲ್ ಜಂಡರ್‌ನಲ್ಲಿಯೂ ನೋಡುವುದು ಬಂದಿದೆ ಎಂದು ಭೈರಪ್ಪ ಹೇಳಿದರು.

ದೇವತೆಗಳ ಪ್ರಾರ್ಥನೆಯಂತೆ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹಾರ ಮಾಡಿದಳು. ಒಂದು ವೇಳೆ ಗಂಡಸರು ಈಗ ಲಿಂಗ ತಾರತಮ್ಯ ಅಂತ ಕೋರ್ಟ್‌ಗೆ ಹೋದರೆ ಹೇಗೆ? ಶೈವ ಮತ್ತು ವೈಷ್ಣವ ಪರಂಪರೆಯಲ್ಲಿ ಮಹಿಳೆಯರಿಗೆ ಪ್ರಾಮುಖ್ಯತೆ ಇದೆ ಎಂದು ಅವರು ಪ್ರತಿಪಾದಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com