ಸಂದರ್ಶನ: ಪಕ್ಷ ಉಳಿಸಲು ಸಿದ್ದು, ಗುಂಡೂರಾವ್ ಕಾರ್ಯಶೈಲಿ ಸರಿಪಡಿಸಿಕೊಳ್ಳಲಿ; ಮಾಜಿ ಸಚಿವ ಮುನಿಯಪ್ಪ

ರಾಜ್ಯ ಕಾಂಗ್ರೆಸ್ ಹಿರಿಯ ನಾಯಕರು ಪಕ್ಷದ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರಲ್ಲಿ ವಿಫಲರಾಗಿರುವ ಹಿನ್ನಲೆಯಲ್ಲಿ ಕೇಂದ್ರ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ಅವರು ತೀವ್ರವಾಗಿ ಕಿಡಿಕಾರಿದ್ದಾರೆ. 
ಮುನಿಯಪ್ಪ
ಮುನಿಯಪ್ಪ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಹಿರಿಯ ನಾಯಕರು ಪಕ್ಷದ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರಲ್ಲಿ ವಿಫಲರಾಗಿರುವ ಹಿನ್ನಲೆಯಲ್ಲಿ ಕೇಂದ್ರ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ಅವರು ತೀವ್ರವಾಗಿ ಕಿಡಿಕಾರಿದ್ದಾರೆ. 

ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಪಕ್ಷ ಮತ್ತೊಂದು ಸೋಲು ಕಾಣದಿರುವಂತೆ ಮಾಡಲು ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರು ತಮ್ಮ ಕಾರ್ಯಶೈಲಿಯನ್ನು ಬದಲಿಸಬೇಕೆಂದು ಹೇಳಿದ್ದಾರೆ. ಅಲ್ಲದೆ, ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದ್ದವರಿಗೆ ಇಂದು ಸಿದ್ದರಾಮಯ್ಯ ಬೆಂಬಲ ನೀಡುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. 

ಕಾಂಗ್ರೆಸ್ ಪಕ್ಷದ ಪ್ರಸ್ತುತ ಪರಿಸ್ಥಿತಿ ಬಗ್ಗೆ ನಿಮ್ಮ ಅಭಿಪ್ರಾಯ? 
ಇತ್ತೀಚಿನ ದಿನಗಳಲ್ಲಿ ಪಕ್ಷ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪಕ್ಷವನ್ನು ಕಟ್ಟಲು ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಒಗ್ಗಟ್ಟಿನಿಂದ ಕೆಲಸ ಮಾಡಿದರೆ, ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಪ್ರತೀಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆದರೆ, ಅದು ಆಗುತ್ತಿಲ್ಲ. ಚುನಾವಣಾ ಸಮಿತಿ ಸಭೆಯಲ್ಲಿ ಪರಮೇಶ್ವರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಯಾವ ಕಾರಣಕ್ಕೆ ಭಾಗಿಯಾಗಲಿಲ್ಲ ಎಂಬುದು ನನಗೂ ಗೊತ್ತಿಲ್ಲ. 
 
ಪಕ್ಷದ ಬಗ್ಗೆ ನಿಮ್ಮ ಹಿತಾಸಕ್ತಿ?
2019ರ ಲೋಕಸಭಾ ಚುನಾವಣಾ ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳುವ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ. ನಮ್ಮ ನಾಯಕ ರಾಹುಲ್ ಗಾಂಧಿಯವರು ಸೋಲಿನ ನೈತಿಕ ಹೊಣೆ ಹೊತ್ತಿದ್ದರು. ಇದರಂತೆ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಪಿಸಿಸಿ ಮತ್ತು ಸಿಎಲ್'ಪಿ ನಾಯಕರು ಅಧ್ಯಕ್ಷ ಸ್ಥಾನದಿಂದ ಮುಂದುವರೆಯುವಂತೆ ಮನವಿ ಮಾಡಿಕೊಂಡಿದ್ದರು. ಆದರೂ, ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಸೋಲಿನ ನೈತಿಕ ಹೊಣೆ ಹೊತ್ತು ದೊಡ್ಡ ಸ್ಥಾನದಿಂದ ಕೆಳಗಿಳಿಯುವುದು ಅತ್ಯಂತ ದೊಡ್ಡ ನಿರ್ಧಾರ. ಇಂತಹ ನಾಯಕರ ಅಡಿಯಲ್ಲಿ ರಾಜ್ಯದ ನಾಯಕರು ಕೆಲಸ ಮಾಡಿದ್ದು, ಅವರು ಏನು ಮಾಡಿದರು?  
2018ರ ರಾಜ್ಯ ಚುನಾವಣೆಯಲ್ಲಿ ಸೋಲು ಕಂಡರೂ ಯಾರೂ ನೈತಿಕ ಹೊಣೆ ಹೊತ್ತರು? ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಆದನ್ನು ನಾವು ಮಾಡುತ್ತೇವೆ. 15 ಶಾಸಕರು ಪಕ್ಷವನ್ನು ತೊರೆದು ಹೋಗಿದ್ದು ಯಾಕೆ ಎಂಬುದನ್ನು ನಾವು ಕಂಡುಕೊಳ್ಳಬೇಕು. ಪಕ್ಷ ಬಿಟ್ಟು ಹೋದವರಲ್ಲಿ ಸಾಕಷ್ಟು ಮಂದಿ ಸಿದ್ದರಾಮಯ್ಯ ಅವರ ಆಪ್ತರೇ ಆಗಿದ್ದರು. ಸ್ವಂತವಾಗಿಯೇ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಮರ್ಥ್ಯವುಳ್ಳ ನಾಯಕರಾಗಿದ್ದರು. ಅಂತಹ ನಾಯಕರನ್ನು ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನಗಳೇಕೆ ನಡೆಯುತ್ತಿಲ್ಲ? ಕುಮಾರಸ್ವಾಮಿಯವರೊಂದಿಗೆ ಸಿದ್ದರಾಮಯ್ಯ ಈ ಬಗ್ಗೆ ಚರ್ಚೆ ನಡೆಸುತ್ತಿಲ್ಲವೇಕೆ? 
 
ಪಕ್ಷದಲ್ಲಿ ಹಿರಿಯ ನಾಯಕರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲವೇಕೆ?
ಪಕ್ಷದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಪಕ್ಷ ರಕ್ಷಣೆ ಮಾಡಲು ಕ್ರಮ ಕೈಗೊಳ್ಳುವ ಅಗತ್ಯವಿದ್ದು, ಎಲ್ಲಾ ನಾಯಕರಿಗೂ ಕರೆ ಮಾಡಿ ಚರ್ಚೆಗೆ ಆಹ್ವಾನಿಸುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ತಿಳಿಸಿದ್ದೆ. ಪಕ್ಷವನ್ನು ತೊರೆದ ಶಾಸಕರು ಬಲಿಷ್ಠ ನಾಯಕರಾಗಿದ್ದರು. ಇದನ್ನು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಹಾಗೂ ದಿನೇಶ್ ಅವರು ತಮ್ಮ ಕಾರ್ಯವೈಖರಿಯನ್ನು ಸರಿಪಡಿಸಿಕೊಳ್ಳಬೇಕು. ಇದರಲ್ಲಿ ಈ ನಾಯಕರು ವಿಫಲರಾಗಿದ್ದೇ ಆದರೆ, ಪಕ್ಷ ಮತ್ತೊಂದು ಸೋಲನ್ನು ನೋಡಲಿದೆ. ಆ ಸೋಲಿಗೆ ಅವರೇ ನೇರ ಜವಾಬ್ದಾರರಾಗಿರುತ್ತಾರೆ. ಈಗಲೂ ತಡವಾಗಿಲ್ಲ. ಪಕ್ಷದಲ್ಲಿ ಈಗಲು ಭಿನ್ನಮತವಿಲ್ಲ. ಎಲ್ಲಾ ಹಿರಿಯ ನಾಯಕರಿಗೆ ಕರೆ ಮಾಡಿ ಚರ್ಚೆಗೆ ಆಹ್ವಾನಿಸಲಿ. ವೈಯಕ್ತಿಕತೆಗಿಂತಲೂ ಪಕ್ಷ ಮುಖ್ಯವಾಗುತ್ತದೆ.  

ಲೋಕಸಭಾ ಚುನಾವಣೆ ವೇಳೆ ಕೆಲ ನಾಯಕರು ನಿಮ್ಮ ವಿರುದ್ಧ ಕೆಲಸ ಮಾಡಿದ್ದರೂ ಪಕ್ಷ ಅವರ ವಿರುದ್ದ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದ್ದಿರಿ ಏಕೆ?
ಚುನಾವಣೆ ವೇಳೆ ನನ್ನ ವಿರುದ್ಧ ಕೆಲಸ ಮಾಡಿದ್ದವರು ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ್ದರು. ಈ ವೇಳೆ ಪಕ್ಷದಿಂದ ಹೊರಹಾಕಿದರೂ ನನ್ನ ವಿರುದ್ಧ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಅವರಿಗೆ ಎಚ್ಚರಿಕೆ ಕೊಡಬಹುದಿತ್ತು. ಇಲ್ಲವೇ ರಾಜೀನಾಮೆ ಕೊಡುವಂತೆ ಸೂಚಿಸಬಹುದಿತ್ತು. ಆದರೆ, ಅವರು ನನ್ನನ್ನು ರಕ್ಷಣೆ ಮಾಡುವ ಪ್ರಯತ್ನ ಮಾಡಲಿಲ್ಲ. ಈ ಪ್ರಶ್ನೆಯನ್ನು ಇನ್ನು ಮುಂದೆಯೂ ಮುಂದುವರೆಸುತ್ತೇನೆ. ಪಕ್ಷ ನಾಯಕರ ವಿರುದ್ಧ ರೋಷನ್ ಬೇಗ್ ಮಾತನಾಡಿದ್ದಕ್ಕೆ ಕ್ರಮ ಕೈಗೊಂಡಿದ್ದರು. ಆದರೆ, ನನ್ನ ವಿರುದ್ಧವಿರುವ ರಮೇಶ್ ಕುಮಾರ್ ಹಾಗೂ ಇನ್ನಿತರೆ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.  

ನಿಮ್ಮ ಈ ಪ್ರಶ್ನೆಗೆ ಕೆ.ಸಿ.ವೇಣುಗೋಪಾಲ್ ಪ್ರತಿಕ್ರಿಯೆ ಏನು?
ನಾಯಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ವೇಣುಗೋಪಾಲ್ ಹೇಳಿದ್ದಾರೆ. ಅಂತಹ ಮಟ್ಟಕ್ಕೆ ಯಾಕೆ ಹೋಗಬೇಕು ಎಂಬುದು ನನ್ನ ಪ್ರಶ್ನೆಯಾಗಿದೆ. ರೋಷನ್ ಬೇಗ್ ವಿರುದ್ಧ ಕ್ರಮಕೈಗೊಂಡಿರುವುದು ನಮ್ಮ ಕಣ್ಣಿನ ಮುಂದೆಯೇ ಇದೆ. ಕೋಲಾರದಲ್ಲಿ ಬಿಜೆಪಿಯಲ್ಲ ಕಾಂಗ್ರೆಸ್ ನಾಯಕರೇ ನನ್ನನ್ನು ಸೋಲು ಕಾಣುವಂತೆ ಮಾಡಿದ್ದರು. ಸಭೆಯಲ್ಲಿ ಇದನ್ನು ಪ್ರಶ್ನಿಸಿದ್ದಕ್ಕೆ ಸಿದ್ದರಾಮಯ್ಯ ಅವರು ನನ್ನ ಮೇಲೆಯೇ ಕೋಪಗೊಂಡಿದ್ದರು.  

ಕಾಂಗ್ರೆಸ್ ಪಕ್ಷದ ಶಾಸಕಾಂಗ ನಾಯಕರು ಹಾಗೂ ಕೆಪಿಸಿಸಿ ಅಧ್ಯಕ್ಷರನ್ನು ಬದಲಿಸಲು ನೀವು ಆಗ್ರಹಿಸುತ್ತಿದ್ದೀರಾ?
ಉಪ ಚುನಾವಣೆ ಘೋಷಣೆಯಾದ ಬಳಿಕ, ಇಂತಹ ನಿರ್ಧಾರ ಕೈಗೊಳ್ಳುವುದು ಹೈ ಕಮಾಂಡ್'ಗೆ ಕಠಿಣವಾಗಿರುತ್ತದೆ. ನಿರ್ಧಾರಗಳು ಹೈಕಮಾಂಡ್'ಗೆ ಬಿಟ್ಟಿದ್ದು. 
 
ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿರುವ ಪ್ರಕ್ರಿಯೆ ಸಂತಸ ತಂದಿದೆಯೇ?
ಪಕ್ಷದ ಹಿರಿಯ ನಾಯಕರು, ಸಂಸದರು, ಮಾಜಿ ಸಂಸದರ ಅಭಿಪ್ರಾಯ ಕೇಳಿದ್ದಾರೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಒಗ್ಗಟ್ಟು ಇರಬೇಕು. ಆದರೆ, ಅದು ಪಕ್ಷದಲ್ಲಿ ಕಾಣುತ್ತಿಲ್ಲ. ಚಿಕ್ಕಬಳ್ಳಾಪುರದಲ್ಲಿ ಎರಡು ಹಂತದಲ್ಲಿ ಉಪ ಚುನಾವಣೆ ನಡೆಯಲಿದೆ. ಆದರೆ, ಈ ಬಗ್ಗೆ ನನ್ನ ಅಭಿಪ್ರಾಯವನ್ನೇ ಕೇಳಿಲ್ಲ. ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸದೆಯೇ ಕೆಲ ನಾಯಕರನ್ನು ಪಕ್ಷದಿಂದ ಹೊರಹಾಕಲಾಗಿದೆ. ಈ ರೀತಿ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಳ್ಳಲು ಹೇಗೆ ಸಾಧ್ಯ?
 
ಒಮ್ಮತ ಹಾಗೂ ಏಕತೆ ಕಾಪಾಡಿಕೊಳ್ಳುವಲ್ಲಿ ರಾಜ್ಯ ನಾಯಕರು ವಿಫಲರಾಗಿದ್ದಾರೆಂದು ನೀವು ಹೇಳುತ್ತಿದ್ದೀರಾ? 
ವಿಫಲರಾಗಿದ್ದಾರೆಂದು ನಾನು ಹೇಳುವುದಿಲ್ಲ. ಆದರೆ, ಅವರ ಕಾರ್ಯಶೈಲಿ ಬದಲಿಸಿಕೊಳ್ಳುವಂತೆ ಹೇಳಲು ಇಚ್ಛಿಸುತ್ತೇನೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com