ದೆಹಲಿ ನಿಜಾಮುದ್ದೀನ್ ಮರ್ಕಜ್ ಮಸೀದಿಗೆ ತೆರಳಿದ್ದ ಬೆಳಗಾವಿಯ 10, ಕೋಲಾರದ 18 ಮಂದಿ ಕ್ವಾರಂಟೈನ್ ಗೆ

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬೆಳಗಾವಿಯ 10 ಮಂದಿ ಮತ್ತು ಕೋಲಾರದ 18 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬೆಳಗಾವಿಯ 10 ಮಂದಿ ಮತ್ತು ಕೋಲಾರದ 18 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ತಬ್ಲೀಗ್‌ ಜಮಾತ್‌ ಕೇಂದ್ರ ಕಚೇರಿಯಲ್ಲಿ ಮಾ.13 ರಿಂದ ಮಾ.15ರವರೆಗೆ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಹಲವರಿಗೆ ಸೋಂಕು ತಗುಲಿದ್ದು, ಈ ಕಾರ್ಯಕ್ರಮಕ್ಕೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಸುಮಾರು 300ಕ್ಕೂ ಹೆಚ್ಚು  ಮಂದಿ ಭಾಗಿಯಾಗಿದ್ದರು. ಹೀಗಾಗಿ ಇವರಿಗೂ ಸೋಂಕು ತಗುಲಿರುವ ಶಂಕೆ ಇದ್ದು, ಅವರೆಲ್ಲರನ್ನೂ ಪತ್ತೆ ಮಾಡಿ ಕ್ವಾರಂಟೈನ್‌ ಮಾಡಲು ಆದೇಶಿಸಲಾಗಿದೆ. 

ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಈ ಬಗ್ಗೆ ಹೆಚ್ಚಿನ ನಿಗಾ ವಹಿಸಲು ರಾಜ್ಯಮಟ್ಟದ ವಿಶೇಷ ತಂಡ ರಚಿಸಲಾಗುವುದು. ಈಗಾಗಲೇ ರಾಜ್ಯದಿಂದ ದೆಹಲಿ ಮಸೀದಿ ಕಾರ್ಯಕ್ರಮಕ್ಕೆ ಹೋಗಿದ್ದ 78 ಮಂದಿಯನ್ನು ಗುರುತಿಸಿ,  ಪ್ರತ್ಯೇಕ ನಿಗಾ ಕೇಂದ್ರದಲ್ಲಿ ಇಡಲಾಗಿದೆ ಎಂದು ಹೇಳಿದ್ದಾರೆ. 

ಬೆಳಗಾವಿಯ 10, ಕೋಲಾರದ 18 ಮಂದಿ ಕ್ವಾರಂಟೈನ್ ಗೆ
ಇನ್ನು ಇದೇ ಮಸೀದಿಯ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ್ದ 10 ಮಂದಿಯನ್ನು ಬೆಳಗಾವಿ ಜಿಲ್ಲಾಡಳಿತ ಗುರುತಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಅಂತೆಯೇ ಕೊಲಾರ ಜಿಲ್ಲಾಡಳಿತ ಕೂಡ ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿ ಜಿಲ್ಲೆಗೆ  ಬಂದಿರುವ 18 ಮಂದಿಯನ್ನು ಪತ್ತೆ ಮಾಡಿದೆ. ಮಾರ್ಚ್ 20ರಂದು‌‌ ಜಿಲ್ಲೆಗೆ ಬಂದಿದ್ದ ಇವರು ಬಂಗಾರಪೇಟೆ ತಾಲ್ಲೂಕಿನ ಭೀಮಗಾನಹಳ್ಳಿ ಮತ್ತು ಗೊಲ್ಲಹಳ್ಳಿಯಲ್ಲಿ‌ ಉಳಿದುಕೊಂಡಿದ್ದರು‌. ಇವರಲ್ಲಿ  10 ಮಂದಿ ಮೂಲತಃ ಮಹಾರಾಷ್ಟ್ರದ ಮುಂಬೈನವರು ಮತ್ತು 8 ಮಂದಿ ದೆಹಲಿಯವರು  ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ 18 ಮಂದಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಜಿಲ್ಲಾ ಕೇಂದ್ರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ‌ ಇರಿಸಲಾಗಿದೆ. ಇವರೆಲ್ಲರ ಕಫಾ ಮತ್ತು‌ ರಕ್ತ‌ ಮಾದರಿ ಸಂಗ್ರಹಿಸಿ ಹೆಚ್ಚಿನ  ಪರಿಶೀಲನೆಗಾಗಿ‌ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲು ಸಿದ್ಧತೆ ನಡೆದಿದೆ. ಈ 18 ಮಂದಿಯೂ ಧರ್ಮ ಪ್ರಚಾರಕ್ಕಾಗಿ ಫೆ.20ರಿಂದ ದೇಶದ ವಿವಿಧೆಡೆ ಸಂಚಾರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಹಿಂದೆ ಕೋವಿಡ್‌–19 ವೈರಸ್ ನಿಂದಾಗಿ ಕೊನೆಯುಸಿರೆಳೆದಿದ್ದ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ 60 ವರ್ಷದ ವ್ಯಕ್ತಿಯೂ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಜ್ಯದಿಂದ ಅಲ್ಲಿಗೆ ಹೋದವರಲ್ಲಿ ಹೆಚ್ಚಿನವರು ಬೆಂಗಳೂರು, ಬೀದರ್, ಕಲಬುರ್ಗಿ ಹಾಗೂ  ಬಳ್ಳಾರಿಯವರಾಗಿದ್ದಾರೆ. ಆ ಕಾರ್ಯಕ್ರಮಕ್ಕೆ ಭಾರತೀಯರು ಮಾತ್ರವಲ್ಲದೇ ಆಸ್ಟ್ರೇಲಿಯಾ, ಸಿಂಗಾಪುರ, ದುಬೈ, ಸೌದಿ ಅರೇಬಿಯಾ, ಇಂಡೋನೇಷ್ಯಾ ಸೇರಿದಂತೆ ಹಲವು ದೇಶಗಳಿಂದ ಸುಮಾರು 2000ಕ್ಕೂ ಅಧಿಕ ಪ್ರವಾಸಿಗರು ಬಂದಿದ್ದರು. ವಿವಿಧ ರಾಜ್ಯಗಳಿಂದಲೂ ಬಂದ ಭಕ್ತರು,  ಒಂದೆಡೆ ಸೇರಿ ಪ್ರಾರ್ಥನೆ ಸಲ್ಲಿಸಿದ್ದರು. ಅನ್ಯ ರಾಜ್ಯಗಳ ಕೆಲವರಿಗೆ ಸೋಂಕು ತಗುಲಿರುವುದು ಈಗಾಗಲೇ ದೃಢಪಟ್ಟಿದ್ದು, ಈ ಪೈಕಿ ನಿನ್ನೆ ತೆಲಂಗಾಣದಲ್ಲಿ 6 ಮಂದಿ ಸೋಂಕಿತರು ಸಾವನ್ನಪ್ಪಿದ್ದರು. ಹಲವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹಾಗಾಗಿ, ರಾಜ್ಯದಲ್ಲಿಯೂ ಅಲ್ಲಿಗೆ  ಹೋದವರನ್ನು ಗುರುತಿಸುವ ಕಾರ್ಯ ಬಿರುಸಿನಿಂದ ಸಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com