ಲಾಕ್ ಡೌನ್: ತುರ್ತು ವಿಚಾರಣೆಗೆ ಹೈಕೋರ್ಟ್ ಸುತ್ತೋಲೆ

ಅತ್ಯಂತ ತುರ್ತು ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಲು ಜಿಲ್ಲಾ ನ್ಯಾಯಾಲಯಗಳಿಗೆ ದಿನ ಮತ್ತು ಸಮಯ ನಿಗದಿ ಮಾಡಿ ಹೈಕೋರ್ಟ್ ಸುತ್ತೋಲೆ ಹೊರಡಿಸಿದೆ.

Published: 01st April 2020 07:39 AM  |   Last Updated: 01st April 2020 08:25 AM   |  A+A-


Posted By : Sumana Upadhyaya
Source : UNI

ಬೆಂಗಳೂರು : ಅತ್ಯಂತ ತುರ್ತು ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಲು ಜಿಲ್ಲಾ ನ್ಯಾಯಾಲಯಗಳಿಗೆ ದಿನ ಮತ್ತು ಸಮಯ ನಿಗದಿ ಮಾಡಿ ಹೈಕೋರ್ಟ್ ಸುತ್ತೋಲೆ ಹೊರಡಿಸಿದೆ.

ರಾಜ್ಯದ ಎಲ್ಲಾ 30 ಜಿಲ್ಲಾ ನ್ಯಾಯಾಲಯಗಳು ಹಾಗೂ ಸಣ್ಣ ಪ್ರಕರಣಗಳ ವಿಚಾರಣಾ ನ್ಯಾಯಾಲಯಗಳು ಮತ್ತು ಕೌಟುಂಬಿಕ ನ್ಯಾಯಾಲಯಗಳು ಮಂಗಳವಾರ ಮತ್ತು ಶುಕ್ರವಾರ ತುರ್ತು ಪ್ರಕರಣಗಳ ವಿಚಾರಣೆ ನಡೆಸಲಿವೆ. ಈ ಎರಡು ದಿನಗಳಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಪ್ರಕರಣಗಳ ವಿಚಾರಣೆ ನಡೆಸಲಿವೆ.

ತುಂಬಾ ಅನಿವಾರ್ಯತೆ ಇದೆ ಎಂಬಂತಹ ಪರಿಸ್ಥಿತಿಯಲ್ಲಿ ತುರ್ತು ಪ್ರಕರಣಗಳ ವಿಚಾರಣೆಗಾಗಿ ವಕೀಲರು ಮತ್ತು ಪಾರ್ಟಿ ಇನ್ ಪರ್ಸನ್ (ಖುದ್ದು ವಾದಿಸುವವರು) ಇ-ಮೇಲ್ ಮೂಲಕ ಆಯಾ ಜಿಲ್ಲಾ ಪ್ರಧಾನ ನ್ಯಾಯಾಧೀಶರಿಗೆ ಮನವಿ ಸಲ್ಲಿಸಬಹುದು. ಜಿಲ್ಲಾ ನ್ಯಾಯಾಧೀಶರು ಮನವಿಯಲ್ಲಿನ ಮಾಹಿತಿ ಮತ್ತು ಅನಿವಾರ್ಯತೆ ಆಧರಿಸಿ ಪ್ರಕರಣ ದಾಖಲಿಸಲು ಅನುಮತಿ ನೀಡುತ್ತಾರೆ. ಆ ಬಳಿಕ ವಕೀಲರು ಅಥವಾ ಪಾರ್ಟಿ ಇನ್ ಪರ್ಸನ್ ಇ-ಫೈಲಿಂಗ್ ಮೂಲಕ ಅರ್ಜಿ ಸಲ್ಲಿಸಬಹುದು. ಅದನ್ನು ಪರಿಗಣಿಸಿ ವಿಚಾರಣೆಯ ದಿನ ಮತ್ತು ಸಮಯವನ್ನು ತಿಳಿಸಲಾಗುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ಅವರ ಆದೇಶದ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಅವರು ಈ ಸುತ್ತೋಲೆ ಹೊರಡಿಸಿದ್ದಾರೆ. ಏ.14ರವರೆಗೆ ರಾಜ್ಯದಲ್ಲಿ ಲಾಕ್‌ಡೌನ್ ಇರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಆದೇಶ ಹೊರಡಿಸಲಾಗಿದೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp