ಕೊರೋನಾ ವೈರಸ್: ದೆಹಲಿ ಮಸೀದಿ ಕಾರ್ಯಕ್ರಮದಲ್ಲಿ ಕರ್ನಾಟಕದ 450ಕ್ಕೂ ಅಧಿಕ ಮಂದಿ ಭಾಗಿ: ವರದಿ

ದೆಹಲಿಯ ಮರ್ಕಜ್ ಮಸೀದಿ ನಡೆಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ 450ಕ್ಕೂ ಅಧಿಕ ಮಂದಿ ಪಾಲೊಂಡಿದ್ದ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.
ದೆಹಲಿ ಮರ್ಕಜ್ ಮಸೀದಿ
ದೆಹಲಿ ಮರ್ಕಜ್ ಮಸೀದಿ

ಬೆಂಗಳೂರು: ದೆಹಲಿಯ ಮರ್ಕಜ್ ಮಸೀದಿ ನಡೆಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ 450ಕ್ಕೂ ಅಧಿಕ ಮಂದಿ ಪಾಲೊಂಡಿದ್ದ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.

ಖಾಸಗಿ ಮಾಧ್ಯಮವೊಂದು ವರದಿ ಮಾಡಿರುವಂತೆ ರಾಜ್ಯದಿಂದ ದೆಹಲಿಗೆ ಸುಮಾರು 450ಕ್ಕೂ ಅಧಿಕ ಮಂದಿ ತೆರಳಿದ್ದ ಕುರಿತು ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ಇದೇ ವಿಚಾರವಾಗಿ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದು, ದೆಹಲಿಯ ನಿಜಾಮುದ್ದೀನ್  ಜಮಾತ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದವರ ರಾಜ್ಯದ ಮೌಲ್ವಿಗಳ ಸಂಖ್ಯೆ ಏರಿಕೆಯಾಗಿದೆ. ಕರ್ನಾಟಕದ 391 ಮಂದಿ ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದರು. ಎಲ್ಲ 391 ಜನರನ್ನೂ ಕ್ವಾರಂಟೈನ್ ಮಾಡಲಾಗಿದೆ. ಕೆಲವರು ತಮ್ಮ ನಿವಾಸದಲ್ಲಿ ಇರೇ ಬೇರೆ ಬೇರೆ ಕಡೆ  ತೆರಳಿದ್ದಾರೆ. ಅವರನ್ನು ಪತ್ತೆ ಹಚ್ಚುವ ಕೆಲಸ ನಡೆದಿದೆ. ಇನ್ನು ಕೆಲವರು ಕಾಶ್ಮೀರ, ಗುಜರಾತ್, ಮಹಾರಾಷ್ಟ್ರ, ಉತ್ತರಪ್ರದೇಶ, ರಾಜಸ್ಥಾನ ರಾಜ್ಯಗಳಿಗೆ ತೆರಳಿದ್ದು ಕರ್ನಾಟಕಕ್ಕೆ ತಲುಪಿಲ್ಲ. ಅವರ ಬಗ್ಗೆಯೂ ಶೋಧ ಕಾರ್ಯ ನಡೆಯುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಪ್ರಸ್ತುತ ಅಧಿಕಾರಿಗಳು ಕಲೆ ಹಾಕಿರುವ ಮಾಹಿತಿ ಅನ್ವಯ ರಾಜ್ಯದಿಂದ ದೆಹಲಿಗೆ ಸುಮಾರು 450ಕ್ಕೂ ಅಧಿಕ ಮಂದಿ ತೆರಳಿರುವ ಮಾಹಿತಿ ಲಭ್ಯವಾಗಿದೆ. ಲಭ್ಯವಾದ ಪ್ರಾಥಮಿಕ ಮಾಹಿತಿ ಪ್ರಕಾರ, ರಾಜ್ಯದಿಂದ ದೆಹಲಿಗೆ ಹೋದವರ ಸಂಖ್ಯೆ 450 ದಾಟುತ್ತದೆ. ರಾಜ್ಯದ ಪ್ರಮುಖ  ನಗರಗಳಾದ ಬೆಂಗಳೂರು, ಬೆಳಗಾವಿ ಮತ್ತು ಮೈಸೂರಿನಿಂದಲೇ ಸುಮಾರು 190ಕ್ಕೂ ಅಧಿಕ ಮಂದಿ ದೆಹಲಿಗೆ ತೆರಳಿದ್ದ ಮಾಹಿತಿ ಲಭ್ಯವಾಗಿದೆ. 

ಯಾವ ಜಿಲ್ಲೆಯಿಂದ ಎಷ್ಟೆಷ್ಟು ಮಂದಿ ದೆಹಲಿಗೆ ತೆರಳಿದ್ದರು?
ಬೆಂಗಳೂರಿನಿಂದ 60 ಮಂದಿ ದೆಹಲಿಯಲ್ಲಿ ನಡೆದಿದ್ದ ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದ್ರು. ಆದರೆ ಈವರೆಗೂ 9 ಮಂದಿ ಮಾತ್ರ ಪತ್ತೆಯಾಗಿದ್ದಾರೆ. ಬೆಳಗಾವಿ ಜಿಲ್ಲೆಯಿಂದ ಭಾಗಿಯಾಗಿದ್ದ 70 ಮಂದಿ ಪತ್ತೆಯಾಗಿದ್ದಾರೆ. ಮೈಸೂರಿನಿಂದ ಕಾರ್ಯಕ್ರಮಕ್ಕೆ ಹಾಜರಾಗಿದ್ದ 63 ಮಂದಿ  ಪೈಕಿ 43 ಮಂದಿ ಮಾತ್ರ ಪತ್ತೆಯಾಗಿದ್ದಾರೆ. ಬೀದರ್ ಜಿಲ್ಲೆಯ 26 ಹಾಗೂ ಬಾಗಲಕೋಟೆ ಜಿಲ್ಲೆಯ 21 ಜನರು ಹಾಜರಾಗಿದ್ದರು. ಕಲಬುರಗಿ ಜಿಲ್ಲೆಯಿಂದ ದೆಹಲಿ ಸಭೆಗೆ ಹಾಜರಾಗಿದ್ದ 26 ಜನರ ಪೈಕಿ 14 ಮಂದಿ ಮಾತ್ರ ಪತ್ತೆಯಾಗಿದ್ದಾರೆ.

ವಿಜಯಪುರ ಜಿಲ್ಲೆಯ 13 ಜನರು, ಚಿಕ್ಕಬಳ್ಳಾಪುರದ  17 ಮಂದಿ, ಚಿತ್ರದುರ್ಗದ 9 ಜನರು, ದಾವಣಗೆರೆಯ ಇಬ್ಬರು, ಧಾರವಾಡದ 15 ಮಂದಿ ಜಮಾತ್ ಸಭೆಗೆ ಹೋಗಿದ್ದರು. ಕೊಪ್ಪಳ ಜಿಲ್ಲೆಯ 14 ಜನ, ಉತ್ತರ ಕನ್ನಡ ನಾಲ್ವರು ಜಮಾತ್ ಸಭೆಗೆ ಹಾಜರಾಗಿದ್ದರು. ದಕ್ಷಿಣ ಕನ್ನಡದ 28 ಜನರು ಭಾಗವಹಿಸಿದ್ದು, 21 ಜನರು ಮಾತ್ರ  ಪತ್ತೆಯಾಗಿದ್ದಾರೆ. ಯಾದಗಿರಿ ಜಿಲ್ಲೆಯ ಐವರು, ಕೋಲಾರದ 8 ಮಂದಿ, ಗದಗ ಜಿಲ್ಲೆಯ 6 ಜನರು, ತುಮಕೂರು ಜಿಲ್ಲೆಯ 11 ಮಂದಿ ಹಾಜರಾಗಿದ್ದರು. ಕೊಡಗು ಜಿಲ್ಲೆಯ 11 ಜನರು ಭಾಗವಹಿಸಿದ್ದು, ಕುಶಾಲನಗರದ ಯಾರು ವಾಪಸ್ ಆಗಿಲ್ಲ. ಉಡುಪಿಯಿಂದ 16 ಜನರು ಭಾಗವಹಿಸಿದ್ದರೆ,  ಚಾಮರಾಜನಗರ ಜಿಲ್ಲೆಯ 14 ಜನರ ಪೈಕಿ 4 ಪತ್ತೆಯಾಗಿದ್ದಾರೆ.

ಇದಲ್ಲದೇ ಇನ್ನೂ ಸಾಕಷ್ಟು ಮಂದಿ ದೆಹಲಿ ಮಸೀದಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕುರಿತು ಮಾಹಿತಿ ಲಭ್ಯವಾಗಿದ್ದು, ಇವರ ಗುರುತು ಪತ್ತೆ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ.

ಸ್ವಯಂಪ್ರೇರಿತವಾಗಿ ಮುಂದೆ ಬಂದು ಮಾಹಿತಿ ನೀಡಬೇಕು: ಸಿಎಂ ಬಿಎಸ್ ವೈ
ಯಾರ್ಯಾರು ದೆಹಲಿ ಧಾರ್ಮಿಕ ಸಭೆಗೆ ಹೋಗಿ ಬಂದಿದ್ದೀರೋ ಅವರೆಲ್ಲಾ ಸ್ವಯಂಪ್ರೇರಿತವಾಗಿ ಮುಂದೆ ಬಂದು ಮಾಹಿತಿ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಮನವಿ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ಜಮಾತ್‍ಗೆ ಹೋಗಿ ಬಂದು ರಾಜ್ಯದ  ವಿವಿಧೆಡೆ ನೆಲೆಸಿರುವ 50 ವಿದೇಶಿಗರನ್ನು ಕ್ವಾರಂಟೈನ್ ಮಾಡಲಾಗಿದೆ.

ಒಂದೇ ಧಾರ್ಮಿಕ ಕಾರ್ಯಕ್ರಮದಿಂದ ದೇಶಾದ್ಯಂತ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ
ದೆಹಲಿ ಮಸೀದಿ ಕಾರ್ಯಕ್ರಮಕ್ಕೆ ಒಡಿಶಾದಿಂದ 19 ಮಂದಿ ಹಾಜರಾದ ಕುರಿತು ಮಾಹಿತಿ ಲಭ್ಯವಾಗಿದ್ದು, ಈ ಪೈಕಿ 4 ಮಂದಿ ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಇವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ, ಉಳಿದ 15 ಮಂದಿ ದೆಹಲಿಯಲ್ಲೇ ಇದ್ದು ಇವರನ್ನೂ ಕೂಡ ಕ್ವಾರಂಟೈನ್  ಮಾಡಲಾಗಿದೆ. ಕರ್ನಾಟಕದ 79 ಮಂದಿ ಇದೇ ಧಾರ್ಮಿಕ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಆಗಿದ್ದ ಮಾಹಿತಿ ಲಭ್ಯವಾಗಿದ್ದು, ಇವರನ್ನೂ ಕೂಡ ಹುಡುಕಿ ಕ್ವಾರಂಟೈನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಇದಕ್ಕಿಂತಲೂ ಭಯಾನಕ ಎಂದರೆ ತೆಲಂಗಾಣದಿಂದ ಈ ಕಾರ್ಯಕ್ರಮಕ್ಕೆ  ಬರೊಬ್ಬರಿ 1030 ಮಂದಿ ತೆರಳಿದ್ದರು ಎಂದು ತಿಳಿದುಬಂದಿದೆ. ಈ ಪೈಕಿ 348 ಮಂದಿಯನ್ನು ಹೈದರಾಬಾದ್ ನಲ್ಲಿ ಹೋಮ್ ಕ್ವಾರಂಟೈನ್ ಮಾಡಲಾಗಿದೆ, ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ. ಇನ್ನು ಕೇರಳದಿಂದ 54 ಮಂದಿ ದೆಹಲಿ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಈ ಪೈಕಿ  ಬಹುತೇಕರು ತಮ್ಮ ರಾಜ್ಯಕ್ಕೆ ವಾಪಸ್ ಆಗಿದ್ದು, ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಆಂಧ್ರ ಪ್ರದೇಶದಿಂದ ದೆಹಲಿಗೆ 700 ಮಂದಿ ತೆರಳಿದ್ದ ಕುರಿತು ಮಾಹಿತಿ ಲಭ್ಯವಾಗಿದ್ದು, ಈ ಪೈಕಿ ಬಹುತೇಕರು ರಾಜ್ಯಕ್ಕೆ ವಾಪಸ್ ಆಗಿ ಕ್ವಾರಂಟೈನ್ ನಲ್ಲಿದ್ದಾರೆ, ಆದರೆ ಕಾರ್ಯಕ್ರಮಕ್ಕೆ  ಹಾಜರಾದವರ ಪೈಕಿ ಇನ್ನೂ 85 ಮಂದಿಯ ಗುರುತು ಪತ್ತೆಯಾಗಬೇಕಿದ್ದು, ಈ ಸಂಬಂಧ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com