ಮುಸ್ಲಿಂ ಮುಖಂಡರ ಜೊತೆ ಯಡಿಯೂರಪ್ಪ ಸಭೆ: ವೈದ್ಯಕೀಯ ಸಿಬ್ಬಂದಿಗೆ ಸಹಕರಿಸಲು ಮನವಿ

ಮುಸ್ಲಿಂ ಮುಖಂಡರ ಜೊತೆ ಯಡಿಯೂರಪ್ಪ ಸಭೆ: ವೈದ್ಯಕೀಯ ಸಿಬ್ಬಂದಿಗೆ ಸಹಕರಿಸಲು ಮನವಿ

ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೆಲವರಲ್ಲಿ ಕೋವಿಡ್-19 ಕಂಡು ಬಂದ ಹಿನ್ನೆಲೆಯಲ್ಲಿ ಹಾಗೂ ಆರೋಗ್ಯ ಪರೀಕ್ಷೆ ಮಾಡಲು ಹೋದ ವೈದ್ಯಕೀಯ ಸಿಬ್ಬಂದಿ ಮೇಲೆ ಗುಂಪಿನ ದಾಳಿ ನಡೆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ರಾಜ್ಯದ ಮುಸ್ಲಿಂ ಮುಖಂಡರು ಹಾಗೂ ಶಾಸಕರೊಂದಿಗೆ ಸಮಾಲೋಚನಾ ಸಭೆ ನಡೆಸಿದರು.

ಬೆಂಗಳೂರು: ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೆಲವರಲ್ಲಿ ಕೋವಿಡ್-19 ಕಂಡು ಬಂದ ಹಿನ್ನೆಲೆಯಲ್ಲಿ ಹಾಗೂ ಆರೋಗ್ಯ ಪರೀಕ್ಷೆ ಮಾಡಲು ಹೋದ ವೈದ್ಯಕೀಯ ಸಿಬ್ಬಂದಿ ಮೇಲೆ ಗುಂಪಿನ ದಾಳಿ ನಡೆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ರಾಜ್ಯದ ಮುಸ್ಲಿಂ ಮುಖಂಡರು ಹಾಗೂ ಶಾಸಕರೊಂದಿಗೆ ಸಮಾಲೋಚನಾ ಸಭೆ ನಡೆಸಿದರು.

ಸಭೆಯಲ್ಲಿ ಮುಖಂಡರಾದ ಸಿ.ಎಂ. ಇಬ್ರಾಹಿಂ, ಎನ್.ಎ. ಹ್ಯಾರಿಸ್, ಜಮೀರ್ ಅಹಮದ್, ನಸೀರ್ ಅಹಮದ್, ರಿಜ್ವಾನ್ ಅರ್ಷದ್, ಅಖಂಡ, ಶ್ರೀನಿವಾಸಮೂರ್ತಿ, ಸಲೀಮ್ ಅಹಮದ್ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.

ಸಭೆಯಲ್ಲಿ ಕೊರೋನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದವರ ಸಹಕಾರ ಕುರಿತಂತೆ ಯಡಿಯೂರಪ್ಪ ಮನವಿ ಮಾಡಿ, ಕೊರೊನಾ ವೈರಸ್ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯೊಂದೇ ಪರಿಹಾರ. ಲಾಕ್‍ಡೌನ್ ಅವಧಿ ಮುಗಿಯುವವರೆಗೆ ಎಲ್ಲರ ಆರೋಗ್ಯದ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಾತಿ, ಧರ್ಮ ಭೇದ ಮರೆತು ಶ್ರಮಿಸಬೇಕಾಗಿದೆ ಎಂದು ಮನವಿ ಮಾಡಿದರು.

ಸಭೆಯಲ್ಲಿ ಪಕ್ಷಾತೀತವಾಗಿ ಅಭಿಪ್ರಾಯ ವ್ಯಕ್ತಪಡಿಸಿದ ಮುಸ್ಲಿಂ ಮುಖಂಡರು, ನಿಜಾಮುದ್ದೀನ್ ತಬ್ಲೀಘ್ ಮರ್ಕಜ್ ಗೆ ಭೇಟಿ ನೀಡಿದ ರಾಜ್ಯದ ವ್ಯಕ್ತಿಗಳ ಮಾಹಿತಿ ನೀಡಿ, ಅವರು ವೈದ್ಯಕೀಯ ಪರೀಕ್ಷೆಗೆ ಒಳಗಾಗುವಂತೆ ಹಾಗೂ ಕ್ವಾರಂಟೈನ್‍ ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವೊಲಿಸಲು ಸಹಕಾರ ನೀಡುವುದಾಗಿಯೂ ಹಾಗೂ ಹಲ್ಲೆಯಿಂದ ಭಯಭೀತರಾಗಿರುವ ಆರೋಗ್ಯ ಕಾರ್ಯಕರ್ತರಿಗೆ ಎಲ್ಲ ರೀತಿಯ ಸಹಕಾರ ನೀಡುವಂತೆ ತಮ್ಮ ಸಮುದಾಯದ ಜನರ ಮನವೊಲಿಸುವುದಾಗಿ ಭರವಸೆ ನೀಡಿದರು.

ಯಡಿಯೂರಪ್ಪ ಮಾತನಾಡಿ, ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ನಾವೆಲ್ಲರೂ ಒಟ್ಟಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಕರೋನಾ ವಿರುದ್ಧದ ಸಮರ ಜಯಿಸೋಣ ಎಂದು ಕರೆ ನೀಡಿದರು.

ಸಭೆ ಬಳಿಕ ಮುಸ್ಲಿಂ ಮುಖಂಡ ಹಾಗೂ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಮಾತನಾಡಿ, ತಮ್ಮ ಮತ ಕ್ಷೇತ್ರದಲ್ಲಿ ಹಲವರನ್ನು ತಾವೇ ಖುದ್ದು ಭೇಟಿ ಮಾಡಿದ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು ನೆಗಟಿವ್ ಬಂದಿದೆ. ಪರೀಕ್ಷೆ ಮಾಡಿಸಿಕೊಳ್ಳುವುದರಲ್ಲಿ ತಪ್ಪಿಲ್ಲ. ತಾವು ಸಹ ತಮ್ಮ ಸಮುದಾಯದವರಿಗೆ ಮನವಿ ಮಾಡಿದ್ದು ಸ್ವಯಂ ಪರೀಕ್ಷೆ ಗೆ ಒಳಗಾಗಿ ಸರ್ಕಾರದ ಕ್ರಮಕ್ಕೆ ಸಾಥ್ ನೀಡುವಂತೆ ಕೋರಿದ್ದೇನೆ ಎಂದರು.

ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಾಧಿಕ್ ಪಾಳ್ಯ ಜನರಿಗೆ ಯಾವ ಕಾರಣಕ್ಕೆ ಇವರು ಬಂದಿದ್ದರು ಎನ್ನುವುದು ಗೊತ್ತಿರಲಿಲ್ಲ. ಎನ್ಆರ್ ಸಿ ಸರ್ವೆಗೆ ಬಂದಿದ್ದರು ಎಂದಿ ಭಯಗೊಂಡು ಆ ರೀತಿ ಮಾಡಿದ್ದಾರೆ. ಆಶಾ ಕಾರ್ಯಕರ್ತೆಯರು ಸಹ ಯಾರಿಗೂ ಮಾಹಿತಿ ಕೊಡದೇ ಹೋಗಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಸಹ ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರು ಈ ಬಗ್ಗೆ ನಮ್ಮ ಸಮುದಾಯದವರಿಗೂ ತಿಳಿ ಹೇಳುವಂತೆ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಮೇಲ್ಮನೆ ಕಾಂಗ್ರೆಸ್ ಸದಸ್ಯ ಹಾಗೂ ಮುಸ್ಲಿಂ ಮುಖಂಡ ಸಿ.ಎಂ.ಇಬ್ರಾಹಿಂ ಮಾತನಾಡಿ, ಮುಸ್ಲಿಂ ಸಮಾಜದ ಪರವಾಗಿ ಮಸೀದಿಗಳು ನಮಾಜ್ ನಿಲ್ಲಿಸಿರುವುದು ಇತಿಹಾಸದಲ್ಲಿ ಇದೇ ಮೊದಲು. ದೆಹಲಿ ಜಮಾತ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದವರ ಆತಂಕದ ಬಗ್ಗೆ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದ್ದು, ಯಾರೂ ಗಾಬರಿ ಆಗಬೇಕಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿರುವುದರಿಂದ‌ ದೆಹಲಿಗೆ ಹೋಗಿ ಬಂದ ಎಲ್ಲರನ್ನೂ ವೈದ್ಯಕೀಯ ಪರೀಕ್ಷೆಗೊಳಪಡಿಸಲಿ. ಇದಕ್ಕೆ ನಾವುಗಳು ಸಹ ಸಹಕಾರ ಕೊಡುತ್ತೇವೆ. ಸರ್ಕಾರಕ್ಕೆ ಈ ವಿಚಾರದಲ್ಲಿ ನಮ್ಮ ಸಮಾಜದ ಜನರು ಕೂಡ ಸಹಕಾರ ನೀಡಬೇಕು ಎಂದು ಮನವಿ ಮಾಡುವುದಾಗಿ ಹೇಳಿದರು.

ಮಸೀದಿಗಳಲ್ಲಿ ದಿನಕ್ಕೆ 5 ಬಾರಿ ಆಝಾನ್ ಕೂಗಲು ಯಾವುದೇ ತೊಂದರೆಯಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ ಯಾರು ಮಸೀದಿಗಳಿಗೆ ಬಂದು ನಮಾಜ್ ಮಾಡಬಾರದು. ತಮ್ಮ ತಮ್ಮ ಮನೆಯಲ್ಲೆ ನಮಾಜ್ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ನಿಜಾಮುದ್ದೀನ್ ಸಭೆಯಲ್ಲಿ ಭಾಗಿಯಾಗಿದ್ದ ಬೀದರ್ ನ ಜನರಲ್ಲಿ ಕೆಲವರದ್ದು ಇನ್ನೂ ವೈದ್ಯಕೀಯ ಪರೀಕ್ಷೆ‌ ಫಲಿತಾಂಶ ಬಂದಿಲ್ಲ. ಅವರನ್ನು‌ ಸಂಪೂರ್ಣ ಪರೀಕ್ಷೆ ಮಾಡಿಸುವುದಾಗಿ ಹೇಳಿದ್ದೇವೆ. ಪುಗ್ಸಟ್ಟೆ ಟೆಸ್ಟ್ ಮಾಡಿಸಿಕೊಳ್ಳುವುದಕ್ಕೆ ಏನಂತೆ? ಎಂದು ಎಂದಿನಂತೆ ತಮ್ಮ ಶೈಲಿಯಲ್ಲಿ ಮಾತನಾಡಿದ ಇಬ್ರಾಹಿಂ, ಯಾರ ಮೇಲೆ ಅನುಮಾನ ಇದೆ ಎಂದು ಹೇಳುತ್ತಾರೆಯೋ ಆ ಮುಸ್ಲಿಂ ಬಾಂಧವರೆಲ್ಲಾ ಟೆಸ್ಟ್ ಮಾಡಿಸಿಕೊಳ್ಳಲೇಬೇಕು. ತಾವು ಸಹ ಸಾಮೂಹಿಕ ನಮಾಜ್ ನಿಲ್ಲಿಸಿ ಸಹಕರಿಸುತ್ತಿದ್ದೇನೆ ಎಂದರು.
ಕೆಲವೆಡೆ ಮಾಂಸ ಮೀನು, ಮೊಟ್ಟೆ ಮಾರಾಟಕ್ಕೆ ಬಿಟ್ಟಿದ್ದಾರೆ, ಇನ್ನು ಕೆಲವೆಡೆ ಬಿಟ್ಟಿಲ್ಲ, ಹೀಗಾಗಿ ಮಾರಾಟಕ್ಕೆ ಅವಕಾಶ ಕೊಡಬೇಕು ಎಂದು ಸಭೆಯಲ್ಲಿ ಹೇಳಿದ್ದೇವೆ ಎಂದರು.

Related Stories

No stories found.

Advertisement

X
Kannada Prabha
www.kannadaprabha.com