ಮೋಡ ಮುಸುಕಿದ ವಾತಾವರಣದಲ್ಲೇ ಹಣತೆ ಬೆಳಗಲು ಸಜ್ಜಾದ ಜನತೆ

ಶನಿವಾರ ಸಂಜೆ ಗುಡುಗು ಸಿಡಿಲಿನ ಮಳೆ ಬಾಗಲಕೋಟೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಅಬ್ಬರಿಸಿ ಶಾಂತವಾಗಿದೆ. ಅದರ ಪರಿಣಾಮ ಭಾನುವಾರವೂ ಮುಂದುವರಿದು ದಿನವಿಡಿ ಮೋಡ ಮುಸುಕಿದ ವಾತಾವರಣವಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಾಗಲಕೋಟೆ: ಶನಿವಾರ ಸಂಜೆ ಗುಡುಗು ಸಿಡಿಲಿನ ಮಳೆ ಬಾಗಲಕೋಟೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಅಬ್ಬರಿಸಿ ಶಾಂತವಾಗಿದೆ. ಅದರ ಪರಿಣಾಮ ಭಾನುವಾರವೂ ಮುಂದುವರಿದು ದಿನವಿಡಿ ಮೋಡ ಮುಸುಕಿದ ವಾತಾವರಣವಿದೆ.

ಮೋಡ ಮುಸುಕಿದ ವಾತಾವರಣದಿಂದಾಗಿ ಕೊರೊನಾ ವೈರಸ್ ಆತಂಕದಲ್ಲಿರುವ ಜನತೆಯಲ್ಲಿ ಮತ್ತಷ್ಟು ಭೀತಿ ಉಂಟಾಗಿದೆ. ಬಿಸಿಲಿನ ತಾಪದಿಂದಲಾದರೂ ಕೊರೊನಾ ವೈರಸ್ ನಾಶವಾಗಲಿ ಎನ್ನುವ ಆಶಾಭಾವನೆಯಲ್ಲಿ ಜನತೆ ಇರುವಾಗಲೇ ವಾತಾವರಣದಲ್ಲಿನ ಬದಲಾವಣೆ ಸಾಕಷ್ಟು ಚಿಂತೆಗೀಡುಮಾಡಿದಂತಿದೆ.

ಸಂಜೆಯ ಹೊತ್ತಿಗೆ ಮಳೆಯಾಗುವ ಸೂಚನೆಗಳು ಕಾಣಿಸುತ್ತಿವೆ. ಮೋಡ ಮುಸುಕಿದ ವಾತಾವರಣದ ಜತೆಗೆ ಸಾಕಷ್ಟು ತಾಪವೂ ಇದೆ. ಏತನ್ಮಧ್ಯೆ ಜನತೆ ಕೊರೊನಾ ವೈರಸ್ ನಾಶವಾದರೆ ಸಾಕಪ್ಪಾ ಎಂದು ಪ್ರಧಾನಿ ಮೋದಿ ಅವರ ಮನವಿಗೆ ಸ್ಪಂದಿಸಲು ಸಜ್ಜಾಗುತ್ತಿದ್ದಾರೆ. 

ಇಂದು ರಾತ್ರಿ ಒಂಭತ್ತು ಗಂಟೆಗೆ ಮನೆಗಳ ಮುಂದೆ, ಮನೆಗಳ ಸುತ್ತ ಹಣತೆಗಳನ್ನು ಬೆಳಗಿಸಲು ಸಜ್ಜಾಗುತ್ತಿದ್ದಾರೆ. ಹಣತೆ ಕಾರ್ಯಕ್ರಮದ ಹಿನ್ನೆಲೆಯಲ್ಲಿಯೇ ಇಂದು ಮಾರುಕಟ್ಟೆಯಲ್ಲಿ ಹಣತೆಗಳ ಮಾರಾಟ ಕೂಡ ನಡೆದಿದೆ. 
ಕೊರೊನಾ ವೈರಸ್ ಭೀತಿಯಿಂದ ಕಂಗೆಟ್ಟು ಹೋಗಿರುವ ಬಹುತೇಕರ ಮನೆಗಳಲ್ಲಿ ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರೂ ಹಣತೆ ಬೆಳಗಲು ಸಿದ್ದರಾಗಿದ್ದಾರೆ. ಕೆಲ ಮನೆಗಳಲ್ಲಿ ಒಬ್ಬಬ್ಬರೋ ಒಂದೊಂದು ಹಣತೆ ಹಚ್ಚಲು ಸಜ್ಜಾಗಿದ್ದರೆ, ಇನ್ನೂ ಕೆಲವರು ಒಟ್ಟಾಗಿ ಬಾಲ್ಕನಿಗಳು, ಮನೆಯ ಮುಂದಿನ ವಕಾರ, ಆವರಣ ಗೋಡೆ ಮುಂಭಾಗಗಳಲ್ಲಿ ಹಣತೆ ಬೆಳಗಿಸುವ ಸಿದ್ದತೆ ಮಾಡಿಕೊಂಡಿದ್ದಾರೆ.

ಎಷ್ಟೆಲ್ಲ ಸಿದ್ದತೆಗಳ ಮಧ್ಯೆ ವಾತಾವರಣದಲ್ಲಿ ಬದಲಾವಣೆ ಕಾಣಿಸಿಕೊಂಡು ಆಗಸದಲ್ಲಿ ದಟ್ಟವಾದ ಮೋಡಗಳು ಮುಸುಕಿರುವುದು ಜನತೆಯ ಮನದಲ್ಲಿ ಆತಂಕ ಕಾಣಿಸಿಕೊಂಡಿದೆ. ಹಣತೆ ಬೆಳಗಿಸುವ ವೇಳೆ ಮಳೆ ಬಾರದಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಏಕಾದರೂ ಮೋಡ ಮುಸುಕಿದ ವಾತಾವರಣ ಸೃಷ್ಟಿಯಾಗಿದೆ? ಇನ್ನಷ್ಟು ದಿನ ಬಿಸಿಲು ಇರಬಾರದೇ ಎನ್ನುತ್ತಿರುವುದು ಸಾಮಾನ್ಯವಾಗಿದೆ.

ಈಗಾಗಲೇ ಜನತಾ ಕರ್ಫ್ಯೂವನ್ನು, ಜಾಗಟೆ ಕಾರ್ಯಕ್ರಮವನ್ನು ಕಟ್ಟು ನಿಟ್ಟಾಗಿ ಪಾಲಿಸಿರುವ ಜನತೆ ಹಣತೆ ಬೆಳಗಿಸಿ ಕೊರೊನಾ ಓಡಿಸಲು ಸಜ್ಜಾಗಿದ್ದಾರೆ. ಭಾನುವಾರ ರಾತ್ರಿ ೯ ರ ಕತ್ತಲೆಯಲ್ಲಿ ಬೆಳಗಲಿರುವ ಹಣತೆಯಿಂದಲಾದರೂ ಕೊರೊನಾ ಎನ್ನುವ ಮಹಾಮಾರಿ ತೊಲಗಲಿ. ಈ ವೇಳೆ ಮಳೆ ಬಾರದೆ ಇರಲಿ ಎಂದು ಒಂದೇ ಸಮನೆ ಜಪಿಸುತ್ತಿದ್ದಾರೆ.  ಪ್ರಧಾನಿಯವರ ಮನವಿಯ ಮೆರೆಗೆ ಇಂದು ರಾತ್ರಿ ೯ ಗಂಟೆಗೆ ಬಾಗಲಕೋಟೆ ಜಿಲ್ಲೆ ಸೇರಿದಂತೆ ದೇಶದಾದ್ಯಂತ ಒಂದೇ ಬಾರಿಗೆ ಹಣತೆಗಳು ಬೆಳಗಲಿದ್ದು, ಬದುಕಿನ ಕತ್ತಲೆ ಕಳೆದು ಬೆಳಕು ಮೂಡಲಿ ಎನ್ನುವ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ವಾತಾವರಣ ಕಂಡು ಬರಲಿದ್ದು, ಅದನ್ನು ಕಣ್ತುಂಬಿಕೊಂಡು ಕೊರೊನಾ ವೈರಸ್ ನಾಶಕ್ಕೆ ಜನತೆ ಸಂಕಲ್ಪ ಮಾಡುವ ಕಾಲದ ಕ್ಷಣಗಣನೆ ಆರಂಭಗೊಂಡಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಹಣತೆ ಕಾರ್ಯಕ್ರಮಗಳನ್ನು ಈಗಲೇ ಹೆಚ್ಚಿನ ಸ್ಪಂದನೆ ಸಿಕ್ಕುತ್ತಿರುವುದಕ್ಕೆ ಕಾರಣಗಳು ಇಲ್ಲದಿಲ್ಲ. ಬಾಗಲಕೋಟೆ ನಗರದಲ್ಲಿ ಕೊರೊನಾ ವೈರಸ್‌ನಿಂದ ವೃದ್ಧನೊಬ್ಬ ಮೃತಪಟ್ಟಿದ್ದಾನೆ. ಇದರಿಂದ ಜನತೆಯಲ್ಲಿ ಸಾಕಷ್ಟು ಆತಂಕ ಮನೆ ಮಾಡಿದೆ. ಅಷ್ಟೆ ಅಲ್ಲದೆ ಮೃತ ವೃದ್ಧನಿಗೆ ಕೊರೊನಾ ವೈರಸ್ ಹರಡಿದ್ದು ಹೇಗೆ ಎನ್ನುವ ಮೂಲ ಪತ್ತೆ ಆಗಿಲ್ಲ. ಇದರಿಂದಾಗಿ ಜನತೆ ಈಗಲೂ ಸಾಕಷ್ಟು ಭಯದಲ್ಲಿದ್ದಾರೆ. ಭಯ ನಿವಾರಣೆ, ಕೊರೊನಾ ನಾಶಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹಣತೆ ಬೆಳಗಿಸಲು ಮುಂದಾಗಿದ್ದಾರೆ.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com