ಕತ್ರಿಗುಪ್ಪೆ ವಾರ್ಡ್: ಅಗತ್ಯ ವಸ್ತುಗಳ ಹೋಮ್ ಡೆಲಿವರಿ ಸೇವೆಗೆ ಸಂಸದ ತೇಜಸ್ವೀ ಸೂರ್ಯ ಚಾಲನೆ

ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವೀ ಸೂರ್ಯ ನೇತೃತ್ವದಲ್ಲಿ ಬಸವನಗುಡಿ ಶಾಸಕರಾದ  ರವಿ ಸುಬ್ರಹ್ಮಣ್ಯ ಮತ್ತು ಕತ್ರಿಗುಪ್ಪೆ ವಾರ್ಡ್ ಕಾರ್ಪೊರೇಟರ್ ಸಂಗಾತಿ ವೆಂಕಟೇಶ್ ಸಹಕಾರದೊಂದಿಗೆ 'ಕೋವಿಡ್ 19 ಟಾಸ್ಕ್ ಫೋರ್ಸ್ ಹೋಮ್ ಡೆಲಿವರಿ' ಸೇವೆ ಮತ್ತು ಸಹಾಯವಾಣಿಯನ್ನು ಆರಂಭಿಸಲಾಗಿದೆ.
ಸಂಸದ ತೇಜಸ್ವೀ ಸೂರ್ಯ
ಸಂಸದ ತೇಜಸ್ವೀ ಸೂರ್ಯ

ಬೆಂಗಳೂರು: ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ ನೇತೃತ್ವದಲ್ಲಿ ಬಸವನಗುಡಿ ಶಾಸಕರಾದ  ರವಿ ಸುಬ್ರಹ್ಮಣ್ಯ ಮತ್ತು ಕತ್ರಿಗುಪ್ಪೆ ವಾರ್ಡ್ ಕಾರ್ಪೊರೇಟರ್ ಸಂಗಾತಿ ವೆಂಕಟೇಶ್ ಸಹಕಾರದೊಂದಿಗೆ 'ಕೋವಿಡ್ 19 ಟಾಸ್ಕ್ ಫೋರ್ಸ್ ಹೋಮ್ ಡೆಲಿವರಿ' ಸೇವೆ ಮತ್ತು ಸಹಾಯವಾಣಿಯನ್ನು ಆರಂಭಿಸಲಾಗಿದೆ.

ಅಗತ್ಯ ದಿನಬಳಕೆಯ ಸಾಮಗ್ರಿಗಳು,ದಿನಸಿ,ತರಕಾರಿ,ಔಷಧ ಸಾಮಗ್ರಿಗಳನ್ನು ನೇರವಾಗಿ ಮನೆ ಬಾಗಿಲಿಗೆ ತಲುಪಿಸುವ ಹೋಮ್ ಡೆಲಿವರಿ ಸೇವೆ ಇದಾಗಿದ್ದು, ಪ್ರಸ್ತುತ ಪ್ರಾಯೋಗಿಕ ಹಂತದಲ್ಲಿ ಕತ್ರಿಗುಪ್ಪೆ ವಾರ್ಡ್ ನಲ್ಲಿ ಮಾತ್ರ ಲಭ್ಯವಿರಲಿದೆ. 

ಏಪ್ರಿಲ್ 14 ರ ತನಕ ಲಾಕ್ ಡೌನ್ ಸಂದರ್ಭದಲ್ಲಿ ನಾಗರಿಕರು ತಮ್ಮ ಅಗತ್ಯ ವಸ್ತುಗಳನ್ನು ಕೇವಲ ಹೋಮ್ ಡೆಲಿವರಿ ಸೇವೆಯ ಮುಖಾಂತರ ಪಡೆಯಲು ಸೂಚಿಸಲಾಗಿದೆ. ಅಂಗಡಿ ಮಾಲೀಕರು ಸಹ ಹೋಮ್ ಡೆಲಿವರಿ ಸೇವೆಯ ಮುಖಾಂತರ ಮಾತ್ರ ತಮ್ಮ ಅಂಗಡಿಯ ವಸ್ತುಗಳನ್ನು ಮಾರಲು ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ.

ನಾಗರಿಕರು ತಮ್ಮ ದಿನಬಳಕೆಯ ಅಗತ್ಯ ವಸ್ತುಗಳನ್ನು ಪಡೆಯಲು ತಮ್ಮ ಸಮೀಪದ ಅಂಗಡಿಗೆ ಕರೆ ಮಾಡಿ ಹೋಮ್ ಡೆಲಿವರಿ ಸೇವೆಯ ಮುಖಾಂತರ ಮಾತ್ರ ಸಾಮಾನುಗಳನ್ನು ಪಡೆಯಲು ವ್ಯವಸ್ಥೆ ಮಾಡಿಕೊಳ್ಳಬೇಕು. ಅಥವಾ ಆನ್ ಲೈನ್ ಹೋಮ್ ಡೆಲಿವರಿ ಸೇವೆ ಪೂರೈಸುವ ಬಿಗ್ ಬಾಸ್ಕೆಟ್, ಗ್ರೋಫರ್ಸ್ ನಂತಹ ಹೋಮ್ ಡೆಲಿವರಿ ಸೇವೆಯನ್ನು ಸಹ ಬಳಸಿಕೊಳ್ಳಬಹುದು.

ಟಾಸ್ಕ್ ಫೋರ್ಸ್ ನ ಸಹಾಯವಾಣಿ ಸಂಖ್ಯೆ 080 61914960 ಗೆ ಕರೆ ಮಾಡಿ ತಮ್ಮ ಅಗತ್ಯದ ಸಾಮಾನುಗಳ ಪಟ್ಟಿಯನ್ನು ನೀಡಿದಲ್ಲಿ, ನಮ್ಮ ಸ್ವಯಂ ಸೇವಕರು ಸಂಬಂಧಪಟ್ಟ ಅಂಗಡಿಯಿಂದ ಗ್ರಾಹಕರ ಮನೆಗೆ ನೇರವಾಗಿ ದಿನಬಳಕೆ ಸಾಮಾನುಗಳನ್ನು ತಲುಪಿಸುತ್ತಾರೆ.

ಅಥವಾ 080 61914960 ಈ ಸಂಖ್ಯೆಯನ್ನು ಗ್ರಾಹಕರು ತಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿ ಇಟ್ಟುಕೊಂಡು ವಾಟ್ಸಾಪ್ ಮುಖಾಂತರ 'Hi' ಎಂದು ಸಂದೇಶ ಕಳುಹಿಸಬೇಕು. ನಂತರ ಗ್ರಾಹಕರ ಮೊಬೈಲ್ ಗೆ ಕನ್ನಡದಲ್ಲಿ ಮಾಹಿತಿಯನ್ನು ಒಳಗೊಂಡ ಧ್ವನಿ ಸಂದೇಶವನ್ನು ರವಾನಿಸಲಾಗುತ್ತದೆ. ಧ್ವನಿ ಸಂದೇಶವನ್ನು ಸಂಪೂರ್ಣ ಆಲಿಸಿ, ಗ್ರಾಹಕರು ತಮ್ಮ ಹೆಸರು ಮತ್ತು ಸಂಪೂರ್ಣ ವಿಳಾಸವನ್ನು ಕಳುಹಿಸಬೇಕು.(ಗೂಗಲ್ ಮ್ಯಾಪ್ಸ್ ಸಹಾಯದೊಂದಿಗೆ ವಿಳಾಸ ಶೇರ್ ಮಾಡಬಹುದು)

ನಂತರ ತಮ್ಮ ಅಗತ್ಯ ವಸ್ತುಗಳನ್ನು ಟೈಪ್ ಮಾಡಿ ಕಳುಹಿಸಬೇಕು. ಅಥವಾ ಹಾಳೆಯಲ್ಲಿ ಅಗತ್ಯ ವಸ್ತುಗಳನ್ನು ಬರೆದು, ಅದರ ಫೋಟೋವನ್ನು ಸಹಾಯವಾಣಿ ಸಂಖ್ಯೆಗೆ ಕಳುಹಿಸಬೇಕು.

ಔಷಧ ಸಾಮಗ್ರಿಗಳನ್ನು ಪಡೆಯಬಯಸಿದಲ್ಲಿ ಡಾಕ್ಟರ್ ರಿಂದ ಪಡೆದ ಪ್ರೀಸ್ಕ್ರಿಪ್ಶನ್ ಅನ್ನು ಲಗತ್ತಿಸಲು ಸೂಚಿಸಲಾಗಿದೆ.

ತದನಂತರ ಗ್ರಾಹಕರಿಗೆ ತಮ್ಮ ಅಗತ್ಯ ವಸ್ತುಗಳ ಕೋರಿಕೆಯ ಸಂದೇಶ ತಲುಪುತ್ತದೆ. ಆರ್ಡರ್ ನೀಡಿದ ನಂತರ ಸಂಬಂಧಪಟ್ಟ ಅಂಗಡಿಯವರು/ ಡೆಲಿವರಿ ಸಹಾಯಕರು ಕರೆ ಮಾಡಿ ಬಿಲ್ ಮೊತ್ತ ತಿಳಿಸುತ್ತಾರೆ. ಒಮ್ಮೆ ಆರ್ಡರ್ ಒಪ್ಪಿಗೆ ನೀಡಿದಲ್ಲಿ ಸಂಪೂರ್ಣ ಮೊತ್ತ ವನ್ನು ತಿಳಿಸುತ್ತಾರೆ. ನಂತರ ಗ್ರಾಹಕರು  ಸಲ್ಲಿಸಿರುವ ಆರ್ಡರ್ ಮೇರೆಗೆ ವಸ್ತುಗಳನ್ನು ಮನೆಗೆ ತಲುಪಿಸುತ್ತಾರೆ. ಬಿಲ್ ಪಾವತಿ ಮಾಡಿ ಸಾಮಾನುಗಳನ್ನು ಪಡೆಯತಕ್ಕದ್ದು.

ಒಂದು ಕುಟುಂಬಕ್ಕೆ ವಾರಕ್ಕೆ ಎರಡು ಸಲ ಮಾತ್ರ ಹೋಮ್ ಡೆಲಿವರಿ ಸೇವೆಯ ಸೌಲಭ್ಯ ಒದಗಿಸಲಾಗುತ್ತದೆ.ಯಾವುದೇ ಕಾರಣಕ್ಕೂ ಅಗತ್ಯ ದಿನಬಳಕೆಯ ವಸ್ತುಗಳನ್ನು ಪಡೆಯಲು ನಾಗರಿಕರು ಹೊರಗಡೆ ಬರುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಈ ಹೋಮ್ ಡೆಲಿವರಿ ಸೇವೆಯ ಆರಂಭಿಸಲು ಸಹಕಾರ ನೀಡಿರುವ ಬಸವನಗುಡಿ ಶಾಸಕರಾದ ರವಿ ಸುಬ್ರಹ್ಮಣ್ಯ, ಕತ್ರಿಗುಪ್ಪೆ ವಾರ್ಡ್ ನ ಕಾರ್ಪೊರೇಟರ್  ಸಂಗಾತಿ ವೆಂಕಟೇಶ್ ರವರನ್ನು ಸಂಸದರಾದ ಶ್ರೀ ತೇಜಸ್ವೀ ಸೂರ್ಯ ಶ್ಲಾಘಿಸಿದರು. ಪ್ರಸ್ತುತ ಪ್ರಾಯೋಗಿಕ ಹಂತದಲ್ಲಿ ಕತ್ರಿಗುಪ್ಪೆ ವಾರ್ಡ್ ನಲ್ಲಿ ಜಾರಿಗೆ ತಂದಿರುವ ಹೋಮ್ ಡೆಲಿವರಿ ಸೇವೆಯನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಾದ್ಯಂತ ವಿಸ್ತರಿಸುವ ಯೋಚನೆಯಿದೆ ಎಂದು ಇದೇ ಸಂದರ್ಭದಲ್ಲಿ ಸಂಸದರು ತಿಳಿಸಿರುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com