ಬೆಂಗಳೂರು: ಸ್ಯಾನಿಟೈಸರ್‌ಗೆ ಬಳಸುವ ಅಪಾಯಕಾರಿ ರಾಸಾಯನಿಕ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ನಕಲಿ ಕೈ ಸ್ಯಾನಿಟೈಸರ್ ತಯಾರಕರಿಗೆ ರಾಸಾಯನಿಕಗಳನ್ನು ಮಾರಾಟ ಮಾಡುತ್ತಿದ್ದ 53 ವರ್ಷದ ವ್ಯಕ್ತಿಯನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೋವಿಡ್‌ 19 ಸೋಂಕು ಹರಡುವುದನ್ನು ತಡೆಯಲು ಬಳಸುವ ಸ್ಯಾನಿಟೈಸರ್‌ಗೆ ಹೆಚ್ಚಿನ ಬೇಡಿಕೆ ಇರುವುದರ ಲಾಭ ಪಡೆದು ನಕಲಿ ಸ್ಯಾನಿಟೈಸರ್‌ಗೆ ತಯಾರಿಸುವವರಿಗೆ ಅಪಾಯಕಾರಿ ಸ್ಫೋಟಕ ರಾಸಾಯನಿಕ ವಸ್ತುಗಳನ್ನು ಶೇಖರಿಸಿ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಿಟಿಎಂ ಲೇಔಟ್‌ನ 8ನೇ ಮುಖ್ಯ ರಸ್ತೆಯ ನಿವಾಸಿ ರೇಣುಕಾಪ್ರಸಾದ್ (53)ಬಂಧಿತ ಆರೋಪಿ. ಈತನಿಂದ 400 ಲೀಟರ್ ಐಸೋಪ್ರೊಪೈಲ್ ಆಲ್ಕೋಹಾಲ್, 210 ಲೀಟರ್ ಟಾಲಿನ್, 100 ಲೀಟರ್ ಟರ್ಪಂಟೈನ್, 600 ಲೀಟರ್ ಅಸಿಟೋನ್, 50 ಲೀಟರ್ ಬೆಂಜೈಲ್ ಆಲ್ಕೋಹಾಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಸುಧಾಮನಗರ 1ನೇ ಮುಖ್ಯರಸ್ತೆ, ಕಟ್ಟಡವೊಂದರಲ್ಲಿ ಯಾವುದೇ ಪರವಾನಿಗೆ ಪಡೆಯದೆ ಐಸೋಪ್ರೊಪೈಲ್ ಆಲ್ಕೋಹಾಲ್ ಇನ್ನಿತರ ಸ್ಫೋಟಕ ರಾಸಾಯನಿಕಗಳನ್ನು ಸಂಗ್ರಹಿಸಿಟ್ಟಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ.

ಆರೋಪಿಯು ಸ್ಫೋಟಕ ರಾಸಾಯನಿಕಗಳಾದ ನೈಟ್ರೋ ಬೆಂಜಿನ್, ಸಿಲಿಕಾನ್ ಆಯಿಲ್, ಲಿಕ್ವಿಡ್ ಪ್ಯಾರಫಿನ್ ಗ್ಲಿಸರಿನ್, ಮಿಥಿಲಿನ್ ಕ್ಲೋರೈಡ್, ಕ್ಯಾಸ್ಟ್ರಾಕ್ಸ್, ಪ್ರೊಪಿಲಿನ್ ಗ್ಲೈಕಾಲ್, ಪಾಲಿ ಎಥಿಲಿನ್ ಗ್ಲೈಕಾಲ್ ಇನ್ನಿತರ ಅಪಾಯಕಾರಿ ಸ್ಫೋಟಕಗಳನ್ನು ಡ್ರಂಗಳಲ್ಲಿ ಶೇಖರಿಸಿ ಇಟ್ಟುಕೊಂಡಿದ್ದನು.

ಆರೋಪಿಯು ಕೊರೊನಾ ವೈರಸ್ ನಿರ್ಮೂಲನೆಗೆ ಬಳಸುವ ಸ್ಯಾನಿಟೈಸರ್ ಬೇಡಿಕೆ ಹೆಚ್ಚಾಗಿರುವ ಲಾಭ ಪಡೆದು ನಕಲಿ ಸ್ಯಾನಿಟೈಸರ್ ತಯಾರು ಮಾಡುವವರಿಗೆ ಈ ರಾಸಾಯನಿಕಗಳನ್ನು ಪೂರೈಸುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಈ ಬಗ್ಗೆ ವಿಲ್ಸನ್ ಗಾರ್ಡ್‌ನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com