ಚಾಮರಾಜನಗರದಿಂದ ದೆಹಲಿಯ ಜಮಾತ್ ಸಭೆಗೆ 80 ಮಂದಿ ಹೋಗಿದ್ರು: ಜಿಲ್ಲಾಧಿಕಾರಿ ರವಿ

ಮೊದಲು 12 ಮಂದಿ, ಬಳಿಕ ಇಬ್ಬರು ದೆಹಲಿಯ ನಿಜಾಮುದ್ದೀನ್​ ನಲ್ಲಿ ನಡೆದ ತಬ್ಲಿಘಿ ಜಮಾತ್ ಸಭೆಗೆ ತೆರಳಿದ್ದರು ಎಂದುಕೊಳ್ಳಲಾಗಿತ್ತು.
ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದವರು
ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದವರು

ಚಾಮರಾಜನಗರ: ಮೊದಲು 12 ಮಂದಿ, ಬಳಿಕ ಇಬ್ಬರು ದೆಹಲಿಯ ನಿಜಾಮುದ್ದೀನ್​ ನಲ್ಲಿ ನಡೆದ ತಬ್ಲಿಘಿ ಜಮಾತ್ ಸಭೆಗೆ ತೆರಳಿದ್ದರು ಎಂದುಕೊಳ್ಳಲಾಗಿತ್ತು. ಆದರೆ, ದೆಹಲಿಯ ಧಾರ್ಮಿಕ ಸಭೆಗೆ ಜಿಲ್ಲೆಯಿಂದ ಒಟ್ಟು 80 ಮಂದಿ ತೆರಳಿದ್ದರು ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಡಾ‌. ಎಂ.ಆರ್‌.ರವಿ ಮಾಹಿತಿ ಕೊಟ್ಟಿದ್ದಾರೆ.

ಜಿಲ್ಲಾಡಳಿತ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲಿಗೆ ರಾಜ್ಯ ಸರ್ಕಾರ ನೀಡಿದ್ದು 12 ಮಂದಿಯ ಪಟ್ಟಿ ಮಾತ್ರ. ಅದಾದ ಬಳಿಕ ಸಾರ್ವಜನಿಕರು, ಇನ್ನಿತರ ಮೂಲಗಳ ಮೂಲಕ ಮಾಹಿತಿ ಕಲೆಹಾಕಿದಾಗ ಜಿಲ್ಲೆಯಿಂದ ಒಟ್ಟು 80 ಮಂದಿ ತೆರಳಿದ್ದರು. ಈ ಧಾರ್ಮಿಕ ಸಭೆ ಒಂದೇ ದಿನ, ಒಂದೇ ಕಡೆ ನಡೆದಿಲ್ಲ‌ ಎಂದ ಅವರು, ಸರ್ಕಾರದ ಸೂಚನೆಯಂತೆ ತಬ್ಲಿಘಿ ಜಮಾತ್​ಗೆ​ ಸಂಬಂಧಪಟ್ಟಂತೆ ಎಲ್ಲರನ್ನೂ ಕ್ವಾರಂಟೈನ್​​​​ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಿಂದ 4-5 ಗ್ರೂಪ್​ಗಳ ಮೂಲಕ ರಾಮಾಪುರ, ನಾಗವಳ್ಳಿ, ಚಾಮರಾಜನಗರದ ಗಾಳಿಪುರ ಬಡಾವಣೆಯಿಂದ ಜಮಾತ್​​ಗೆ ತೆರಳಿದ 80 ಮಂದಿಯ ರಕ್ತದ ಮಾದರಿ, ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗುವುದು. ಇಬ್ಬರು ವ್ಯಕ್ತಿಗಳ ಪರೀಕ್ಷೆಯ ವರದಿ ನಿರೀಕ್ಷಿಸಲಾಗಿದೆ ಎಂದರು.

ಜುಬಿಲಿಯೆಂಟ್ ಹಾಗೂ ತಬ್ಲಿಘಿ ಜಮಾತ್​​ಗೆ ಸಂಬಂಧಿಸಿದ ಒಟ್ಟು 111 ಮಂದಿ ಕ್ವಾರಂಟೈನ್​ನಲ್ಲಿದ್ದಾರೆ. ಯಾರಿಗೂ ರೋಗದ ಲಕ್ಷಣ ಇಲ್ಲವಾದ್ದರಿಂದ ಜಿಲ್ಲೆಯ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
-ಗುಳಿಪುರ ನಂದೀಶ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com